ಮುಳಗುಂದ: ಸಮಾಜದ ಸಮಗ್ರ ಅಭಿವೃದ್ಧಿಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿದ್ದು, ಇಂದಿನ ದಿನಮಾನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ಉತ್ತಮ ಸಾಧನೆ ಮಾಡುತ್ತಿದ್ದಾರೆ. ವರ್ತಮಾನದಲ್ಲಿ ಶಿಕ್ಷಣವೇ ಶಕ್ತಿಯಾಗಿದ್ದು, ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ವೀಣಾ ಆರ್. ಅಠವಾಲೆ ತಿಳಿಸಿದರು.

ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿಗಳ ಗವಿಮಠದಲ್ಲಿ ಬುಧವಾರ ನಡೆದ ಸ್ಥಳೀಯ ಅನುಬಂಧ ಮಹಿಳಾ ವಿವಿಧೋದ್ದೇಶಗಳ ಸೇವಾ ಫೌಂಡೇಶನ್‌ ಉದ್ಘಾಟನಾ ಸಮಾರಂಭ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ, ಪೌರ ಕಾರ್ಮಿಕರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಮಹಿಳೆಯರು ಒಗ್ಗೂಡಿ ಗೃಹ ಕೈಗಾರಿಕೆ, ಹಲವಾರು ತರಬೇತಿ ನೀಡುವ ಮೂಲಕ ಆರ್ಥಿಕವಾಗಿ ಸಬಲೀಕರಣರಾಗುವುದು ಇಂದಿನ ಅಗತ್ಯವಾಗಿದೆ. ಸದಸ್ಯರು ಸಂಘದ ಉದ್ದೇಶಗಳನುಸಾರ ಸಂಘವನ್ನು ಮುನ್ನಡೆಸಿಕೊಂಡು ಹೋಗಬೇಕು. ಯಾವುದೇ ಕ್ಷೇತ್ರದಲ್ಲಿ ತಮ್ಮ ಕಾರ್ಯ, ಸಾಧನೆ ಮಾಡಬೇಕಾದರೆ ಹಿಂಜರಿಕೆ ಮನೋಭಾವನೆ ಬಿಟ್ಟು ಧೈರ್ಯದಿಂದ ಹೆಜ್ಜೆ ಇಡಬೇಕು. ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನ ರೂಪಿಸಿದೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ವೇಳೆ ಬಾ.ಮ. ಶಿವಯೋಗಿಗಳ ಶಿಕ್ಷಣ ಸಮಿತಿ ಅಧ್ಯಕ್ಷ ಎಂ.ಡಿ. ಬಟ್ಟೂರ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಶಿವಣ್ಣ ನೀಲಗುಂದ ಹಾಗೂ ಡಾ. ಎಸ್‌.ಸಿ. ಚವಡಿ ಮಾತನಾಡಿದರು.

ಪೌರಕಾರ್ಮಿಕರಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಪಪಂ ಮಾಜಿ ಸದಸ್ಯ ಎಸ್‌.ಸಿ. ಬಡ್ನಿ, ಮುಳಗುಂದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಸುಂಕಾಪುರ, ಉನ್ನತಿ ಮಹಿಳಾ ಟ್ರಸ್ಟ್ ಕಾರ್ಯದರ್ಶಿ ಹರ್ಷಲಾ ದೇಶಪಾಂಡೆ, ಈಶ್ವರೀಯ ವಿಶ್ವವಿದ್ಯಾಲಯ ಸಂಚಾಲಕಿ ಬಿ.ಕೆ. ಶಿವಾನಿಜಿ, ಗೀತಾ ಜಾಧವ, ನಿರ್ಮಲಾ ತಳಬಾಳಮಠ ಸೇರಿದಂತೆ ಸಂಘದ ಸದಸ್ಯರು, ಮಹಿಳೆಯರು ಇದ್ದರು. ವರ್ಷಾ ಬಾರಕೇರ ನಿರೂಪಿಸಿದರು.