ರೆಡ್ಡಿ ಭವನ ನಿರ್ಮಾಣಕ್ಕೆ ಭೂಮಿ ಖರೀದಿ: ಪುರುಷೋತ್ತಮ ರೆಡ್ಡಿ

| Published : Oct 23 2024, 12:52 AM IST

ಸಾರಾಂಶ

ರೆಡ್ಡಿ ಭವನ ನಿರ್ಮಾಣಕ್ಕಾಗಿ ಒಂದು ಎಕರೆ ಭೂಮಿ ಖರೀದಿಸಿದ್ದು, ಸಮಾಜದ ಶ್ರೇಯೋಭಿವೃದ್ಧಿಗೆ ಸಚಿವರು, ಶಾಸಕರು ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ.

ಹೇಮ ವೇಮ ಟ್ರಸ್ಟ್ ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷ ಪುರುಷೋತ್ತಮರೆಡ್ಡಿ ಹೇಳಿಕೆ

ಕನ್ನಡಪ್ರಭ ವಾರ್ತೆ ಕನಕಗಿರಿ

ರೆಡ್ಡಿ ಭವನ ನಿರ್ಮಾಣಕ್ಕಾಗಿ ಒಂದು ಎಕರೆ ಭೂಮಿ ಖರೀದಿಸಿದ್ದು, ಸಮಾಜದ ಶ್ರೇಯೋಭಿವೃದ್ಧಿಗೆ ಸಚಿವರು, ಶಾಸಕರು ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಮ-ವೇಮ ರೆಡ್ಡಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಪುರುಷೋತ್ತಮರೆಡ್ಡಿ ಹೇಳಿದರು.

ಭಾನುವಾರ ಪಟ್ಟಣದ ಬಸವಶ್ರೀ ಇಂಡೇನ್ ಗ್ಯಾಸ್ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಟ್ರಸ್ಟ್ ಪದಾಧಿಕಾರಿಗಳ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಟ್ಟಣದ ಸರ್ಕಾರಿ ಆಸ್ಪತ್ರೆ ಹಿಂಭಾಗದಲ್ಲಿ ಒಂದು ಎಕರೆ ಭೂಮಿ ಟ್ರಸ್ಟ್ ಹೆಸರಿನಲ್ಲಿ ಖರೀದಿಸಲಾಗಿದ್ದು, ರೆಡ್ಡಿ ಭವನ ನಿರ್ಮಿಸುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಮಾಜದ ಸಚಿವರು ಹಾಗೂ ಶಾಸಕರನ್ನು ಸಂಪರ್ಕಿಸಿದ್ದು, ಕಟ್ಟಡ ನಿರ್ಮಾಣಕ್ಕೆ ಧನ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಸ್ಥಳೀಯ ಶಾಸಕ, ಸಚಿವರಾಗಿರುವ ಶಿವರಾಜ ತಂಗಡಗಿಯವರನ್ನು ಭೇಟಿ ಮಾಡಿ ಭವನ ನಿರ್ಮಾಣಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಹಾಲಿ ಟ್ರಸ್ಟ್ ಪದಾಧಿಕಾರಿಗಳೇ ಮುಂದುವರೆಯಲಿ:

ಟ್ರಸ್ಟ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ ಸದ್ಯಕ್ಕೆ ಬೇಡ. ಮುಂದಿನ ದಿನಮಾನಗಳಲ್ಲಿ ಹೊಸ ಪದಾಧಿಕಾರಿಗಳ ನೇಮಕಕ್ಕೆ ಮುಂದಾಗೋಣ. ಭೂಮಿ ಖರೀದಿಸಿದ್ದು, ದಾಖಲಾತಿ ಸರಿಪಡಿಸಿಕೊಳ್ಳುವ ಮೂಲಕ ಸರ್ಕಾರದ ಅನುದಾನ ಪಡೆಯಲು ಮುಂದಾಗೋಣ. ಈ ಮೊದಲಿದ್ದ ಪದಾಧಿಕಾರಿಗಳೇ ಮುಂದುವರೆಯಲಿ ಎಂದು ಸಮಾಜದ ಹಿರಿಯರು ಹಾಗೂ ಟ್ರಸ್ಟ್ ಸದಸ್ಯರಿಂದ ಅಭಿಪ್ರಾಯ ವ್ಯಕ್ತವಾಯಿತು.

ಐಟಿಐ ಕಾಲೇಜಿನ ಜೆಟಿಒ ಬಿ. ವೆಂಕಟೇಶರೆಡ್ಡಿ ಮಾತನಾಡಿದರು.

ಈ ವೇಳೆ ಟ್ರಸ್ಟ್ ಉಪಾಧ್ಯಕ್ಷ ಹನುಮಂತರೆಡ್ಡಿ ಮಹಲಿನಮನಿ, ಪ್ರಮುಖರಾದ ನಾಗನಗೌಡ ಪಾಟೀಲ್, ಉಮೇಶ ದೇವರೆಡ್ಡಿ, ಕನಕರೆಡ್ಡಿ ಕೆರಿ, ವಿಶ್ವನಾಥರೆಡ್ಡಿ ಓಣಿಮನಿ, ಜಯಪ್ರಕಾಶರೆಡ್ಡಿ ಮಾದಿನಾಳ, ವೆಂಕಾರೆಡ್ಡಿ ಕೆರಿ, ತಿಪ್ಪಾರೆಡ್ಡಿ ಹುಲಿಹೈದರ, ಯಂಕಾರೆಡ್ಡಿ ಓಣಿಮನಿ, ಜಯರಾಮರೆಡ್ಡಿ ಬಿ., ರವೀಂದ್ರರೆಡ್ಡಿ ಮಾದಿನಾಳ ಸೇರಿದಂತೆ ಇತರರಿದ್ದರು.