ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ರೈಲ್ವೆ ಇಲಾಖೆಯು ರಾಜಘಟ್ಟ ಸಮೀಪದ ಗೂಡ್ಸ್ ಶೆಡ್ ಲಾರಿಗಳ ನಿಲ್ದಾಣದಲ್ಲಿ ಶೀಟ್ ಅಳವಡಿಸುವ ಕಾಮಗಾರಿ ನಡೆಸುತ್ತಿದೆ. ಇದರಿಂದ ಸ್ಥಳೀಯರಿಗೆ ಅಪಾರ ತೊಂದರೆ ಉಂಟಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸ್ಥಳೀಯರ ಪ್ರಕಾರ, ರೈಲ್ವೆ ಕಾಮಗಾರಿಯಿಂದ ಸುತ್ತಮುತ್ತಲಿನ ಎಂಟು ಹಳ್ಳಿಗಳ ಜನತೆಗೆ ತೊಂದರೆ ಉಂಟಾಗಿದೆ. ಕೈಗಾರಿಕಾ ಪ್ರದೇಶಕ್ಕೆ ತೆರಳುವ ಕಾರ್ಮಿಕರು, ನಗರ ಪ್ರದೇಶ ಮತ್ತು ಬೈಪಾಸ್ ರಸ್ತೆಯಿಂದ ಸಂಚಾರ ನಡೆಸುವ ವಾಹನ ಸವಾರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ದಿನನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸ್ಥಳದಲ್ಲಿಯೇ ಜನರ ಅಹವಾಲುಗಳನ್ನು ಆಲಿಸಿದ ಶಾಸಕ ಸ್ವರೂಪ್, ತಕ್ಷಣ ಅಧಿಕಾರಿಗಳೊಂದಿಗೆ ಚರ್ಚಿಸಿ ಜನರ ಪರವಾಗಿ ಕಟುವಾಗಿ ಮಾತನಾಡಿ, ಕಾಮಗಾರಿ ತಕ್ಷಣ ನಿಲ್ಲಿಸಬೇಕು ಎಂದು ಸೂಚಿಸಿದರು. ಇದಲ್ಲದೆ, ಈ ಸಮಸ್ಯೆಯನ್ನು ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಅವರ ಗಮನಕ್ಕೆ ತಂದು ನಿಯೋಗದ ಮೂಲಕ ಮನವಿ ಸಲ್ಲಿಸಲಾಗುವುದು. ಅದುವರೆಗೆ ಯಾವುದೇ ರೀತಿಯ ಕಾಮಗಾರಿ ಮುಂದುವರಿಯಬಾರದು ಎಂದು ಶಾಸಕರು ಸ್ಪಷ್ಟ ಸೂಚನೆ ನೀಡಿದರು. ಈ ಬಗ್ಗೆ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಅವರ ಬಳಿ ನಿಯೋಗ ತೆರಳಿ ಮನವಿ ಸಲ್ಲಿಸಲಾಗುವುದು ಅಲ್ಲಿಯವರೆಗೆ ಯಾವುದೇ ಕಾಮಗಾರಿ ಮಾಡಕೂಡದು ಎಂದು ಸೂಚಿಸಿದರು.