ಮತದಾರರ ನೋಂದಣಿ ದಿನಾಂಕ ವಿಸ್ತರಣೆಗೆ ಆಗ್ರಹ

| Published : Nov 05 2025, 01:30 AM IST

ಸಾರಾಂಶ

ಪದವೀಧರ ಮತದಾರರ ನೋಂದಣಿ ದಿನಾಂಕವನ್ನು ಚುನಾವಣಾ ಆಯೋಗ ವಿಸ್ತರಿಸಬೇಕೆಂದು ತಿಪಟೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಮಾಜಿ ಅಧ್ಯಕ್ಷ ತೀರ್ಥಕುಮಾರ್ ಆಗ್ರಹಿಸಿದ್ದಾರೆ.

ಕನ್ನಡಪ್ರಭವಾರ್ತೆ ತುರುವೇಕೆರೆ

ಪದವೀಧರ ಮತದಾರರ ನೋಂದಣಿ ದಿನಾಂಕವನ್ನು ಚುನಾವಣಾ ಆಯೋಗ ವಿಸ್ತರಿಸಬೇಕೆಂದು ತಿಪಟೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಮಾಜಿ ಅಧ್ಯಕ್ಷ ತೀರ್ಥಕುಮಾರ್ ಆಗ್ರಹಿಸಿದ್ದಾರೆ.

ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪದವೀಧರ ಮತದಾರರನ್ನು ಮತದಾರ ಪಟ್ಟಿಗೆ ನೋಂದಾವಣೆ ಮಾಡಿಕೊಳ್ಳಲು ತಾಲೂಕಿನ ವಿವಿಧ ಇಲಾಖಾ ಗೆಜೆಟೆಡ್ ಆಫೀಸರ್ ಗಳನ್ನು ಈ ಹಿಂದೆ ನೇಮಕ ಮಾಡಲಾಗುತ್ತಿತ್ತು. ಆದರೆ ಈ ಬಾರಿ ತಹಸೀಲ್ದಾರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಮಾತ್ರ ನೇಮಿಸಿದೆ. ಇದರಿಂದ ಮತದಾರ ನೋಂದಣಿ ಪ್ರಕ್ರಿಯೆ ಕುಂಠಿತವಾಗಿದೆ. ತಹಸೀಲ್ದಾರ್ ಮತ್ತು ಕ್ಷೇತ್ರಶಿಕ್ಷಣಾಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಆಗುತ್ತಿಲ್ಲ. ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಲು ಆಗದೇ ಸಮಸ್ಯೆ ಆಗಿದೆ. ಅನಿವಾರ್ಯವಾಗಿ ಹೊರಗಡೆ ಹೋದಲ್ಲಿ ನೋಂದಣಿ ಮಾಡಿಸಲು ಬರುವ ಪದವೀಧರರಿಗೆ ತೊಂದರೆಯಾಗುತ್ತಿದೆ. ಈ ತೊಂದರೆಯಿಂದಾಗಿ ತಿಪಟೂರು, ತುರುವೇಕೆರೆ. ಗುಬ್ಬಿ, ಚಿಕ್ಕನಾಯಕನಹಳ್ಳಿ, ಕುಣಿಗಲ್ ಸೇರಿದಂತೆ ಇನ್ನಿತರ ತಾಲೂಕುಗಳಲ್ಲಿ ನೋಂದಣಿ ಕಡಿಮೆ ಪ್ರಮಾಣದಲ್ಲಿ ಆಗಿದೆ ಎಂದು ತೀರ್ಥಕುಮಾರ್ ದೂರಿದರು. ನಿರೀಕ್ಷಿತ ಮಟ್ಟದಲ್ಲಿ ನೋಂದಣಿ ಆಗದಿರುವ ಹಿನ್ನೆಲೆಯಲ್ಲಿ ನ 6 ಕ್ಕೆ ಅಂತ್ಯವಾಗಲಿದ್ದ ನೋಂದಣಿ ಪ್ರಕ್ರಿಯೆ ದಿನಾಂಕವನ್ನು ಮುಂದೂಡಬೇಕು ಅಲ್ಲದೇ ಹೆಚ್ಚುವರಿಯಾಗಿ ವಿವಿಧ ಇಲಾಖೆಗಳಲ್ಲಿ ಇರುವ ಗೆಜೆಟೆಡ್ ಅಧಿಕಾರಿಗಳಿಗೂ ನೋಂದಣಿ ಮಾಡಿಕೊಳ್ಳುವ ಅಧಿಕಾರವನ್ನು ನೀಡಬೇಕೆಂದು ಅವರು ಆಗ್ರಹಿಸಿದರು. ಇಲ್ಲಿಯ ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೇಡ್ 2 ತಹಸೀಲ್ದಾರ್ ರವರು ನೋಂದಣಿ ಪ್ರಕ್ರಿಯೆಗೆ ಬರುವ ಪದವೀಧರರೊಂದಿಗೆ ಅಸಭ್ಯವಾಗಿ ಮತ್ತು ಉದ್ದಟತನದಿಂದ ವರ್ತಿಸುತ್ತಾರೆ. ಪದವೀಧರರ ಸಮಸ್ಯೆಯನ್ನು ಕೇಳುವ ವ್ಯವಧಾನ ಆ ಅಧಿಕಾರಿಗೆ ಇಲ್ಲದಾಗಿದೆ. ಅವರು ತಾವು ಜನ ಸೇವಕರು ಎಂಬುದನ್ನು ಮರೆತಿದ್ದಾರೆ. ಪದವೀಧರರು ನೋಂದಣಿಗೆ ಬಂದ ವೇಳೆ ಸೌಜನ್ಯವಾಗಿ ವರ್ತಿಸುತ್ತಿಲ್ಲ. ಅಲ್ಲದೇ ಅವರಿಗೆ ಸಮಯವನ್ನೂ ಸಹ ನೀಡದೇ ಅಗೌರವಿಸುತ್ತಾರೆ. ಈ ಸಂಬಂಧ ತಹಸೀಲ್ದಾರ್ ರವರ ಗಮನಕ್ಕೆ ತರಲಾಗಿದೆ. ಮುಂದಾದರೂ ಗ್ರೇಡ್ 2 ತಹಸೀಲ್ದಾರ್ ರವರು ಗೌರವಯುತವಾಗಿ ವರ್ತಿಸದಿದ್ದಲ್ಲಿ ಹೋರಾಟ ಮಾಡುವುದಾಗಿ ತೀರ್ಥಕುಮಾರ್ ಎಚ್ಚರಿಕೆ ನೀಡಿದ್ದಾರೆ. ಪ್ರತಿ ಚುನಾವಣೆ ವೇಳೆಯೂ ಎಲ್ಲಾ ಪದವೀಧರರು ತಮ್ಮ ಹೆಸರನ್ನು ಮತದಾರ ಪಟ್ಟಿಯಲ್ಲಿ ನೋಂದಣಿ ಮಾಡಿಸಬೇಕೆನ್ನುವ ವ್ಯವಸ್ಥೆಯನ್ನು ರದ್ದು ಮಾಡಬೇಕು. ಒಮ್ಮೆ ನೋಂದಣಿ ಮಾಡಿಸಿದಲ್ಲಿ ಅವರ ಜೀವಮಾನ ಪರ್ಯಂತ ಅದೇ ನೋಂದಣಿ ಮುಂದುವರೆಸುವಂತೆ ಕ್ರಮ ಕೈಗೊಳ್ಳಬೇಕು. ಈ ಕುರಿತು ನ್ಯಾಯಾಲಯದ ಮೊರೆ ಹೊಕ್ಕು ಚುನಾವಣಾ ಆಯೋಗಕ್ಕೆ ಸೂಕ್ತ ಸೂಚನೆ ನೀಡುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದೂ ಸಹ ತೀರ್ಥಕುಮಾರ್ ತಿಳಿಸಿದರು. ಈ ಸಂದರ್ಭಧಲ್ಲಿ ಟಿ.ಶಿವಾನಂದ್, ಎಸ್.ಕಂಚೀಪತಿ, ತಾಲೂಕು ಕಾಡುಗೊಲ್ಲರ ಸಂಘದ ಪ್ರಧಾನ ಕಾರ್ಯದರ್ಶಿ ಸೋಮೇನಹಳ್ಳಿ ರವಿ, ಜುಂಜೇಗೌಡ, ಕೆ.ಎಸ್.ವಿನಯ್ ಕುಮಾರ್ ಉಪಸ್ಥಿತರಿದ್ದರು.