ಗ್ಯಾರಂಟಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಶ್ರಮವಹಿಸಿ: ರೆಡ್ಡಿ ಶ್ರೀನಿವಾಸ್

| Published : Oct 23 2024, 12:52 AM IST

ಗ್ಯಾರಂಟಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಶ್ರಮವಹಿಸಿ: ರೆಡ್ಡಿ ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಇಲಾಖಾ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರು ಪ್ರಾಮಾಣಿಕವಾಗಿ ಶ್ರಮಿಸಬೇಕು.

ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಜನಸಾಮಾನ್ಯರ ಏಳಿಗೆಗಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮಹತ್ತರವಾದ ಐದು ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಇಲಾಖಾ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಹೇಳಿದರು.

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂಬಂಧ ಕೊಪ್ಪಳ ಜಿಲ್ಲಾ ಪಂಚಾಯಿತಿಯ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ಯಾರಂಟಿ ಯೋಜನೆಗಳು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸಾಮಾಜಿಕ ಕಾರ್ಯಕ್ರಮವಾಗಿವೆ. ಅರ್ಹರೆಲ್ಲರೂ ಗ್ಯಾರಂಟಿ ಯೋಜನೆಗಳ ವ್ಯಾಪ್ತಿಗೆ ಒಳಪಡಬೇಕು ಎಂಬುದು ಸರ್ಕಾರದ ಉದ್ದೇಶವಾಗಿದ್ದು, ಯಾವುದೇ ಅರ್ಹ ಫಲಾನುಭವಿಗಳು ಈ ಯೋಜನೆಯಿಂದ ಹೊರಗುಳಿಯಬಾರದು. ಈ ಹಿನ್ನೆಲೆ ಪ್ರಮಾಣಿಕವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವಂತಹ ಕೆಲಸವನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಮಾಡಬೇಕು. ಶಕ್ತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ ಹಾಗೂ ಯುವನಿಧಿ ಸೇರಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಉಂಟಾಗುತ್ತಿರುವ ಸಣ್ಣ-ಪುಟ್ಟ ತಾಂತ್ರಿಕ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಿ ಎಲ್ಲ ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸಬೇಕು ಎಂದು ತಿಳಿಸಿದರು.

ಯೋಜನೆಗಳಿಗೆ ಸಂಬಂಧಪಟ್ಟ ಇಲಾಖೆಯ ಎಲ್ಲ ಕಚೇರಿಗಳ ಆವರಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿಯನ್ನು ಬ್ಯಾನರ್ ಗಳಲ್ಲಿ ಹಾಕುವುದರ ಮೂಲಕ ಯೋಜನೆಗಳ ಬಗ್ಗೆ ಹೆಚ್ಚಾಗಿ ಪ್ರಚಾರ ಮಾಡಬೇಕು. ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಹಾಗೇ ತಿಂಗಳಲ್ಲಿ ರಜೆ ದಿನ ಹೊರತುಪಡಿಸಿ ಎಲ್ಲ ದಿನ ಪಡಿತರ ವಿತರಿಸಬೇಕು. ಗ್ಯಾರಂಟಿ ಯೋಜನೆಗಳ ಸದಸ್ಯರು ಪ್ರತಿ ತಿಂಗಳು ತಾಲೂಕುವಾರು ನ್ಯಾಯ ಬೆಲೆ ಅಂಗಡಿಗಳ ಮಾಲೀಕರೊಂದಿಗೆ ಸಭೆ ನೆಡಸಬೇಕು. ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳಿಗೆ ಅರ್ಹ ಫಲಾನುಭವಿಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.

ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೇಯ ಮಾತನಾಡಿ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ, ಶಕ್ತಿ ಹಾಗೂ ಅನ್ನಭಾಗ್ಯ ಯೋಜನೆಗಳಲ್ಲಿ ತಿರಸ್ಕೃತವಾದ ಅರ್ಜಿಗಳನ್ನು ತಾಲೂಕುವಾರು ಜೊತೆಗೆ ಫಲಾನುಭವಿಗಳ ಹೆಸರು ಸಹಿತ ಮಾಹಿತಿಯನ್ನು ಗ್ಯಾರಂಟಿ ಯೋಜನೆಗಳ ಸದಸ್ಯರಿಗೆ ಕೊಡಬೇಕು. ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಶೇ.100 ರಷ್ಟು ಪ್ರಗತಿ ವರದಿ ಸಾಧಿಸಬೇಕು ಎಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಗ್ಯಾರಂಟಿ ಯೋಜನೆಗಳಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಮ್ಮ ಸಿಬ್ಬಂದಿ ಜೊತೆ ಸಭೆ ನೆಡೆಸಿ ಯೋಜನೆಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಕಟ್ಟುನಿಟ್ಟಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.

ಈ ಸಂದರ್ಭ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಟಿ. ಖಾದ್ರಿ, ಅಮರೇಶ, ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಸೇರಿದಂತೆ ಗ್ಯಾರಂಟಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರಿದ್ದರು.ಅಧಿಕಾರಿಗಳ ಮಾಹಿತಿ:

ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 3,20,440 ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳಿದ್ದು 3,21,487 ಯಜಮಾನಿಯರು ಗೃಹಲಕ್ಷ್ಮಿ ಯೋಜನೆಗೆ ನೋಂದಣಿಯಾಗಿದ್ದು, ಆ.2023ರಿಂದ ಜು.2024ರವರೆಗೆ ಡಿಬಿಟಿ ಮೂಲಕ ಒಟ್ಟು ₹ 661,88,98,000 ಪಾವತಿಸಲಾಗಿದೆ.

ಗೃಹ ಜ್ಯೋತಿಯಡಿ ಜಿಲ್ಲೆಯಲ್ಲಿ ಒಟ್ಟು 2,73,920 ಫಲಾನುಭವಿಗಳು ನೋಂದಣಿಯಾಗಿರುತ್ತಾರೆ. ಸೆ.2024ರ ಅಂತ್ಯಕ್ಕೆ ಸಬ್ಸಿಡಿ ಮೂಲಕ ಒಟ್ಟು ₹136.80 ಕೋಟಿಯನ್ನು ಈ ಯೋಜನೆಗೆ ಪಾವತಿಸಲಾಗಿದೆ.

ಯುವನಿಧಿ ಯೋಜನೆಯಡಿ ಡಿ.2023 ರಿಂದ ಆ.2024 ರವರೆಗೆ ಒಟ್ಟು 11268 ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ಪಾವತಿಸಲಾಗಿದೆ. ಇದರಲ್ಲಿ 11125 ಪದವೀಧರರಿಗೆ ತಿಂಗಳಿಗೆ ₹3,000ರಂತೆ ಹಾಗೂ 143 ಡಿಪ್ಲೋಮಾ ವಿದ್ಯಾರ್ಥಿಗಳಿಗೆ ತಿಂಗಳಿಗೆ ₹1,500 ರಂತೆ ಒಟ್ಟು 11268 ವಿದ್ಯಾರ್ಥಿಗಳಿಗೆ ಒಟ್ಟು ಮೊತ್ತ ₹3.35 ಕೋಟಿ ಪಾವತಿಸಲಾಗಿದೆ.

ಅನ್ನಭಾಗ್ಯದಡಿ ಜಿಲ್ಲೆಯಲ್ಲಿ ಒಟ್ಟು 3,21,994 ಪಡಿತರ ಚೀಟಿಗಳ ಫಲಾನುಭವಿಗಳು ಅರ್ಹರಿದ್ದು, ಇದರಲ್ಲಿ 2,95,703 ಫಲಾನುಭವಿಗಳಿಗೆ ಜು.2023ರಿಂದ ಜು.2024ರವರೆಗೆ ಒಟ್ಟು ₹224.81 ಕೋಟಿ ವೆಚ್ಚ ಭರಿಸಲಾಗಿದೆ.

ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 185.29 ಲಕ್ಷ ಮಹಿಳಾ ಪ್ರಯಾಣಿಕರು ಸೆಪ್ಟೆಂಬರ್ 2024 ರವರೆಗೆ ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ನೀಡಿದರು.