ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಹದಿಹರೆಯದ ಮಕ್ಕಳಲ್ಲಿ ಇಂದ್ರಿಯಗಳ ನಿಯಂತ್ರಣ ಬಹಳ ಮುಖ್ಯವಾಗಿದೆ ಎಂದು ಇಲ್ಲಿನ ಸರ್ಕಾರಿ ಬಾಲಿಕಾ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಸಿ.ಬಿ ವೆಂಕಟೇಶ್ ತಿಳಿಸಿದರು.ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವ ನಿಯಂತ್ರಣ ಘಟಕ ಶಿವಮೊಗ್ಗ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಸ್ಥಳೀಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಸಹಭಾಗಿತ್ವದಲ್ಲಿ ನಡೆದ ಎಚ್ ಐ ವಿ ಹಾಗೂ ಹದಿಹರೆಯದಲ್ಲಿನ ಸಮಸ್ಯೆ ಬಗೆಗಿನ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಹದಿಹರೆಯದ ಮಕ್ಕಳಲ್ಲಿ ಆತಂಕ, ಖಿನ್ನತೆ, ಮಾನಸಿಕ ತುಮುಲ ಹೆಚ್ಚಾಗುವುದು ಸಹಜ ಪ್ರಕ್ರಿಯೆಯಾಗಿದ್ದು, ವಿದ್ಯಾರ್ಥಿಗಳು ಮಾನಸಿಕ ದುಗುಡ, ಮಾದಕ ವ್ಯಸನ ಸಹಿತ ವಿವಿಧ ರೀತಿಯ ದುರಬ್ಯಾಸಗಳಿಂದ ಮುಕ್ತವಾಗಿ ಕಲಿಕಾ ಸಾಮರ್ಥ್ಯಗಳನ್ನು ಹೆಚ್ಚು ಆತ್ಮವಿಶ್ವಾಸದಿಂದ ಎದುರಿಸಲು ಪೋಷಕರು ಮಕ್ಕಳ ಜತೆ ನಂಬಿಕೆಯಿಂದ ವರ್ತಿಸಬೇಕೆಂದು ತಿಳಿಸಿದ ಅವರು ಹದಿಹರೆಯದ ಮಕ್ಕಳು ಕೇವಲ ಶಿಕ್ಷಣದ ಬಗ್ಗೆ ಮಾತ್ರ ಗಮನ ಕೇಂದ್ರೀಕರಿಸುವ ಮೂಲಕ ಇಂದ್ರಿಯಗಳ ನಿಯಂತ್ರಣ ಅತ್ಯಂತ ಮಹತ್ವವಾಗಿದೆ ಇದರಿಂದ ಮಾತ್ರ ಉಜ್ವಲ ಭವಿಷ್ಯ ರೂಪಿಸಿಕೊಂಡು ಸುಂದರ ಜೀವನ ನಡೆಸಲು ಸಾದ್ಯ ಎಂದು ತಿಳಿಸಿದರು.ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣಕ್ಕೆ ಮಹತ್ವ ನೀಡದೆ ಬಾಹ್ಯ ಆಕರ್ಷಣೆಗೆ ಒಳಗಾದಲ್ಲಿ ಜೀವನ ಪರ್ಯಂತ ನೋವು ಅನುಭವಿಸಬೇಕಾಗಲಿದೆ ಎಂದು ಎಚ್ಚರಿಸಿದ ಅವರು, ಈ ದಿಸೆಯಲ್ಲಿ ಸರ್ಕಾರ ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸಲು ಆಯೋಜಿಸಲಾದ ಕಾರ್ಯಾಗಾರದ ಬಗ್ಗೆ ಸಮರ್ಪಕವಾಗಿ ಅರ್ಥೈಸಿಕೊಂಡು ದೈಹಿಕ, ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು. ಇಂದ್ರಿಯವನ್ನು ನಿಗ್ರಹಿಸಿ ಕೇವಲ ವ್ಯಾಸಂಗದ ಕಡೆ ಹೆಚ್ಚು ಗಮನ ಹರಿಸಿ ನಿರ್ದಿಷ್ಟ ಗುರಿ ಸಾಧನೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ತಿಳಿಸಿದರು.
ಹದಿಹರೆಯದ ಮಕ್ಕಳ ಆರೋಗ್ಯ ಶಿಕ್ಷಣದ ಬಗ್ಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸುರಕ್ಷಾ ಕ್ಲಿನಿಕ್ ನ ಆಪ್ತ ಸಮಾಲೋಚಕರಾದ ಕೀರ್ತಿ ಬಿ ಮಾತನಾಡಿ, ಹದಿಹರೆಯದಲ್ಲಿನ ದೈಹಿಕ, ಮಾನಸಿಕ, ಸಾಮಾಜಿಕ, ಭಾವನಾತ್ಮಕ ಬದಲಾವಣೆಗಳು 10 ರಿಂದ 19 ವಯಸ್ಸಿನವರೆಗೆ ಸಹಜವಾಗಿದ್ದು, 18 ವರ್ಷದವರೆಗೆ ಮನಸ್ಸನ್ನು ನಿಯಂತ್ರಿಸಿಕೊಂಡು ಭವಿಷ್ಯದ ಕಡೆ ಗಮನಹರಿಸಿ. ಮೊಬೈಲ್ ನಲ್ಲಿ ಬರುವ ತಾತ್ಕಾಲಿಕ ಆಕರ್ಷಣೆಗೆ ಬಲಿಯಾಗದಿರಿ ಎನ್ನುವ ಮೂಲಕ ವಿದ್ಯಾರ್ಥಿನಿಯರೊಂದಿಗೆ ಆಪ್ತ ಸಮಾಲೋಚನೆ ನಡೆಸಿದರು.ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಪ್ತ ಸಮಾಲೋಚಕ ಎನ್.ಸಿ.ಡಿ ಹರೀಶ್ ವಿದ್ಯಾರ್ಥಿಗಳೊಂದಿಗೆ ಸಂವಾದಿಸಿದರು.
ಸಂಜನಾ ಸ್ವಾಗತಿಸಿ, ಉಪನ್ಯಾಸಕ ಕೆ.ಎಚ್.ಪುಟ್ಟಪ್ಪ ಬಿಳವಾಣಿ ನಿರೂಪಿಸಿ ಶೃತಿ ವಂದಿಸಿದರು.