ಮೇಲುಕೋಟೆ ಮತ್ತು ಮಾಣಿಕ್ಯನಹಳ್ಳಿ ಕೇಂದ್ರೀಕರಿಸಿ ಶಾಲಾಭಿವೃದ್ಧಿ ಮಾಡುವ ಜೊತೆಗೆ ವಿದ್ಯಾರ್ಥಿಗಳಿಗೆ, ಗ್ರಾಮಗಳ ಅಭಿವೃದ್ಧಿಗೂ ಸಹಾಯ ಮಾಡುತ್ತಿದ್ದಾರೆ. ಶೌಚಾಲಯ, ರಂಗಮಂದಿರ, ಕಾಂಪೌಂಡ್, ಕಟ್ಟದ ನಿರ್ಮಾಣ ಹೀಗೆ ಶಾಲಾಭಿವೃದ್ಧಿಗೆ ಸಹಾಯ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ವಿಧಾನ ಸಭಾಕ್ಷೇತ್ರದ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಅರವಿಂದ ರಾಘವನ್ ಕೊಡುಗೆ ಅಪಾರವಾಗಿದೆ ಎಂದು ಮಾಜಿಸಚಿವ ಸಿ.ಎಸ್.ಪುಟ್ಟರಾಜು ಶ್ಲಾಘಿಸಿದರು.ಹೋಬಳಿಯ ಗೌಡಗೆರೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿರುವ ಡಿಜಿಟಲ್ ಗ್ರಂಥಾಲಯ ಅರ್ಪಣೆಯ ಸಮಾರಂಭದಲ್ಲಿ ಮಾತನಾಡಿ, ಕ್ಷೇತ್ರದ 95 ಶಾಲೆಗಳ ಬಲವರ್ಧನೆ 140 ಅಂಗನವಾಡಿ ಕೇಂದ್ರಗಳಿಗೆ 17 ಕೋಟಿ ರು.ಗೂ ಹೆಚ್ಚು ಸಹಾಯ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಮೇಲುಕೋಟೆ ಮತ್ತು ಮಾಣಿಕ್ಯನಹಳ್ಳಿ ಕೇಂದ್ರೀಕರಿಸಿ ಶಾಲಾಭಿವೃದ್ಧಿ ಮಾಡುವ ಜೊತೆಗೆ ವಿದ್ಯಾರ್ಥಿಗಳಿಗೆ, ಗ್ರಾಮಗಳ ಅಭಿವೃದ್ಧಿಗೂ ಸಹಾಯ ಮಾಡುತ್ತಿದ್ದಾರೆ. ಶೌಚಾಲಯ, ರಂಗಮಂದಿರ, ಕಾಂಪೌಂಡ್, ಕಟ್ಟದ ನಿರ್ಮಾಣ ಹೀಗೆ ಶಾಲಾಭಿವೃದ್ಧಿಗೆ ಸಹಾಯ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ರಾಘವನ್ ನಿಸ್ವಾರ್ಥಸೇವೆ ಅನುಕರಣೀಯ. ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿರುವುದು ವಿಶೇಷವಾಗಿದೆ. ಅವರಿಗೆ ಶೈಕ್ಷಣಿಕ ಸೇವೆ ಮಾಡಲು ಚೆಲುವನಾರಾಯಣಸ್ವಾಮಿ ಶಕ್ತಿಕೊಡಲಿ. ಶಾಲೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಂಗಮಂದಿರ ನಿರ್ಮಾಣಕ್ಕೆ ಸಂಸದರ ನಿಧಿಯಿಂದ 5 ಲಕ್ಷ ರು. ಸಹಾಯಧನ ಕೊಡಿಸುವುದಾಗಿ ಹೇಳಿದರು.
ಡಿಜಿಟಲ್ ಕ್ಲಾಸ್ ರೂಂ ಉದ್ಘಾಟಿಸಿ ಶಿಕ್ಷಣಪ್ರೇಮಿ ಅರವಿಂದರಾಘವನ್ ಮಾತನಾಡಿ, ಗ್ರಾಮದ ಪ್ರತಿ ಮನೆಯವರು ಸೇರಿ ಶಾಲಾ ರಂಗಮಂದಿರ ನಿರ್ಮಾಣಕ್ಕೆ ವಂತಿಗೆ ಸಂಗ್ರಹಿಸಬೇಕು. ಎಷ್ಟು ಸಂಗ್ರಹವಾಗುತ್ತದೋ ಅಷ್ಠೇ ಹಣವನ್ನು ನಾನು ಕೊಡುತ್ತೇನೆ ಎಂದರು.ಶಾಲಾಭಿವೃದ್ಧಿಯಲ್ಲಿ ಸಮುದಾಯದ ಪಾತ್ರವೂ ಮುಖ್ಯವಾಗಿದೆ ಶೈಕ್ಷಣಿಕ ಪರಿಸರದಲ್ಲಿ ಸಮುದಾಯದ ಜವಾಬ್ದಾರಿ ಹೆಚ್ಚಿಸಲು ಪ್ರತಿ ಗ್ರಾಮಗಳಲ್ಲೂ ಇದೇಮಾದರಿಯಲ್ಲಿ ಕ್ರಮವಹಿಸಲು ಸಲಹೆ ನೀಡುತ್ತಿದ್ದೇನೆ. ನಾನು ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಮಾತ್ರ ಸಹಾಯ ನೀಡುತ್ತೇನೆ. ಆದರೂ ಕೆಲವೊಂದು ಸಮಯದಲ್ಲಿ ಅನಿವಾರ್ಯವಾಗಿ ಸಾಮಾಜಿಕ ಕಾರ್ಯಗಳಿಗೂ ಸಹಕಾರ ನೀಡಿದ್ದೇನೆ. ಎಲ್ಲವನ್ನೂ ಸರ್ಕಾರವೇ ಮಾಡಲು ಸಾಧ್ಯವಿಲ್ಲ ಸಮುದಾಯ ಸಹಕಾರ ನೀಡಿದರೆ ಆ ಗ್ರಾಮದ ಶಾಲೆಗಳು ಬಲವರ್ಧನೆಯಾಗುತ್ತದೆ ಎಂದರು.
ಸಮಾರಂಭದಲ್ಲಿ ಕಟ್ಟಡ ನವೀಕರಣಕ್ಕೆ ಸಹಾಯಮಾಡಿದ ಮೈಕ್ರೋವೇವ್ ಕಂಪನಿಯ ಸನ್ಹಿತವೇದ್, ಮನುಮೂಲ ದಂಪತಿ, ರಶ್ಮಿರಾಘವನ್, ಸರ್ವೆಯರ್ ಶಂಕರ್, ಮನ್ಮುಲ್ ಮಾಜಿ ಉಪಾಧ್ಯಕ್ಷ ರವಿಕುಮಾರ್, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶಿವರಾಜು, ಗ್ರಾಮದ ಮುಖಂಡರಾದ ರಮೇಶ್, ಚುಂಚೇಗೌಡ, ಮುಖ್ಯಶಿಕ್ಷಕರಾದ ವೆಂಕಟೇಶ್ ಸಿ.ಎಚ್, ಸಿ.ಆರ್.ಪಿ ಯದುರಾಜ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.