ಕನ್ನಡಪ್ರಭ ವಾರ್ತೆ, ಶಿಡ್ಲಘಟ್ಟ:

ರೈಲ್ವೆ ಅಂಡರ್‌ಪಾಸ್ ಕಾಮಗಾರಿಯಲ್ಲಿ ಯಾವುದೇ ರೀತಿಯ ಕಳಪೆ ಕಾಮಗಾರಿಗೆ ಅವಕಾಶ ನೀಡಬಾರದು. ದೀರ್ಘಕಾಲ ಬಾಳಿಕೆ ಬರುವ ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳಬೇಕು ಎಂದು ರೈಲ್ವೆ ಅಧಿಕಾರಿಗಳಿಗೆ ಶಾಸಕ ಬಿ.ಎನ್. ರವಿಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 234 ರ ವೀರಾಪುರ ಬಳಿ ಇರುವ ರೈಲ್ವೆ ಅಂಡರ್‌ಪಾಸ್ ಪ್ರದೇಶಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅತಿ ವೇಗವಾಗಿ ಬರುವ ವಾಹನಗಳು ಅಪಘಾತಕ್ಕೀಡಾಗಿ ವಾಹನ ಸವಾರರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

ಭಾರಿ ವಾಹನಗಳ ಸಂಚಾರದ ಒತ್ತಡದಿಂದ ಅಂಡರ್ ಪಾಸ್ ಒಳಗಡೆ ಮಾಡಿರುವ ಚರಂಡಿಗೆ ಅಳವಡಿಸಲಾಗಿರುವ ಕಬ್ಬಿಣದ ಸರಳಗಳು ಕಿತ್ತು ಬಂದಿದ್ದು ಇದರಿಂದ ಅಪಘಾತಗಳು ಸಂಭವಿಸಿ ಅಮಾಯಕರು ತೊಂದರೆಗೆ ಸಿಲುಕಿದ್ದಾರೆ ಎಂದರು.

ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಆದ್ಯತೆ ನೀಡುವಂತೆ ತಿಳಿಸಿದರು. ಕಾಮಗಾರಿಯನ್ನು ವಿಳಂಬ ಮಾಡದೆ ಶೀಘ್ರವಾಗಿ ಪೂರ್ಣಗೊಳಿಸಿ ಜನರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಹೇಳಿದರು.


ಪರಿಶೀಲನೆ: ಇದೇ ವೇಳೆ ಅಂಡರ್‌ಪಾಸ್ ರಸ್ತೆ ಹಾಗೂ ಚರಂಡಿಗೆ ನಿರ್ಮಿಸಲಾಗಿರುವ ಸರಳುಗಳು ಪದೇ ಪದೇ ದುರಸ್ತಿಯಾಗಿ ವಾಹನ ಸವಾರರಿಗೆ ಯಮ ಪಾಶದಂತೆ ಉದ್ಬವಿಸಿರುವ ರಸ್ತೆ ಸ್ಥಿತಿಯನ್ನು ಪರಿಶೀಲಿಸಿದ ಶಾಸಕ ರವಿಕುಮಾರ್, ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅಧಿಕಾರಿಗಳ ಗಮನಕ್ಕೆ ತಂದರು. ಮಳೆಗಾಲದಲ್ಲಿ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇರುವುದರಿಂದ ತಕ್ಷಣವೇ ದುರಸ್ತಿ ಕಾಮಗಾರಿ ಕೈಗೊಂಡು ಉತ್ತಮ ಗುಣಮಟ್ಟದಲ್ಲಿ ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜಾರೆಡ್ಡಿ, ರೈಲ್ವೆ ಇಲಾಖೆ ಕಿರಿಯ ಇಂಜಿನಿಯರ್ ಶುಭಂ, ರಾಷ್ಟ್ರೀಯ ಹೆದ್ದಾರಿ ಸಹಾಯಕ ಇಂಜಿನಿಯರ್ ನವೀನ್, ಪಿಎಸೈ ವೇಣುಗೋಪಾಲ್ ಮುಖಂಡರಾದ ಜೆವಿ ಸದಾಶಿವ, ಶ್ರೀನಿವಾಸ (ಚಿನ್ನಿ) ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.