ತಾಲೂಕಿನಲ್ಲಿ 37 ಮಿಮೀ ಮಳೆಯ ಕೊರತೆ
ಭತ್ತದ ಕಣಜದಲ್ಲಿ ವಾಣಿಜ್ಯ ಬೆಳೆ ಕಬ್ಬಿನ ಬೇಸಾಯ ವಿಸ್ತರಣೆಕನ್ನಡಪ್ರಭ ವಾರ್ತೆ ಹಳಿಯಾಳ
ಬರಗಾಲದ ಕರಾಳಛಾಯೆಯ ಆತಂಕದಲ್ಲಿದ್ದ ತಾಲೂಕಿನ ರೈತರ ಮುಖದಲ್ಲಿ ಪುನರ್ವಸು ಮಳೆ ಮಂದಹಾಸ ಬೀರುವಂತೆ ಮಾಡಿದೆ. ಪುನರ್ವಸು ಅಂದರೆ ಮರು ಜೀವ ಕೊಡುವ ಮಳೆ, ಭೂಮಿಗೆ ಪುಷ್ಟಿ ತುಂಬುವ ಮಳೆ ಎಂದರ್ಥ, ತನ್ನ ಹೆಸರಿನಂತೆ ಈ ಮಳೆಯು ತಾಲೂಕಿನ ಕೃಷಿಗೆ ಮರುಜೀವ ನೀಡಿದೆ.
ಪುನರ್ವಸು ಮಳೆಯು ಶಾಂತವಾಗಿ, ಮಿತವಾಗಿ ಮತ್ತು ಸಮತೋಲನದಿಂದ ಬೀಳುವ ಮಳೆಯಾಗಿರುವುದರಿಂದ ಇದು ಶಾಂತ ಮತ್ತು ಬೆಳೆಗಳ ಉತ್ತಮ ಬೆಳವಣಿಗೆಗೆ ಪೂರಕವಾಗಿರುತ್ತದೆ ಎಂಬುದು ಕೃಷಿ ತಜ್ಞರ ಅಭಿಪ್ರಾಯವಾಗಿದೆ.
ಮಳೆ ಬಹಳ ಕಮ್ಮಿ:ಪ್ರಸಕ್ತ ಹಂಗಾಮಿನ ಜೂನ್ ತಿಂಗಳಿನಿಂದ -ಜುಲೈ 8ರವರೆಗೆ ವಾಡಿಕೆ ಮಳೆಯು 358 ಮಿಮೀ ಆಗಬೇಕಾಗಿತ್ತು. ಆದರೆ 225.5 ಮಿಮೀ ಮಳೆಯಾಗಿದ್ದು, 37 ಮಿಮೀ ಮಳೆಯ ಕೊರತೆಯಾಗಿದೆ ಎಂದ ಕೃಷಿ ಇಲಾಖೆಯು ಮಾಹಿತಿಗಳು ಹೇಳುತ್ತಿವೆ. ಪ್ರಸ್ತುತ ತಾಲೂಕಿನಲ್ಲಿ ಭತ್ತದ ಬೆಳೆಗೆ ಇನ್ನೂ ನೀರು ಬೇಕು, ಕಬ್ಬು ಬೆಳೆ ಉತ್ತಮವಾಗಿದೆ, ಇನ್ನು ಗೋವಿನಜೋಳದಲ್ಲಿ ಕಳೆ ಆಗಿದೆ.
ಭತ್ತವನ್ನು ದೂಡಿದ ಕಬ್ಬು:ತಾಲೂಕಿನಲ್ಲಿ 20900 ಹೆಕ್ಟೇರ್ ಕೃಷಿ ಭೂಮಿಯಿದ್ದು, ಅದರಲ್ಲಿ ಅಂದಾಜು 12100 ಹೆಕ್ಟೇರ್ ಕಬ್ಬು, 5400 ಹೆಕ್ಟೇರ್ ಭತ್ತ ಹಾಗೂ 3300 ಹೆಕ್ಟೇರ್‌ನಲ್ಲಿ ಗೋವಿನಜೋಳ ಬೆಳೆಯಲಾಗಿದೆ. ಹತ್ತಿ ಬೇಸಾಯ ಅತೀ ಕಡಿಮೆಯಾಗಿದೆ. ಭತ್ತದ ಕಣಜವೆಂದು ಕರೆಯಿಸಲ್ಪಡುವ ಹಳಿಯಾಳದಲ್ಲಿ ಇತ್ತೀಚಿನ ವರ್ಷದಲ್ಲಿ ವಾಣಿಜ್ಯ ಬೆಳೆ ಕಬ್ಬಿನ ಬೇಸಾಯ ವಿಸ್ತರಿಸುತ್ತಿದ್ದು, ಅತ್ಯಲ್ಪ ಅವಧಿಯಲ್ಲಿ ಭತ್ತದ ಸ್ಥಾನವನ್ನು ಆಕ್ರಮಿಸಿಕೊಂಡ ಸಿಹಿ ಬೆಳೆ ಕಬ್ಬು, ಭತ್ತವನ್ನು ಎರಡನೇ ಸ್ಥಾನಕ್ಕೆ ದೂಡಿದೆ.
