ಕ್ಷೇತ್ರದಲ್ಲಿ ವಾರಕ್ಕೆ ಎರಡು ದಿನ ಜನಸ್ಪಂದನ ಸಭೆ: ಉಸ್ತುವಾರಿ ಸಚಿವ ಮಂಕಾಳ ವೈದ್ಯ

| Published : Oct 23 2024, 12:52 AM IST

ಕ್ಷೇತ್ರದಲ್ಲಿ ವಾರಕ್ಕೆ ಎರಡು ದಿನ ಜನಸ್ಪಂದನ ಸಭೆ: ಉಸ್ತುವಾರಿ ಸಚಿವ ಮಂಕಾಳ ವೈದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಜನಸ್ಪಂದನ ಸಭೆಯ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ಈಗಾಗಲೇ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸ್ಪಂದನ ಸಭೆ ನಡೆಸಿ ಜನರ ಸಮಸ್ಯೆಗೆ ಪರಿಹಾರ ಒದಗಿಸುವ ಕೆಲಸ ಮಾಡಲಾಗಿದೆ.

ಭಟ್ಕಳ: ತಾಲೂಕಿನ ಹಾಡವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ಮಧ್ಯಾಹ್ನ ಜನಸ್ಪಂದನ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಅವರು ಜನರಿಂದ ಸಮಸ್ಯೆ ಆಲಿಸಿ ಕೆಲವೊಂದಕ್ಕೆ ಸ್ಥಳದಲ್ಲೇ ಪರಿಹಾರ ಒದಗಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನಸ್ಪಂದನ ಸಭೆಯಿಂದ ಗ್ರಾಮೀಣ ಭಾಗದ ಜನರ ಸಮಸ್ಯೆ ಆಲಿಸಲು ಅನುಕೂಲವಾಗಿದೆ. ಕ್ಷೇತ್ರದಲ್ಲಿ ವಾರದ ಒಂದು ದಿನ ಹೊನ್ನಾವರ ಮತ್ತು ಮತ್ತೊಂದು ದಿನ ಭಟ್ಕಳ ಭಾಗದಲ್ಲಿ ಜನಸ್ಪಂದನ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದರು.

ಜನಸ್ಪಂದನ ಸಭೆಯ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ಈಗಾಗಲೇ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸ್ಪಂದನ ಸಭೆ ನಡೆಸಿ ಜನರ ಸಮಸ್ಯೆಗೆ ಪರಿಹಾರ ಒದಗಿಸುವ ಕೆಲಸ ಮಾಡಲಾಗಿದೆ. ಹಾಡವಳ್ಳಿಯ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದು, ಸರ್ಕಾರದ ಅನುದಾನದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಿಕೊಡುವ ಭರವಸೆ ನೀಡಿದರು.

ಜನಸ್ಪಂದನ ಸಭೆಯಲ್ಲಿ 300ಕ್ಕೂ ಅಧಿಕ ಅರ್ಜಿಗಳು ಸಚಿವರಿಗೆ ಸಲ್ಲಿಕೆ ಆಗಿದ್ದು, ಕೆಲವೊಂದು ಅರ್ಜಿಗೆ ಸಚಿವರು ಸ್ಥಳದಲ್ಲೇ ಪರಿಹಾರ ಒದಗಿಸಿದರು. ಹಾಡವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಭಾಗಗಳಿಂದ ಆಗಮಿಸಿದ ಜನರು ಸಚಿವರಿಗೆ ಮನೆ ನಿರ್ಮಾಣ, ದೇವಸ್ಥಾನ ಅಭಿವೃದ್ಧಿ, ಹೊಳೆ ಪಿಚ್ಚಿಂಗ್, ಕಾಂಕ್ರೀಟ್ ರಸ್ತೆ, ಬಾವಿ ನಿರ್ಮಾಣ, ಅತಿಕ್ರಮಣ ಸಕ್ರಮ, ಸೇತುವೆ, ಸಭಾಭವನ ನಿರ್ಮಾಣ, ಕಾಡುಪ್ರಾಣಿ ಹಾವಳಿಯಿಂದ ಬೆಳೆಹಾನಿ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದರು. ಸಚಿವರು ಜನರ ಅರ್ಜಿಯನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ತಮ್ಮ ಆಪ್ತ ಸಹಾಯಕರಿಗೆ ಸೂಚಿಸಿದರು.

ಜನಸ್ಪಂದನ ಸಭೆಯಲ್ಲಿ ನೂರಾರು ಜನರು ಪಾಲ್ಗೊಂಡು ಸಚಿವರ ಬಳಿ ತಮ್ಮ ಸಮಸ್ಯೆ ಹೇಳಿಕೊಂಡರು. ಹಾಡವಳ್ಳಿ ಗ್ರಾಪಂ ಅಧ್ಯಕ್ಷ ಶ್ರೀಧರ ಶೆಟ್ಟಿ ಸ್ವಾಗತಿಸಿ, ಹಾಡವಳ್ಳಿಯಲ್ಲಿ ಆಗಬೇಕಾದ ಅಗತ್ಯ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಚಿವರ ಗಮನಕ್ಕೆ ತಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ರಾಜು ನಾಯ್ಕ ಕೊಪ್ಪ, ಹಾಡವಳ್ಳಿ ಗ್ರಾಪಂ ಉಪಾಧ್ಯಕ್ಷೆ ನಾಗಮ್ಮ ನಾಯ್ಕ, ಹಿರಿಯ ಮುಖಂಡ ಸೊಮಯ್ಯ ಗೊಂಡ, ಮಾರುಕೇರಿ ಗ್ರಾಪಂ ಅಧ್ಯಕ್ಷೆ ನಾಗವೇಣಿ ಗೊಂಡ, ತಾಪಂ ಮಾಜಿ ಸದಸ್ಯೆ ಜಯಲಕ್ಷ್ಮೀ ಗೊಂಡ, ಗ್ರಾಪಂ ಸದಸ್ಯರು ಮುಂತಾದವರಿದ್ದರು.