ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಜಿಲ್ಲೆಯ ಭೀಮಾ ತೀರ ಅಫಜಲ್ಪುರದಲ್ಲಿ ಬುಧವಾರ ಪ್ರಜಾಧ್ವನಿ ಸಮಾವೇಶ ನಡೆಸುವ ಮೂಲಕ ಕಾಂಗ್ರೆಸ್ ಪಕ್ಷ ಕಲ್ಯಾಣದ ಹೆಬ್ಬಾಗಿಲು ಕಲಬುರಗಿ ಲೋಕ ಕದನದ ಪ್ರಚಾರ ರಣ ಕಹಳೆ ಮೊಳಗಿಸುವ ಮೂಲಕ ಲೋಕಸಭೆ ಅಖಾಡದಲ್ಲಿನ ರಾಜಕೀಯ ರಂಗೇರುವಂತೆ ಮಾಡಿತು.ಸಿಎಂ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಜೊತೆಗೂಡಿ ಮತ ಬೇಟೆ ನಡೆಸುತ್ತ ಪ್ರಧಾನಿ ಮೋದಿ ಮಾತುಗಳನ್ನು ಒಂದೊಂದಾಗಿ ಉದಾಹರಿಸುತ್ತ ಸುಳ್ಳಿನ ಸರಮಾಲೆ ಎಂದು ಜನರ ಮುಂದೆ ಬಿಚ್ಚಿಡುವ ಯತ್ನ ಮಾಡಿದರು. ಕಾಂಗ್ರೆಸ್‌ನವರು ಮಂಗಳಸೂತ್ರ ಕಿತ್ಕೊಳ್ತಾರೆ ಎಂಬ ಮೋದಿ ಹೇಳಿಕೆಗೆ ಖರ್ಗೆಯವರಂತೂ ಕೆಂಡಾಮಂಡಲರಾದರಲ್ಲದೆ ಮೋದಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆಂದು ಮಾತಲ್ಲಿ ತಿವಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರ ಮಾಂಗಲ್ಯ ಸೂತ್ರ ಕಿತ್ತುಕೊಳ್ಳುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ನಾಚಿಕೆಯಾಗಬೇಕು ಅವರಿಗೆ. ಎಂತಹ ಪ್ರಧಾನಿ ಇವರು. ಕಾಂಗ್ರೆಸ್ ಮಹಿಳೆಯರಿಗಾಗಿ ಹಲವಾರು ಯೋಜನೆ ಜಾರಿಗೆ ತಂದಿದೆ ಹೊರತು ಮಾಂಗಲ್ಯ ಸೂತ್ರ ಕಿತ್ತುಕೊಳ್ಳುವ ಕೆಲಸ ಮಾಡಿಲ್ಲ ಎಂದು ಎಐಸಿಸಿ ಅಧ್ಯಕ್ಷ ಖರ್ಗೆಯವರು ಮಾತಲ್ಲೇ ಮೋದಿಯವರನ್ನ ಕುಟುಕಿದರು.ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಯುವಕರಿಗೆ, ಮಹಿಳೆಯರಿಗೆ ರೈತರಿಗೆ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತ ಯೋಜನೆಗಳನ್ನು ಹೇಳಿದ್ದೇವೆ. ಆದರೆ, ನಮ್ಮ ಪ್ರಣಾಳಿಕೆಯನ್ನು ಮುಸ್ಲಿಂ ಲೀಗ್ ಸಿದ್ದಾಂತ ಇದ್ದಂತೆ ಇದೆ ಎಂದಿದ್ದಾರೆ. ಯಾರೂ ಇಂತಹ ಮಾತು ಅಡುವುದಿಲ್ಲ. ಆದರೆ ಮೋದಿಗೆ ಏನಾಗಿದೆ ಎಂದು ನನಗೆ ಗೊತ್ತಿಲ್ಲವೆಂದರು.
ಮೋದಿ ಈ ದೇಶದ ಜನರ ಪರವಾಗಿಲ್ಲ. ಅವರು ಹಾಗೂ ಅಮಿತ್ ಶಾ ದೇಶವನ್ನು ಮಾರುವವರಿದ್ದರೆ ಅಂಬಾನಿ ಹಾಗೂ ಅದಾನಿ ಕೊಳ್ಳುವವರಿದ್ದಾರೆ. ನಮ್ಮ ಪ್ರಣಾಳಿಕೆಯನ್ನ ಮುಸ್ಲಿಂ ಲೀಗ್ ಪ್ರಣಾಳಿಕೆ ಅಂತಿದ್ದಾರೆ, ಈ ಬಗ್ಗೆ ಚರ್ಚೆಗೆ ಬರುವಂತೆ ಪತ್ರ ಬರೆದಿದ್ದೇನೆ. ಬಂದರೆ ಚರ್ಚೆ ಮಾಡುತ್ತೇನೆಂದರು.ದುರ್ದೈವದಿಂದಾಗಿ ಕಳೆದ ಸಲ ನನಗೆ ಹಿನ್ನೆಡೆಯಾಯಿತು. ಆದದ್ದು ಆಗಿ ಹೋಗಿದೆ. ಅದನ್ನೇ ಪದೇ ಪದೇ ಹೇಳಿದರೂ ಚೆನ್ನಾಗಿರುವುದಿಲ್ಲ. ಕಳೆದ ಸಲದ ಸೋಲಿನಿಂದ ಹೊರಗೆ ಬನ್ನಿ. ಆದದ್ದೂ ಆಯ್ತು ಈ ಸಲ ನೀವೆಲ್ಲ ಸೇರಿ ಬಿಜೆಪಿಗೆ ಮುಖಭಂಗ ಮಾಡಿ ಇದು ಮೋದಿಗೂ ಗೊತ್ತಾಗಲಿ ಎಂದು ಜನತೆಗೆ ಮನವಿ ಮಾಡಿದರು.
ಬ್ಯಾರೇಜ್, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ರೇಲ್ವೆ ಕೋಚ್ ಫ್ಯಾಕ್ಟರಿ, ಕೇಂದ್ರಿಯ ವಿವಿ ಗಳನ್ನು ಸ್ಥಾಪಿಸಿದ್ದೇನೆ. ಇದನ್ನು ಯಾರೂ ನನಗೆ ಹೇಳಿರಲಿಲ್ಲ. ಆದರೆ ಈ ಭಾಗದ ಅಭಿವೃದ್ದಿಗಾಗಿ ನಾನು ಮಾಡಿದ್ದೇನೆ. ಕಲಬುರಗಿಯಿಂದ ಬೆಂಗಳೂರಿಗೆ ಚತುಷ್ಪಥ ರಸ್ತೆ ನಿರ್ಮಾಣವಾಗಬೇಕು ಸಿಎಂ ಸಿದ್ದರಾಮಯ್ಯ ಅದನ್ನೂ ಮಾಡುತ್ತಾರೆ ಎನದನುವ ಭರವಸೆ ಇದೆ. ಮೆಜಾರಿಟಿ ಇಲ್ಲದಿದ್ದರೂ ಕೂಡಾ ಆರ್ಟಿಕಲ್ 371 ಜೆ. ಜಾರಿಗೆ ತಂದಿದ್ದೇವೆ ಇದರಿಂದಾಗಿ ಸಾವಿರಾರು ನಿರುದ್ಯೋಗಿಗಳು ನೌಕರಿ ಪಡೆದುಕೊಂಡಿದ್ದಾರೆ ಎಂದರು.ನಾನು ಅಫಜಲ್ಪುರದಿಂದಲೇ ಸೋತಿದ್ದೇನೆ ಎಂದು ಹೇಳಲಾರೆ. ಯಾಕೆಂದರೆ ನನ್ನ ಸೋಲಿಸಲು ಬಿಡೀ ದೇಶವೇ ಒಗ್ಗಟ್ಟಾಗಿತ್ತು. ಶಾ, ಆರ್ ಎಸ್ ಎಸ್, ಸೂಲಿಬೆಲೆ ಎಲ್ಲ ಸೇರಿ ಇಲ್ಲೇ ಕ್ಯಾಂಪ್ ಮಾಡಿ ನನ್ನನ್ನ ಟಾರ್ಗೆಟ್ ಮಾಡಿದ್ದರು. ಆದರೂ, ಕಲಬುರಗಿ ಜನ ನನ್ನ ಕೈಬಿಡಲ್ಲ ಎಂದು ಭಾವಿಸಿದ್ದೆ, ಸೋಲಾಯಿತು. ಈಗಲೂ ಕೂಡಾ ಮೋದಿ ಅಲ್ಲಿ ಇಲ್ಲಿ ಹೇಳಿಕೊಳ್ಳುತ್ತಿದ್ದಾರೆಂದು ಖರ್ಗೆ ನುಡಿದರು.
