ನಾಳೆ ರಾಹುಲ್‌ಗಾಂಧಿ ಬಳ್ಳಾರಿಗೆ: ಸಚಿವ ನಾಗೇಂದ್ರ

| Published : Apr 25 2024, 01:00 AM IST / Updated: Apr 25 2024, 01:01 AM IST

ಸಾರಾಂಶ

ಬಳ್ಳಾರಿ ಹಾಗೂ ಕೊಪ್ಪಳ ಕ್ಷೇತ್ರಗಳ ಚುನಾವಣೆ ಪ್ರಚಾರಕ್ಕೆಂದು ರಾಹುಲ್‌ ಗಾಂಧಿ ಬಳ್ಳಾರಿಗೆ ಆಗಮಿಸಲಿದ್ದಾರೆ.

ಬಳ್ಳಾರಿ: ಕಾಂಗ್ರೆಸ್‌ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ ಏಪ್ರಿಲ್ 26ರಂದು ಲೋಕಸಭಾ ಚುನಾವಣೆ ಪ್ರಚಾರಕ್ಕೆಂದು ನಗರಕ್ಕೆ ಆಗಮಿಸಲಿದ್ದು, ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಹಾಗೂ ಕೊಪ್ಪಳ ಕ್ಷೇತ್ರಗಳ ಚುನಾವಣೆ ಪ್ರಚಾರಕ್ಕೆಂದು ರಾಹುಲ್‌ ಗಾಂಧಿ ಬಳ್ಳಾರಿಗೆ ಆಗಮಿಸಲಿದ್ದಾರೆ. ಅಂದು ಸಂಜೆ 4 ಗಂಟೆಗೆ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಲಿದ್ದಾರೆ ಎಂದರು.

ರಾಹುಲ್‌ ಗಾಂಧಿ ಜತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದಾರೆ. ಸಮಾವೇಶ ಯಶಸ್ವಿ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಬಳ್ಳಾರಿಗೆ ಆಗಮಿಸಿದ್ದರು. ಹೀಗಾಗಿ, ಐದು ಜನ ಶಾಸಕರು ಆಯ್ಕೆಯಾದೆವು. ಲೋಕಸಭಾ ಚುನಾವಣೆಗೂ ರಾಹುಲ್ ಅವರು ಬಂದು ಜಿಲ್ಲೆಯ ಮತದಾರರಿಂದ ಮತಯಾಚನೆ ಮಾಡಲಿದ್ದಾರೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳು ನಮಗೆ ವರವಾಗಲಿವೆ. ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ರಾಜ್ಯದ ಜನರು ಕೇಂದ್ರದ ದುರಾಡಳಿತದಿಂದ ರೋಸಿ ಹೋಗಿದ್ದಾರೆ ಎಂದರು.

ಬಿಜೆಪಿ ಗೆದ್ದು ಮಾಡಿದ್ದೇನು?:

ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಮಾತನಾಡಿ, ಬಿಜೆಪಿಯಿಂದ ನಾಲ್ವರು ಸಂಸದರಾಗಿ ಈವರೆಗೆ ಆಯ್ಕೆಗೊಂಡಿದ್ದು ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಈ ಹಿಂದೆ ಕಾಂಗ್ರೆಸ್ ಸಂಸದರು ಜಿಲ್ಲೆಗಾಗಿ ಅಪಾರವಾಗಿ ಶ್ರಮಿಸಿದ್ದಾರೆ. ಆದರೆ, ಕಳೆದ ದಶಕದ ಅವಧಿಯಲ್ಲಿ ಬಿಜೆಪಿ ಅವಧಿಯಲ್ಲಿ ಯಾವುದೇ ಕೆಲಸಗಳಾಗಿಲ್ಲ. ಇದನ್ನು ಮತದಾರರು ಪ್ರಶ್ನಿಸಬೇಕಾಗಿದೆ. ಜಿಲ್ಲೆಯ ಪ್ರಗತಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಚುನಾವಣೆಯಲ್ಲಿ ಗೆದ್ದ ಬಳಿಕ ನಗರದಲ್ಲಿ ನನೆಗುದಿಗೆ ಬಿದ್ದಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ಕೇಂದ್ರದ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಈ.ತುಕಾರಾಂ ತಿಳಿಸಿದರು.

ನಗರ ಶಾಸಕ ನಾರಾ ಭರತ್ ರೆಡ್ಡಿ, ಪಕ್ಷದ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಪಕ್ಷದ ಜಿಲ್ಲಾ ಮುಖಂಡರಾದ ಮುಂಡ್ರಿಗಿ ನಾಗರಾಜ್, ಆಂಜನೇಯಲು, ಕೆಎಸ್‌ಎಲ್ ಸ್ವಾಮಿ, ತಿಮ್ಮನಗೌಡ ಇದ್ದರು.