ಬೆಳ್ತಂಗಡಿ: ಎಕ್ಸೆಲ್ ಪದವಿಪೂರ್ವ ಕಾಲೇಜು ರಾಜ್ಯದ ಪ್ರತಿಷ್ಠಿತ ಕಾಲೇಜುಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದೆ. ಇಲ್ಲಿ ಅತ್ಯುತ್ತಮ ದರ್ಜೆಯ ಶಿಕ್ಷಣದೊಂದಿಗೆ ಜೀವನ ಪಾಠವೂ ಸಿಗುತ್ತಿದೆ. ಕಠಿಣ ಪರಿಶ್ರಮದಿಂದ ಶೈಕ್ಷಣಿಕ ಸಾಧನೆ ಸಾಧ್ಯವಾಗಿದೆ. ಈ ಸಾಧನೆಯ ಹಿಂದೆ ಆಡಳಿತ ಮಂಡಳಿಯ ಅಧ್ಯಕ್ಷರು, ಪ್ರಾಂಶುಪಾಲರು, ಪ್ರಾಧ್ಯಾಪಕರು, ನಿಲಯ ಪಾಲಕರು, ಹೆತ್ತವರು ಎಲ್ಲರ ಸಹಕಾರ ಇದೆ ಎಂದು ಪೂರ್ವ ಸೇನಾ ವೈದ್ಯ, ಕೊಡಗಿನ ಮಕ್ಕಳ ತಜ್ಞ ಮೇ. ಡಾ ಕುಶ್ವಂತ್ ಕೆಎನ್ ಹೇಳಿದರು.
ಎಕ್ಸೆಲ್ ಸಮೂಹ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಅರಮಲೆಬೆಟ್ಟ ಕ್ಯಾಂಪಸ್‌ನಲ್ಲಿ ನಡೆದ 80ನೇ ಸ್ವಾತಂತ್ರ್ಯ ಸಂಭ್ರಮ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಸಾಧಕರ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳನ್ನುದ್ದೇಶಿ ಮಾತನಾಡಿದರು. ಆತ್ಮಸ್ಥೈರ್ಯದಿಂದ ಮುಂದೆ ಸಾಗುವಾಗ ಶಿಸ್ತು, ಪರಿಶ್ರಮ, ಛಲದಿಂದ ಯಶಸ್ಸಿನೆಡೆಗೆ ನಡೆದರೆ ಯಾವುದೇ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ವಿದ್ಯಾರ್ಥಿಗಳಿಗೆ ದಕ್ಕುತ್ತದೆ ಎಂದು ಹೇಳಿದರು. ಸ್ಪರ್ಧಾತ್ಮಕ ಪರೀಕ್ಷೆಗಳ ಸಾಧಕರ ಅಭಿನಂದನಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು.ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ಪದವಿ ಪೂರ್ವ ಕಾಲೇಜುಗಳ ಸಂಘದ ಜಂಟಿ ಕಾರ್ಯದರ್ಶಿ, ವಿಠಲ ಎ ಮಾತನಾಡಿ ಪ್ರತಿಯೊಬ್ಬ ಪ್ರಜೆಯು ನಿಷ್ಠೆಯಿಂದ ತನ್ನ ಕರ್ತವ್ಯವನ್ನು ನಿರ್ವಹಿಸುವುದೇ ನಿಜವಾದ ದೇಶಭಕ್ತಿ, ಒಬ್ಬ ವಿದ್ಯಾರ್ಥಿಯ ಸಾಧನೆಯ ಹಿಂದೆ ಪೋಷಕರ ಪರಿಶ್ರಮವಿದೆ. ಶಿಕ್ಷಕರ ತ್ಯಾಗವಿದೆ ಅವರಿಗೆ ಗೌರವ ನೀಡುವುದೇ ಮಕ್ಕಳ ಆದ್ಯ ಕರ್ತವ್ಯ ಎಂದು ಹೇಳಿದರು.ಗೌರವ: ನೀಟ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿ ಮೌರ್ಯ ವೈ ಡಿ ಹಾಗೂ ಚಿನ್ಮಯ್ ಗೌಡ ಅವರಿಗೆ ತಲಾ 2 ಲಕ್ಷ ರೂಗಳ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ನೀಟ್, ಜೆ ಇ ಇ ಅಡ್ವಾನ್ಸ್ ಮತ್ತು ಮೆನ್ಸ್, ಸಿ ಇ ಟಿ, ನಾಟ,ಎನ್ ಡಿ ಎ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆಗೈದ 500 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಶಾಲು ತೊಡಿಸಿ,ಹಾರ ಹಾಕಿ, ಪೇಟ ಇಟ್ಟು ,ಫಲಪುಷ್ಪ, ಸ್ಮರಣಿಕೆ ಮತ್ತು ಆಕರ್ಷಕ ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.ಸನ್ಮಾನಿತರಾದ ಚಿನ್ಮಯ್ ಗೌಡ ಮಾತನಾಡುತ್ತಾ ಅಧ್ಯಕ್ಷರಾದ ಸುಮಂತ್ ಸರ್ ಅವರ, ಶಿಕ್ಷಕರ ಪ್ರೋತ್ಸಾಹ, ಮಾರ್ಗದರ್ಶನ ನನ್ನಂತಹ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಯ ಕನಸು ನನಸಾಗಲು ಸಾಧ್ಯ ಮಾಡಿದೆ ಎಂದರು. ವಿದ್ಯಾರ್ಥಿಗಳ ಪರೀಕ್ಷಾ ಪೂರ್ವ ತಯಾರಿಯು ಹೇಗಿರಬೇಕು ಎಂಬ ಕಿವಿ ಮಾತನ್ನು ತನ್ನ ಕಿರಿಯ ವಿದ್ಯಾರ್ಥಿ ಮಿತ್ರರಿಗೆ ಹೇಳಿದರು.