ರಾಜಕೀಯವಾಗಿ ಎಂದಿಗೂ ನಿವೃತ್ತನಾಗಲಾರೆ: ಖರ್ಗೆ ಭಾವುಕ ಮಾತುನಾನು ರಾಜಕೀಯದಿಂದ ಎಂದಿಗೂ ನಿವೃತ್ತನಾಗೋದಿಲ್ಲ ಎಂದು ಘೋಷಿಸಿದ ಖರ್ಗೆ ನಾನು ಚುನಾವಣೆಗೆ ನಿಲ್ಲುತ್ತೇನೋ ಬಿಡುತ್ತೇನೋ ಆ ಮಾತು ಬೇರೆ. ಆದರೆ ತುಳಿತಕ್ಕೆ ಒಳಗಾದ ಸಮಾಜದ ಪರವಾದ ಹೋರಾಟ ಮಾಡಲು ನಾನು ರಾಜಕೀಯದಲ್ಲಿ ಇರುತ್ತೇನೆ. ಆರ್ ಎಸ್ ಎಸ್ ಸಿದ್ಧಾಂತಗಳನ್ನು ಸೋಲಿಸಲು ನಾನು ಹೋರಾಡುತ್ತಲೇ ಇರುತ್ತೇನೆ ಎಂದರು.
ಕಳೆದ ಸಲದ ಸೋಲಿನ ವಿಚಾರ ಬದಿಗೆ ಸರಿಸಿರಿ, ನಾವು ಮಾಡಿದ ಕೆಲಸಕ್ಕೆ ನೀವು ಆಶೀರ್ವಾದ ಮಾಡಿ ರಾಧಾಕೃಷ್ಣ ಅವರಿಗೆ ಗೆಲ್ಲಿಸಬೇಕು. ನೀವು ಹಾಗೆ ಮಾಡದಿದ್ದರೆ ನಿಮ್ಮ ಹೃದಯದಲ್ಲಿ ನಾನು ಇಲ್ಲ ಎಂದು ತಿಳಿದುಕೊಳ್ಳುತ್ತೇನೆ. ನಾನು ಸತ್ತರೆ ನನ್ನ ಮಣ್ಣಿಗೆ ನೀವು ಬರಬೇಕು. ನನ್ನನ್ನು ಸುಟ್ಟರೇ ಮೇಣದ ಬತ್ತಿ ಹಚ್ಚಲು ಬನ್ನಿ ಹೂಳಿದರೆ ಮಣ್ಣು ಹಾಕಲು ಬನ್ನಿ. ಇದಕ್ಕಿಂತ ಹೆಚ್ಚಿಗೆ ನಾನು ಹೇಳುವುದಿಲ್ಲ ಎಂದು ಭಾವುಕರಾಗಿ ನುಡಿದರು.ಕಾಂಗ್ರೆಸ್ ಜಯ ನಿಶ್ಚಿತ: ಸಿದ್ದರಾಮಯ್ಯ ಭವಿಷ್ಯ
ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲೋದು ನಿಶ್ಚಿತ ಎಂದಿರುವ ಸಿಎಂ ಸಿದ್ದರಾಮಯ್ಯ ಕೆಲಸ ಮಾಡದ ಬಿಜೆಪಿ ಸಂಸದರನ್ನೆಲ್ಲ ಸೋಲಿಸಿರಿ ಎಂದು ಜನತೆಗೆ ಕರೆ ನೀಡಿದರು.ಕಲ್ಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಮಲ್ಲಿಕಾರ್ಜುನ ಖರ್ಗಡಯವರು ಸೋತಿದ್ದರಿಂದ ಖರ್ಗೆಯವರಿಗೆ ಹೆಚ್ಚು ನಷ್ಟ ಆಗಲಿಲ್ಲ. ಇವರ ಸೋಲಿನಿಂದ ರಾಜ್ಯಕ್ಕೆ ಮತ್ತು ಜಿಲ್ಲೆಗೆ ಬಹಳ ದೊಡ್ಡ ನಷ್ಟವಾಗಿದೆ. ಈ ಬಾರಿ ಮತ್ತೆ ತಪ್ಪಾಗಬಾರದು. ಅಭಿವೃದ್ಧಿ ಪರವಾಗಿರುವ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಕರೆ ನೀಡಿದರು.
371ಜೆ ಜಾರಿ ಆಗೋದಕ್ಕೆ ಮಲ್ಲಿಕಾರ್ಜುನ ಖರ್ಗೆ ಪ್ರಮುಖ ಕಾರಣ. ಇವರ ಹೋರಾಟ, ಶ್ರಮದಿಂದಾಗಿ ಈ ಭಾಗಕ್ಕೆ 371ಜೆ ಜಾರಿಯಾಗಿ ಲಕ್ಷಾಂತರ ಕುಟುಂಬಗಳಿಗೆ ದೊಡ್ಡ ಮಟ್ಟದ ವರದನವಾಗಿದೆ ಎಂದರು.ಬಿಜೆಪಿಯವರು 371ಜೆ ಕೊಡಲು ಖಡಾಖಂಡಿತವಾಗಿ ನಿರಾಕರಿಸಿದ್ದರು. ಆದರೆ ಖರ್ಗೆಯವರ ಕಾರಣದಿಂದ ಸಂವಿಧಾನಕ್ಕೆ ತಿದ್ದುಪಡಿ ತರಲಾಯಿತು. ಇದರ ಫಲವಾಗಿ 371ಜೆ ಈ ಭಾಗಕ್ಕೆ ದೊಡ್ಡ ಮಟ್ಟದ ಅನುಕೂಲ ಆಗಿದೆ ಎಂದರು.
