ಕನ್ನಡಪ್ರಭ ವಾರ್ತೆ ಮದ್ದೂರು
ಮಕ್ಕಳಿಗೆ ಹಣ, ಆಸ್ತಿ ಮಾಡದೇ ಸಮಾಜದ ಆಸ್ತಿಯನ್ನಾಗಿ ರೂಪಿಸುವ ಜೊತೆಗೆ ಬಾಲ್ಯದಿಂದಲೇ ಸಂಸ್ಕಾರವಂತರನ್ನಾಗಿ ಬೆಳೆಸಬೇಕು ಎಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ ಹೇಳಿದರು.ಪಟ್ಟಣದ ಎಂ.ಎಂ.ಸಭಾಂಗಣದಲ್ಲಿ ನಡೆದ ಅಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ನ ಪ್ರಥಮ ಪ್ರಾಂತೀಯ ಸಮ್ಮೇಳನದಲ್ಲಿ ಧರ್ಮ ಮತ್ತು ನ್ಯಾಯದ ಪಾತ್ರ ಕುರಿತು ಪ್ರಧಾನ ಭಾಷಣ ಮಾಡಿ, ದೇಶದಲ್ಲಿ ತಂತ್ರಜ್ಞಾನ ಬೆಳೆದಂತೆ ಸಮಾಜವನ್ನು ಹಾಳು ಮಾಡುವ ವ್ಯವಸ್ಥೆಗಳು ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿವೆ. ಇವುಗಳ ಬಗ್ಗೆ ಯುವಜನತೆ ದಾರಿ ತಪ್ಪದೆ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.
ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳಬೇಕಾದ ಯುವಕರು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮಗೆ ಅರಿವಿಲ್ಲದಂತೆ ಕಾನೂನಿನ ಕುಣಿಕೆಯಲ್ಲಿ ಸಿಕ್ಕಿ ಬಿದ್ದರೆ ನೀವು ಅನಾಥರಾಗುತ್ತೀರಿ. ಅಲ್ಲದೆ ಆಗ ನಿಮ್ಮ ಕುಟುಂಬ ಹಿಂದೆ ಬರುವುದಿಲ್ಲ ಎಂದು ಎಚ್ಚರಿಸಿದರು.ಪುರುಷ ಪ್ರಧಾನ ಸಮಾಜದಲ್ಲಿ ಯಾವುದೇ ಹೆಣ್ಣು ಮಕ್ಕಳಿಗೆ ಅನ್ಯಾಯವಾದರೆ ಅದು ನಮ್ಮ ಮನೆ ಮಕ್ಕಳಿಗೆ ಆದ ಅನ್ಯಾಯವೆಂದು ಪರಿಗಣಿಸಬೇಕು. ಆ ನಂತರವಾದರೂ ಸಮಾಜ ಎಚ್ಚೆತ್ತುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಧರ್ಮ ಎನ್ನುವ ಪದಕ್ಕೆ ಬೇರೆ ಯಾವುದೇ ಭಾಷೆ ಎಲ್ಲಿ ಕೂಡ ಸಮಾನವಾದ ಪದವಿಲ್ಲ. ಒಬ್ಬ ಮನುಷ್ಯ ಮತ್ತೋರ್ವ ಮನುಷ್ಯನನ್ನು ಗೌರವವಾಗಿ ಕಾಣಬೇಕು. ಆತ ಹುಟ್ಟುವಾಗ ಮೂರು ಋಣಗಳನ್ನು ಪಡೆದುಕೊಂಡು ಈ ಭೂಮಿಯಲ್ಲಿ ಜನಿಸುತ್ತಾನೆ. ದೈವರೂಪ., ಪಿತೃರೂಪ ಮತ್ತು ಋಷಿ ಋಣ ಇಂಥ ಋಣಗಳನ್ನು ತೀರಿಸುವುದು ನಮ್ಮ ಎಲ್ಲಾ ಕರ್ತವ್ಯವಾಗಿದೆ ಎಂದರು.
