ಬೆನೆಟ್ ಜಿ. ಅಮ್ಮನ್ನರಿಗೆ ಪೊಳಲಿ ಶೀನಪ್ಪ ಹೆಗ್ಡೆ - ಎಸ್.ಆರ್.ಹೆಗ್ಡೆ ಪ್ರಶಸ್ತಿ

| Published : Jun 06 2024, 12:32 AM IST / Updated: Jun 06 2024, 12:33 AM IST

ಬೆನೆಟ್ ಜಿ. ಅಮ್ಮನ್ನರಿಗೆ ಪೊಳಲಿ ಶೀನಪ್ಪ ಹೆಗ್ಡೆ - ಎಸ್.ಆರ್.ಹೆಗ್ಡೆ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಬೆನೆಟ್‌ ಜಿ. ಅಮ್ಮನ್ನ ಅವರು ಪೊಳಲಿ ಶೀನಪ್ಪ ಹೆಗ್ಡೆ ಮತ್ತು ಎಸ್‌. ಆರ್‌. ಹೆಗ್ಡೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ 20, 000 ರು. ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ನೀಡುವ 2024 ನೇ ಸಾಲಿನ ಪೊಳಲಿ ಶೀನಪ್ಪ ಹೆಗ್ಡೆ ಮತ್ತು ಎಸ್. ