ರಾಂ ಅಜೆಕಾರು ಕಾರ್ಕಳ

ಕಾರ್ಕಳ ತಾಲೂಕಿನ ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರ ದುಸ್ಥಿತಿಯಲ್ಲಿದ್ದು, ಅಕಾಲಿಕ ಮಳೆ ಪರಿಣಾಮ ರೋಗಿಗಳು ಹಾಗೂ ಸಿಬ್ಬಂದಿ ಭಾರಿ ಸಂಕಷ್ಟ ಎದುರಿಸುತ್ತಿದ್ದಾರೆ. 1960ರ ದಶಕದಲ್ಲಿ ನಿರ್ಮಾಣಗೊಂಡ ಈ ಹಳೆಯ ಕಟ್ಟಡ ಜೀರ್ಣಾವಸ್ಥೆಗೆ ತಲುಪಿದ್ದು, ಮುಂದಿನ ಮಳೆಗಾಲ ಎದುರಿಸಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಿದೆ.ಅಕಾಲಿಕ ಮಳೆಗೆ ದುಸ್ಥಿತಿ ಬಯಲು: ಇತ್ತೀಚಿನ ಅಕಾಲಿಕ ಮಳೆಯಲ್ಲೇ ಆಸ್ಪತ್ರೆಯ ಮೇಲ್ಛಾವಣಿಯಿಂದ ನೀರು ಸೋರುತ್ತಿದ್ದು, ಒಳ ಭಾಗದಲ್ಲಿ ನೀರು ತುಂಬುತ್ತಿದೆ. ಮಳೆ ನೀರು ಒಳ ನುಗ್ಗದಂತೆ ತಾತ್ಕಾಲಿಕವಾಗಿ ಟಾರ್ಪಾಲು ಹಾಕಿ ಸೇವೆ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಡ್‌ಗಳು, ಲಕ್ಷಾಂತರ ರು. ಮೌಲ್ಯದ ಪೀಠೋಪಕರಣ ಹಾಗೂ ಚಿಕಿತ್ಸಾ ಉಪಕರಣಗಳು ನೀರಲ್ಲಿ ಒದ್ದೆಯಾಗುತ್ತಿದ್ದು, ರೋಗಿಗಳ ಚಿಕಿತ್ಸೆಗೆ ತೊಂದರೆ ಉಂಟಾಗಿದೆ.ನಿತ್ಯ 400ಕ್ಕೂ ಹೆಚ್ಚು ರೋಗಿಗಳು: ಈ ಆರೋಗ್ಯ ಕೇಂದ್ರಕ್ಕೆ ಪ್ರತಿ ದಿನ 400ಕ್ಕೂ ಹೆಚ್ಚು ರೋಗಿಗಳು ಭೇಟಿ ನೀಡುತ್ತಾರೆ. ಹಿರ್ಗಾನ, ಹೆರ್ಮುಂಡೆ, ಶಿರ್ಲಾಲು, ಕೆರುವಾಶೆ, ಕಡ್ತಲ ಸೇರಿದಂತೆ ಸುತ್ತ ಮುತ್ತಲಿನ ಅನೇಕ ಗ್ರಾಮಗಳ ಜನರು ಈ ಆಸ್ಪತ್ರೆಯನ್ನು ಅವಲಂಬಿಸುತ್ತಾರೆ. ಇಷ್ಟೊಂದು ಜನರಿಗೆ ಸೇವೆ ನೀಡುವ ಪ್ರಮುಖ ಕೇಂದ್ರವಾಗಿದ್ದರೂ, ಮೂಲ ಸೌಕರ್ಯಗಳ ಕೊರತೆ ಗಂಭೀರ ಸಮಸ್ಯೆಯಾಗಿದೆ.ಮಳೆಗಾಲದ ಭೀತಿ ತೀವ್ರ: ಅಕಾಲಿಕ ಮಳೆಯಲ್ಲೇ ಇಂತಹ ಸ್ಥಿತಿ ನಿರ್ಮಾಣವಾಗಿರುವುದರಿಂದ, ಮುಂದಿನ ಭಾರಿ ಮಳೆಗಾಲದಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಆತಂಕ ವ್ಯಕ್ತವಾಗಿದೆ. ಮೇಲ್ಛಾವಣಿಯ ಹೆಂಚು ಹಾಗೂ ರೀಪುಗಳು ಹಾಳಾಗಿ ಕುಸಿಯುವ ಹಂತಕ್ಕೆ ತಲುಪಿದ್ದು, ಯಾವಾಗ ಬೇಕಾದರೂ ಕೆಳಗೆ ಬೀಳುವ ಅಪಾಯವಿದೆ. ಈಗಾಗಲೇ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಹೆಂಚಿನ ತುಂಡೊಂದು ಟೇಬಲ್ ಮೇಲೆ ಬಿದ್ದ ಘಟನೆ ಸಂಭವಿಸಿದ್ದು, ಸಿಬ್ಬಂದಿಗಳ ಆತಂಕ ಹೆಚ್ಚಿಸಿದೆ.

