ವಿ.ಎಂ. ನಾಗಭೂಷಣ
ಸಂಡೂರು: ತಾಲೂಕಿನಾದ್ಯಂತ ಮಳೆ ಕೊರತೆ ಉಂಟಾಗಿದೆ. ಬರ ಆವರಿಸುವ ಆತಂಕ ಜನತೆಯಲ್ಲಿ ಮನೆ ಮಾಡಿದೆ. ಆಕಾಶದಲ್ಲಿ ಮೋಡಗಳು ಕಾಣಿಸಿಕೊಂಡರೂ ಮಳೆ ಸುರಿಸುತ್ತಿಲ್ಲ. ಆಗೊಮ್ಮೆ ಈಗೊಮ್ಮೆ ಎಲ್ಲೋ ಒಂದು ಕಡೆಗೆ ಜಿನುಗುವ ಮಳೆ ಬೆಳೆಗೆ ಸಾಕಾಗುತ್ತಿಲ್ಲ. ಮಳೆಗಾಲ ಆರಂಭವಾಗಿ ಎರಡು ತಿಂಗಳು ಮುಗಿಯುತ್ತಾ ಬಂದರೂ ಇನ್ನೂ ಹಲವೆಡೆ ಬಿತ್ತನೆಯಾಗಿಲ್ಲ.ಜ.1ರಿಂದ ಜು.24ರ ವರೆಗೆ ತಾಲೂಕಿನ ಸಂಡೂರು ಹೋಬಳಿಯಲ್ಲಿ ಶೇ.63, ಚೋರನೂರು ಹೋಬಳಿಯಲ್ಲಿ ಶೇ.42 ಹಾಗೂ ತೋರಣಗಲ್ಲು ಹೋಬಳಿಯಲ್ಲಿ ಶೇ.65ರಷ್ಟು ಮಳೆ ಕೊರತೆಯಾಗಿದೆ. ಈ ಅವಧಿಯಲ್ಲಿ ತಾಲೂಕಿನಲ್ಲಿ ಶೇ.79ರಷ್ಟು ಮಳೆ ಕೊರತೆಯಾಗಿದೆ. ಮಾರ್ಚ್ ತಿಂಗಳಿಂದ ಮೇ ತಿಂಗಳ ವರೆಗೆ ಶೇ.46, ಜೂನ್ ತಿಂಗಳಲ್ಲಿ ಶೇ.77 ಹಾಗೂ ಜುಲೈ ತಿಂಗಳಲ್ಲಿ ಶೇ.82 ಮಳೆ ಕೊರತೆಯಾಗಿದೆ.
ಶೇ.68.69ರಷ್ಟು ಪ್ರದೇಶದಲ್ಲಿ ಬಿತ್ತನೆ:ತಾಲೂಕಿನಲ್ಲಿ ಮುಂಗಾರಿನಲ್ಲಿ 24,788.08 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದ್ದು, ಈ ವರೆಗೆ 17028 ಹೆಕ್ಟೇರ್ (ಶೇ. 68.69) ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇದರಲ್ಲಿ ನೀರಾವರಿ ಪ್ರದೇಶದ ಬಿತ್ತನೆ ಪ್ರಮಾಣ ಹೆಚ್ಚಿದೆ. ಮಳೆಯಾಶ್ರಿತ ಭೂಮಿಯಲ್ಲಿ ಹೆಚ್ಚಿನ ಬಿತ್ತನೆಯಾಗಿಲ್ಲ ಎಂಬ ಮಾತುಗಳು ರೈತರಿಂದ ಕೇಳಿ ಬರುತ್ತಿದೆ.
ಕೆರೆಗಳಲ್ಲಿ ನೀರು ಕುಸಿತ:
ಸಣ್ಣ ನೀರಾವರಿ ಇಲಾಖೆ ಅಡಿಯಲ್ಲಿ ಬರುವ 29 ಕೆರೆಗಳು ಹಿಂದಿನ ಕೆಲ ವರ್ಷ ಉತ್ತಮ ಮಳೆಯಾದ ಕಾರಣ ತುಂಬಿಕೊಂಡು ಅಂತರ್ಜಲ ಹೆಚ್ಚಲು ಕಾರಣವಾಗಿದ್ದವು. ಇದೀಗ ಮಳೆ ಕೊರತೆಯಿಂದ ಕೆರೆಗಳಲ್ಲಿ ನೀರಿನ ಪ್ರಮಾಣ ಕುಸಿಯತೊಡಗಿದೆ. ಒಟ್ಟು 29 ಕೆರೆಗಳ ಪೈಕಿ ನಾಲ್ಕು ಕೆರೆಗಳಲ್ಲಿ ನೀರು ಖಾಲಿಯಾಗಿದೆ. ನಾಲ್ಕು ಕೆರೆಗಳಲ್ಲಿ ಶೇ.1ರಿಂದ ಶೇ.30ರಷ್ಟು ನೀರಿದೆ. 16 ಕೆರೆಗಳಲ್ಲಿ ಶೇ.31ರಿಂದ 50ರಷ್ಟು ನೀರಿನ ಸಂಗ್ರಹವಿದೆ. 5 ಕೆರೆಗಳಲ್ಲಿ ಶೇ.51ರಿಂದ 99ರಷ್ಟು ನೀರಿನ ಸಂಗ್ರಹವಿದೆ. ಕೆರೆಗಳಲ್ಲಿ ನೀರಿನ ಪ್ರಮಾಣ ಕುಸಿಯುತ್ತಿರುವುದು ಅಂತರ್ಜಲದ ಲಭ್ಯತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ.