ಎಕ್ಸೆಲ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಬಿ ಸುಮಂತ್ ಕುಮಾರ್ ಜೈನ್ ಸಮಾರಂಭದ ಅಧ್ಯಕ್ಷತೆ ವಹಿಸಿ,ಮಾತನಾಡಿ ಇಂದಿನ ಪ್ರಜೆಗಳೇ ಮುಂದಿನ ಭವಿಷ್ಯದ ಬುನಾದಿ, ಉತ್ತಮ ಶಿಕ್ಷಣ ಅವರ ಜೀವನದ ತಳಹದಿಯಾಗಲಿ. ಹೆತ್ತವರಿಗೆ, ಸಂಸ್ಥೆಯ ಶಿಕ್ಷಕ ವೃಂದಕ್ಕೆ ಕೀರ್ತಿ ತರುವಂತ ಕೆಲಸವನ್ನು ವಿದ್ಯಾರ್ಥಿಗಳು ಮಾಡಿ ಇನ್ನಷ್ಟು ಎತ್ತರ ಬೆಳೆದು ದೇಶಕ್ಕೆ ಉತ್ತಮ ಆಸ್ತಿ ಆಗಬೇಕು ಎಂದರು. ಪ್ರಾಂಶುಪಾಲ ಡಾ .ನವೀನ್ ಕುಮಾರ್ ಮರಿಕೆ ಸ್ವಾಗತಿಸಿ, ಎಕ್ಸೆಲ್ ಟೆಕ್ನೋ ಸ್ಕೂಲ್ ನ ಪ್ರಾಂಶುಪಾಲೆ ಸುಮಿತ್ರಾ ಗೌಡ ವಂದಿಸಿದರು.ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರಸನ್ನ ಭೋಜ, ಅರುಣ್ ಕ್ಯಾಸ್ಟೋಲಿನ್ , ಅನನ್ಯ ಜೈನ್, ಇಂಗ್ಲೀಷ್ ವಿಭಾಗದ ಉಪನ್ಯಾಸಕ ಜೀವನ್
ಡಿಸೋಜಾ ಹಾಗೂ ಜೀವ ವಿಜ್ಞಾನ ವಿಭಾಗದ ಉಪನ್ಯಾಸಕ ಪ್ರಜ್ವಿತ್ ರೈ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಅರಮಲೆ ಬೆಟ್ಟ ಕ್ಯಾಂಪಸ್ ನ ಪ್ರಾಂಶುಪಾಲರಾದ ಡಾ. ಪ್ರಜ್ವಲ್ ಕಜೆ, ಉಪಪ್ರಾಂಶುಪಾಲರುಗಳಾದ ರೋಹಿತ್ ಕುಮಾರ್, ಹರೀಶ್, ಆಡಳಿತಾಧಿಕಾರಿ ಕೀರ್ತಿನಿಧಿ ಜೈನ್, ಸಂಯೋಜಕರಾದ ನಿಶಾ ಪೂಜಾರಿ, ಶ್ರೀನಿಧಿ ಶೆಟ್ಟಿ, ವಿಭಾಗದ ಮುಖ್ಯಸ್ಥರು, ಉಪನ್ಯಾಸಕ ವರ್ಗ, ವಿದ್ಯಾರ್ಥಿಗಳು, ಪೋಷಕರು ಮತ್ತು ಬೋಧಕೇತರ ಸಿಬ್ಬಂದಿಯವರು ಭಾಗವಹಿಸಿದ್ದರು