ಭಾರಿ ಗಾಳಿ-ಮಳೆ ವೇಳೆ ನೀರು ಸೋರಿಕೆಯಿಂದ ವಿದ್ಯುತ್ ಉಪಕರಣಗಳಿಗೂ ಅಪಾಯ ಉಂಟಾಗುವ ಸಾಧ್ಯತೆ ಇದೆ. ಔಷಧಗಳು ಹಾಗೂ ಇತರ ಸಾಮಗ್ರಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಸೂಕ್ತ ವ್ಯವಸ್ಥೆಗಳಿಲ್ಲದಿರುವುದು ಮತ್ತೊಂದು ಸಮಸ್ಯೆಯಾಗಿದೆ.ತಾತ್ಕಾಲಿಕ ಪರಿಹಾರ ಮಾತ್ರ: ಸ್ಥಳೀಯ ಗ್ರಾಪಂ ತಾತ್ಕಾಲಿಕವಾಗಿ ಟಾರ್ಪಾಲು ವ್ಯವಸ್ಥೆ ಕಲ್ಪಿಸಿ ಸ್ವಲ್ಪ ಮಟ್ಟಿನ ನೆರವು ಒದಗಿಸಿದೆ. ಆದರೆ ಇದು ಶಾಶ್ವತ ಪರಿಹಾರವಾಗುವುದಿಲ್ಲ. ಈ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರದ ಮಟ್ಟಕ್ಕೆ ಮೇಲ್ದರ್ಜೆಗೆರಿಸಲು ಹಲವು ವರ್ಷಗಳಿಂದ ಬೇಡಿಕೆ ಇದ್ದರೂ, ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.ಅಭಿವೃದ್ಧಿಗೆ ಅನುದಾನವಿಲ್ಲ: ಕಳೆದ ಹತ್ತು ವರ್ಷಗಳಿಂದ ಈ ಹಳೆಯ ಕಟ್ಟಡವನ್ನು ನವೀಕರಿಸಲು ಅಥವಾ ಹೊಸದಾಗಿ ನಿರ್ಮಿಸಲು ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದನೆ ದೊರೆತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸರಕಾರಕ್ಕೆ ಈಗಾಗಲೇ ಎರಡು ಬಾರಿ ಅನುದಾನಕ್ಕಾಗಿ ಕೋರಿಕೆ ಸಲ್ಲಿಸಿದ್ದರೂ ಅನುದಾನ ಬಿಡುಗಡೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಎಂಆರ್‌ಪಿಎಲ್ ಸಂಸ್ಥೆಯ ಸಿಎಸ್‌ಆರ್ ನಿಧಿಗಳಿಂದ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಹಾಗೂ ಅಗತ್ಯ ದುರಸ್ಥಿ ಕಾರ್ಯಗಳನ್ನು ಕೈಗೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಈಗಾಗಲೇ ಎಂಆರ್‌ಪಿಎಲ್‌ಗೆ ಮಾಹಿತಿ ನೀಡಲಾಗಿದೆ. ಸದ್ಯದಲ್ಲೇ ದುರಸ್ಥಿ ಕಾರ್ಯಗಳು ಆರಂಭವಾಗಲಿವೆ.-ವಿ ಸುನೀಲ್ ಕುಮಾರ್, ಶಾಸಕರು ಕಾರ್ಕಳ.ನಾನು ಕೆರುವಾಶೆಯಿಂದ ಚಿಕಿತ್ಸೆಗಾಗಿ ಇಲ್ಲಿಗೆ ಬಂದಿದ್ದೇನೆ. ಆದರೆ ಮಳೆ ಬಂದಾಗ ಆಸ್ಪತ್ರೆಯೊಳಗೆ ನೀರು ತುಂಬುತ್ತದೆ. ಕುಳಿತುಕೊಳ್ಳಲು ಜಾಗವಿಲ್ಲ, ಚಿಕಿತ್ಸೆ ಪಡೆಯುವುದೇ ಕಷ್ಟವಾಗುತ್ತದೆ. ಮೇಲ್ಛಾವಣಿಯಿಂದ ಯಾವಾಗ ಏನು ಬೀಳುತ್ತದೋ ಎಂಬ ಭಯ ಕಾಡುತ್ತಿದೆ.

ರಾಜೇಶ್ ಗುಡಿಗಾರ ಕೆರುವಾಶೆ