ಮಳೆ ಕೊರತೆಯಿಂದ ಬರದ ಛಾಯೆ ಮೂಡಿದೆ. ಉತ್ತಮ ಮಳೆಗಾಗಿ ವಿವಿಧೆಡೆ ಪೂಜೆ, ಪ್ರಾರ್ಥನೆ, ಅಖಂಡ ಭಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವರುಣದೇವ ಕೃಪೆ ತೋರಿ ಉತ್ತಮ ಮಳೆ ಸುರಿದರೆ ಬಿತ್ತನೆಯಾಗದ ಪ್ರದೇಶದಲ್ಲಿ ಬಿತ್ತನೆ ಮಾಡಲು, ಬಿತ್ತನೆಯಾದ ಬೀಜಗಳು ಮೊಳಕೆಯೊಡೆದು ಫಲ ನೀಡಲು, ಕೆರೆ-ಕುಂಟೆ, ಹಳ್ಳ-ನದಿಗಳು ತುಂಬಿಕೊಂಡು ಅಂತರ್ಜಲದ ಮಟ್ಟ ಹೆಚ್ಚಲು ಸಹಾಯಕವಾಗಲಿದೆ. ಎಲ್ಲರ ಚಿತ್ತವೀಗ ಮಳೆಯತ್ತ ನೆಟ್ಟಿದೆ.ನೀರು, ಮೇವು ಅಭಾವ:ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿವೆ. ನಮ್ಮೂರಿನ ಕೆರೆಯಲ್ಲಿ ಶೇ.25ರಷ್ಟು ನೀರಿದೆ. ಮಳೆ ಬಾರದಿದ್ದರೆ ಬೆಳೆ ನಷ್ಟವಾಗಲಿದೆ. ಜಾನುವಾರುಗಳಿಗೆ ಮೇವು ಹಾಗೂ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಬೊಮ್ಮಾಘಟ್ಟದ ರಘುಪತಿ ಶಾನುಭೋಗ್.
ಕೋಟ್:2026-27ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಕೃಷಿ ಬೆಳೆಗಳಿಗೆ ವಿಮೆ ನೋಂದಣಿ ಆರಂಭಿಸಿದ್ದು, ತಾಲೂಕಿನ ರೈತರು ವಿವಿಧ ಕೃಷಿ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿಕೊಳ್ಳಬೇಕು. ನೈಸರ್ಗಿಕ ಪ್ರಕೃತಿ ವಿಕೋಪಗಳಿಂದ ಬೆಳೆ ಹಾನಿಯಾದರೆ, ವಿಮಾ ಯೋಜನೆಯಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಮೊಹಮ್ಮದ್ ರಫೀಯುಲ್ಲಾ ರಝ್ವಿ.
ನಮ್ಮ ಊರಿನಲ್ಲಿ ಶೇ.10ರಷ್ಟು ಮಾತ್ರ ಬಿತ್ತನೆಯಾಗಿದೆ. ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಇನ್ನೂ ಕಡಿಮೆ. ಮಳೆ ಇಲ್ಲದೇ ನಮ್ಮೂರಿನ ಕೆರೆ ಖಾಲಿಯಾಗಿದೆ ಎನ್ನುತ್ತಾರೆ ಉಬ್ಬಲಗುಂಡಿ ಹೊನ್ನೂರಸ್ವಾಮಿ.ತಾಲೂಕಿನಲ್ಲಿ ಮಳೆಯ ಕೊರತೆಯಿಂದ ಬರದ ಪರಿಸ್ಥಿತಿ ಇದೆ. ಸರ್ಕಾರ ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು. ರೈತರಿಗೆ ಬರ ಪರಿಹಾರವಾಗಿ ಎಕರೆಗೆ ₹50 ಸಾವಿರ ಕೊಡಬೇಕು ಎನ್ನುತ್ತಾರೆ ರೈತ ಸಂಘದ ಕಲ್ಯಾಣ ಕರ್ನಾಟಕ ವಿಭಾಗೀಯ ಕಾರ್ಯದರ್ಶಿ, ಸಂಡೂರು ಎಂ.ಎಲ್.ಕೆ. ನಾಯ್ಡು.