ಮಕ್ಕಳನ್ನು ಪರಿಸರ ಪ್ರೇಮಿಯಾಗಿ ಬೆಳೆಸಿ

| Published : Jun 06 2024, 12:33 AM IST

ಸಾರಾಂಶ

ದೇಶದಲ್ಲಿ ಶೇ. 33ರಷ್ಟು ಇದ್ದಂತಹ ಅರಣ್ಯ ಪ್ರದೇಶ ಇತ್ತೀಚಿನ ದಿನಗಳಲ್ಲಿ ಅತೀ ಕಡಿಮೆಯಾಗುತ್ತಿದೆ. ಕಾರಣ ರಸ್ತೆ ಅಗಲೀಕರಣ, ಕಟ್ಟಡಗಳು, ಸೇತುವೆಗಳ ನಿರ್ಮಾಣಕ್ಕಾಗಿ ಗಿಡ-ಮರ ಕಡಿಯುವದರಿಂದ ಉಷ್ಣಾಂಶವು ಶೇ. 43ರಷ್ಟು ಏರಿಕೆಯಾಗಿದೆ.

ಧಾರವಾಡ:

ಪ್ರಮುಖ ದಿನಗಳಲ್ಲಿ ಸಸಿ ನೆಡುವುದು ಒಂದು ಸಂಪ್ರದಾಯವಾಗಿದೆ. ನಮ್ಮ ಪೂರ್ವಜರು ಪ್ರತಿಯೊಂದು ಶುಭ ಕಾರ್ಯಗಳಲ್ಲಿ ಗಿಡ-ಮರಗಳಿಗೆ ಪೂಜೆ ಮಾಡುತ್ತಿದ್ದರು. ಆದರೆ, ಇತ್ತೀಚಿನ ಜೀವನ ಶೈಲಿಯಲ್ಲಿ ಪರಿಸರಕ್ಕೆ ನೀಡಬೇಕಾದ ಮಾನ್ಯತೆ ನೀಡುತ್ತಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಜಿ ಶಾಂತಿ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ ಹಾಗೂ ವಿವಿಧ ಸಂಘಟನೆಗಳು ಒಗ್ಗೂಡಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಬುಧವಾರ ಕೆಲಗೇರಿ ಕೆರೆಯ ಆವರಣದಲ್ಲಿ ಸಸಿ ನೆಟ್ಟ ಅವರು, ಕೇವಲ ಪ್ರತಿ ವರ್ಷ ಜೂನ್ 5ರಂದು ಮಾತ್ರ ಸಸಿ ನೆಡುವಂತ ಕಾರ್ಯವಾಗಬಾರದು. ಪ್ರತಿ ದಿನ ಸಸಿಗಳನ್ನು ನೆಟ್ಟು ಪೋಷಿಸಬೇಕು. ಇಂತಹ ಒಂದು ಮಹತ್ವದ ಕಾರ್ಯಗಳಲ್ಲಿ ಸಮಾಜದ ಜನರ ಸಹಕಾರ ಮತ್ತು ಪಾಲ್ಗೊಳ್ಳುವಿಕೆಯು ಪ್ರಮುಖವಾಗಿದೆ ಎಂದರು.

ದೇಶದಲ್ಲಿ ಶೇ. 33ರಷ್ಟು ಇದ್ದಂತಹ ಅರಣ್ಯ ಪ್ರದೇಶ ಇತ್ತೀಚಿನ ದಿನಗಳಲ್ಲಿ ಅತೀ ಕಡಿಮೆಯಾಗುತ್ತಿದೆ. ಕಾರಣ ರಸ್ತೆ ಅಗಲೀಕರಣ, ಕಟ್ಟಡಗಳು, ಸೇತುವೆಗಳ ನಿರ್ಮಾಣಕ್ಕಾಗಿ ಗಿಡ-ಮರ ಕಡಿಯುವದರಿಂದ ಉಷ್ಣಾಂಶವು ಶೇ. 43ರಷ್ಟು ಏರಿಕೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರು ಸಸಿ ನೆಡುವಂತಹ ಕಾರ್ಯ ಕೈಗೊಳ್ಳಬೇಕು. ಸಸಿ ನೆಟ್ಟರೆ ಸಾಲದು ಅದಕ್ಕೆ ಸರಿಯಾಗಿ ಗೊಬ್ಬರ, ನೀರು ಹಾಕಿ ಪೋಷಿಸಬೇಕೆಂದರು.

ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಗಿಡ-ಮರಗಳ ಬಗ್ಗೆ ಸರಿಯಾದ ತಿಳಿವಳಿಕೆ ನೀಡಬೇಕು. ಪೋಷಕರು ಮಕ್ಕಳನ್ನು ಸಮಾಜಮುಖಿಯಾಗಿಸುವ ಜತೆಗೆ ಪರಿಸರ ಪ್ರೇಮಿಯಾಗಿ ಬೆಳಸಬೇಕು. ಪರಿಸರ ನಾಶವಾದರೆ ಮನುಕುಲದ ನಾಶವಾಗುತ್ತದೆ. ಈ ಹಿನ್ನೆಲೆಯಲ್ಲಿ ಬರುವ ದಿನಗಳಲ್ಲಿ ಪ್ರಾಣಿ, ಪಕ್ಷಿ, ಪರಿಸರದ ಬಗ್ಗೆ ಜಾಗೃತಿ ಉಂಟಾಗಿ ಉತ್ತಮ ಪರಿಸರ ನಿರ್ಮಾಣ ಮಾಡುವಲ್ಲಿ ಎಚ್ಚೆತ್ತುಕೊಳ್ಳಬೇಕೆಂದರು. ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ ಸ್ವಾಗತಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ವಿವೇಕ ಕವರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳಾ ವಿ.ಎಚ್. ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಎಚ್. ಮಿಟ್ಟಲಕೋಡ, ವಾಲ್ಮಿ ಸಂಸ್ಥೆಯ ನಿರ್ದೇಶಕ ರಾಜೇಂದ್ರ ಪೋದ್ದಾರ, ಪಾಲಿಕೆಯ ಸಹಾಯಕ ಆಯುಕ್ತ ಆನಂದ ಕಾಂಬಳೆ, ಧಾರವಾಡ ವಕೀಲರ ಸಂಘದ ಅಧ್ಯಕ್ಷ ಅಶೋಕ ಏಣಗಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಜಗದೀಶ ಐ.ಎಚ್. ಮತ್ತಿತರರು ಇದ್ದರು.