ಮಲ್ಲಿಕಾರ್ಜುನ ಖರ್ಗೆಯವರ ಸೋಲಿನಿಂದ ಈ ಭಾಗಕ್ಕೆ ಬಹಳ ನಷ್ಟ ಆಗಿದೆ. ಈ ಬಾರಿ ಅದಕ್ಕೆ ಅವಕಾಶ ಕೊಡಬಾರದು. ಕೆಕೆಆರ್‌ಡಿಬಿ ಮೂಲಕ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹5000 ಕೋಟಿ ನೀಡಲಾಗಿದೆ. ಎಲ್ಲಾ ಜಾತಿ, ಎಲ್ಲಾ ಧರ್ಮದವರ ಅಭಿವೃದ್ಧಿ ಮತ್ತು ಏಳಿಗೆಗಾಗಿ ನಮ್ಮ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿ ನುಡಿದಂತೆ ನಡೆದು, ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ.ಮೋದಿಯವರು ಹತ್ತತ್ತು ವರ್ಷ ಪ್ರಧಾನಿಯಾಗಿ ಬಡ ಭಾರತೀಯರ, ಮಧ್ಯಮ ವರ್ಗದ ಭಾರತೀಯರ ಪ್ರಗತಿಗಾಗಿ, ಏಳಿಗೆಗಾಗಿ ಒಂದೇ ಒಂದು ಕಾರ್ಯಕ್ರಮವನ್ನು ಜಾರಿ ಮಾಡಿದ ಉದಾಹರಣೆ ಇದ್ದರೆ ತೋರಿಸಿ ಎಂದು ಸವಾಲು ಹಾಕಿದರು.
ನಮ್ಮ ಗ್ಯಾರಂಟಿಗಳನ್ನು ಕದ್ದಿರುವ ಮೋದಿ ಮತ್ತು ಟೀಮು ಪರಮ ಸುಳ್ಳುಗಾರರು ಎನ್ನುವುದು ದೇಶದ ಪ್ರತಿಯೊಬ್ಬರಿಗೂ ಅರ್ಥವಾಗಿದೆ. ಬಿಜೆಪಿ ಸುಳ್ಳಿನ ಕಾರ್ಖಾನೆ ಆಗಿದೆ. ಸುಳ್ಳುಗಳ ಮೂಲಕ ಭಾರತೀಯರನ್ನು ನಿರಂತರವಾಗಿ ಬಕ್ರಾ ಮಾಡುವ ಬಿಜೆಪಿಯ ಅಭಿಯಾನಕ್ಕೆ ಬ್ರೇಕ್ ಹಾಕಿ ಎಂದು ಕರೆ ನೀಡಿದರು.ಕಳೆದ ಐವತ್ತು ವರ್ಷದಿಂದ ಮಲ್ಲಿಕಾರ್ಜುನ ಖರ್ಗೆ ಅವರು ಈ ಭಾಗದ ಜನರ ಧ್ವನಿಯಾಗಿ ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲಿ ಕೆಲಸ ಮಾಡಿದ್ದಾರೆ. ಈ ಸಲ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರಿಗೆ ಆಶೀರ್ವಾದ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು. ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮಾತನಾಡಿ ಮತದಾರರು ಆಶೀರ್ವಾದ ಮಾಡಿ ದಿಲ್ಲಿಗೆ ಕಳಿಸಿದರೆ ನಿಮ್ಮ ಸೇವೆ ಮಾಡುತ್ತೇನೆ ಎಂದರು.
ಸಚಿವರಾದ ಶರಣ ಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್, ಕೆಕೆಆರ್‌ಡಿಬಿ ಅಧ್ಯಕ್ಷರಾದ ಅಜಯ್ ಸಿಂಗ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ, ಶಾಸಕರಾದ ಅಲ್ಲಂಪ್ರಭು ಪಾಟೀಲ್, ತಿಪ್ಪಣ್ಣ ಕಮಕನೂರ್, ಖನೀಜ್ ಫಾತೀಮಾ, ಎಂವೈ ಪಾಟೀಲ್ ಸೇರಿ ಜಿಲ್ಲೆಯ ಶಾಸಕರುಗಳು ಮುಖಂಡರು ಉಪಸ್ಥಿತರಿದ್ದರು.