ವಿಶೇಷ ಪ್ಯಾಕೇಜ್ ನೀಡಿ:ಸ್ಥಳೀಯ ಪ್ರತಿಪಕ್ಷ ಬಿಜೆಪಿಯು ಹಳಿಯಾಳ ತಾಲೂಕಿನಲ್ಲಿ ಮಳೆ ಕೊರತೆಯಾಗಿರುವುದರಿಂದ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು, ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಆಗ್ರಹಿಸಿದೆ. ಸ್ಥಳೀಯ ಶಾಸಕರು ಸಹ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಅಧಿಕಾರಿಗಳ ಸಭೆ ಕರೆದು ಕೃಷಿ-ಮಳೆ ಪರಿಸ್ಥಿತಿಯ ಮಾಹಿತಿಯನ್ನು ಪಡೆದು ಅಧಿಕಾರಿಗಳಿಗೆ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಕ್ತ ನಿರ್ದೇಶನ ನೀಡಿದ್ದಾರೆ.
ಈ ರಾಜಕಾರಣದ ಬೆಳವಣಿಗೆ ಬದಿಗಿಟ್ಟು ತಾಲೂಕಿನ ರೈತ ಸಮುದಾಯವು ಮಾತ್ರ ಪರಿಸರ ಹಾಗೂ ದೈವ ಶಕ್ತಿಯಲ್ಲಿ ವಿಶ್ವಾಸವಿಟ್ಟು ಕೃಷಿಗೆ ಪೂರಕವಾಗುವಂತಹ ಮಳೆಯಾಗಬೇಕೆಂಬ ನಿರೀಕ್ಷೆಯೊಂದಿಗೆ ಕೃಷಿ-ಗದ್ದೆಗಳಲ್ಲಿ ತಮ್ಮ ಕಾಯಕ ಮುಂದುವರೆಸಿದ್ದಾರೆ.ತಾಲೂಕಿನಲ್ಲಿ ಭತ್ತದ ಬೆಳೆಗೆ ನೀರು ಬೇಕಾಗಿದೆ. ಇನ್ನೂ ಗೋವಿನಜೋಳದ ಬೆಳೆಯಲ್ಲಿನ ಕಳೆ ತೆಗೆದು ಮೇಲೆ ಗೊಬ್ಬರ ಹಾಕಬೇಕು, ಅಲ್ಲಲ್ಲಿ ಕೀಟಬಾಧೆ ಕಂಡು ಬಂದಿದ್ದು, ಕೀಟನಾಶಕ ಸಿಂಪಡಣೆ ಮಾಡಬೇಕು, ಕಬ್ಬಿನ ಬೆಳೆಯ ಕೆಳಗಡೆ ಇರುವ ಒಣ ರವದಿಯನ್ನು ತೆಗೆದರೆ ಕಬ್ಬಿಗೆ ಗಾಳಿ-ಬೆಳಕು ಉತ್ತಮವಾಗಿ ಸಿಗುತ್ತದೆ ಎನ್ನುತ್ತಾರೆ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪಿ.ಐ. ಮಾನೆ.
ನೀವು ನನಗೆ ನೀರಿನಲ್ಲಿಟ್ಟರೇ ನಾನು ನಿಮಗೆ ಊರಿನಲ್ಲಿ ಇಡುವೆ ಎಂದು ಭತ್ತ ಹೇಳುತ್ತದೆ ಎಂಬ ಹಿರಿಯರ ನಾಣ್ಣುಡಿ ಸತ್ಯವಾಗಿದೆ. ಭತ್ತದ ಬೆಳೆಗೆ ಇನ್ನೂ ನೀರು ಬೇಕು, ಆ ನಿಟ್ಟಿನಲ್ಲಿ ಉತ್ತಮವಾಗಿ ಮಳೆಯಾಗಬೇಕು ಎಂದು ತಾಲೂಕು ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಮೇಟಿ ತಿಳಿಸಿದ್ದಾರೆ.ತಾಲೂಕಿನಲ್ಲಿ ಮಳೆ ಇನ್ನೂ ಆಗಬೇಕು, ಕಬ್ಬು-ಗೋವಿನಜೋಳ ಉತ್ತಮವಾಗಿದೆ. ಆದರೆ ಭತ್ತದ ಬೆಳೆಗೆ ಮಳೆ ಸಾಕಾಗುತ್ತಿಲ್ಲ, ದೊಡ್ಡ ಮಳೆಯಾದರೆ ಬೆಳೆಗೆ, ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ತೇರಗಾಂವ ಗ್ರಾಮದ ಪ್ರಗತಿಪರ ರೈತ ಸುರೇಶ ಮಾನಗೆ.