ಪುತ್ತೂರು: ವಿದ್ಯಾರ್ಥಿಯಲ್ಲಿ ಶಿಕ್ಷಣ, ಆರೋಗ್ಯ, ಸಂಸ್ಕಾರವೆಂಬ ಮೂರು ವಿಚಾರಗಳಿದ್ದಾಗ ಮಾತ್ರ ಅವನು ಉತ್ತಮ ವಿದ್ಯಾರ್ಥಿಯಾಗಲು ಸಾಧ್ಯವಿದೆ ಎಂದು ದಕ್ಷಿಣ ಕನ್ನಡ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ ಹೇಳಿದರು.

ಅವರು ವಿವೇಕಾನಂದ ಸೆಂಟ್ರಲ್ ಸ್ಕೂಲ್ ಹಾಗೂ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಬುಧವಾರ ನಡೆದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಸಂಸ್ಕಾರ ಕಡಿಮೆಯಾಗುತ್ತಿದ್ದು ವಿದ್ಯಾರ್ಥಿಗಳಿಗೆ ಸಾಮಾಜಿಕ ಸೇವೆಗಳ ಬಗ್ಗೆ ತಿಳಿಸಿಕೊಡುವುದು ಅಗತ್ಯವಿದೆ. ದೇಹ ಭಕ್ತಿಯೊಂದಿಗೆ ದೇಶ ಭಕ್ತಿಯನ್ನು ಒಗ್ಗೂಡಿಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡುತ್ತಾ, ಮಾನವೀಯತೆಯನ್ನು ಜಗತ್ತಿಗೆ ತಿಳಿಸಿ ಕೊಟ್ಟವರು ವಿವೇಕಾನಂದರು. ಭಾರತ ಒಂದು ಭದ್ರ ದೇಶ. ಆದರೆ ಇದನ್ನು ಬೇರ್ಪಡಿಸುವ ಕಾರ್ಯ ಬಹಳಷ್ಟು ಬಾರಿ ನಡೆದರೂ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಹೆಣ್ಣನ್ನು ದೇವರೆಂದು ಪೂಜಿಸುವ ದೇಶ ನಮ್ಮದು. ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳನ್ನು ಜಗತ್ತಿಗೆ ಕೊಟ್ಟಿದೆ. ಭಾರತೀಯರಾದ ನಾವೆಲ್ಲರೂ ಒಗ್ಗಟ್ಟಾಗಿರುವುದು ಇಂದು ಅವಶ್ಯ ಎಂದು ಹೇಳಿದರು. ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ.ಎಂ ಕೃಷ್ಣ ಭಟ್, ಪ್ರಾಂಶುಪಾಲೆ ಸಿಂಧು, ಉಪ ಪ್ರಾಂಶುಪಾಲೆ ಶ್ರೀದೇವಿ ಭಗಿನಿ, ಶೈಕ್ಷಣಿಕ ಆಡಳಿತಾಧಿಕಾರಿ ಅನುರಾಧ ಉಪಸ್ಥಿತರಿದ್ದರು.

ಸೆಂಟ್ರಲ್ ಶಾಲಾ ಆಡಳಿತ ಮಂಡಳಿಯ ಸಂಚಾಲಕ ಭರತ್ ಪೈ ಸ್ವಾಗತಿಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ವಸಂತಿ ವಂದಿಸಿದರು. ಜಯಶ್ರೀ ಕೆ. ಎನ್ ಹಾಗೂ ಲತಾಶಂಕರಿ ನಿರೂಪಿಸಿದರು.