ಸಮ್ಮೇಳನವನ್ನು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಬಾಲಾ.ಜಿ. ಶಾಸ್ತ್ರಿ ಉದ್ಘಾಟಿಸಿದರು. ಕಾರ್ಯದರ್ಶಿ ಡಾ.ನಾಗರಾಜ ವಿ.ಬಾಯರಿ, ಜಿಲ್ಲಾ ರಾಜ್ಯಪಾಲ ಕೆ.ಆರ್.ಶಶಿಧರ ಈಚೆಗೆರೆ, ನಿಕಟಪೂರ್ವ ಜಿಲ್ಲಾ ರಾಜ್ಯಪಾಲ ಎಚ್.ಮಾದೇಗೌಡ, ಎಸ್.ಎಂ.ಸಿ ಒಂದನೇ ಉಪಾಧ್ಯಕ್ಷ ಕೆ.ಟಿ.ಹನುಮಂತು, ಹೈಕೋರ್ಟ್ ನ ಖ್ಯಾತ ವಕೀಲ ಎಚ್.ಸಿ.ಶಿವರಾಮು, ಪ್ರಾಂತೀಯ ಅಧ್ಯಕ್ಷ ಕೆ.ಪುಟ್ಟಲಿಂಗಯ್ಯ , ಒಂದನೇ ಜಿಲ್ಲಾ ಉಪ ರಾಜ್ಯಪಾಲ ಕೆ.ಎಸ್.ಚಂದ್ರಶೇಖರ್, ಎರಡನೇ ಉಪಜಿಲ್ಲಾ ರಾಜ್ಯಪಾಲ ಎಂ. ಎನ್. ಶಿವಣ್ಣ, ಜಿಲ್ಲಾ ಸಂಪುಟ ಕಾರ್ಯದರ್ಶಿ ಧನಂಜಯ ದರಸಗುಪ್ಪೆ, ಖಜಾಂಚಿ ವಿ.ಎಸ್.ನಾಗರಾಜು, ಪಿ ಆರ್ ಓ ನೀನಾ ಪಟೇಲ್, ಜಿಲ್ಲಾ ರಾಯಬಾರಿ ವೈ.ಹೆಚ್.ರತ್ನಮ್ಮ, ಒಂದು, ಎರಡು, ಮತ್ತು ಮೂರನೇ ವಲಯ ಅಧ್ಯಕ್ಷರಾದ ಎಂ. ಮಹೇಶ್, ತ್ಯಾಗರಾಜು, ಕೆ. ಎಸ್. ಶಂಕರ್ ಹಾಗೂ ಅಲಯನ್ಸ್ ಸಂಸ್ಥೆಯ ವಿವಿಧ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.
ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿಗೆ ಪೂರ್ಣ ಕುಂಭ ಸ್ವಾಗತಮದ್ದೂರು:
ಅಲಯನ್ಸ್ ಸಂಸ್ಥೆ ಪ್ರಥಮ ಪ್ರಾಂತೀಯ ಸಮ್ಮೇಳನದಲ್ಲಿ ಭಾಗವಹಿಸಲು ಪಟ್ಟಣಕ್ಕೆ ಆಗಮಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು.ಬೆಂಗಳೂರಿನಿಂದ ಪ್ರವಾಸಿ ಮುಂದಿರಕ್ಕೆ ಆಗಮಿಸಿದ್ದ ನ್ಯಾಯಮೂರ್ತಿಗಳನ್ನು ಸ್ಥಳೀಯ ನ್ಯಾಯಾಧೀಶರು, ವಕೀಲರ ಸಂಘದ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಮಾಲಾರ್ಪಣೆ ಮಾಡಿ ಅಭಿನಂದಿಸಿದರು. ನಂತರ ನ್ಯಾಯಮೂರ್ತಿ ಶ್ರೀಶಾನಂದ ಅವರನ್ನು ಪ್ರವಾಸಿ ಮಂದಿರದ ಆವರಣದಿಂದ ಮಳವಳ್ಳಿ ರಸ್ತೆಯ ಎಂ.ಎಂ. ಸಭಾಂಗಣದವರೆಗೆ ಮಂಗಳವಾದ್ಯ ಸಮೇತ ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು. ಸಭಾಂಗಣದ ಬಳಿ ನೆರೆದಿದ್ದ ಅಲಯನ್ಸ್ ಸಂಸ್ಥೆ ಪದಾಧಿಕಾರಿಗಳು, ಮಹಿಳೆಯರು ಸೇರಿದಂತೆ ನೂರಾರು ಮಂದಿ ನ್ಯಾಯಮೂರ್ತಿಗಳಿಗೆ ಮಾಲಾರ್ಪಣೆ ಮಾಡಿ ಪೂರ್ಣಕುಂಬದೊಂದಿಗೆ ಸಭಾಂಗಣಕ್ಕೆ ಕರೆತರಲಾಯಿತು.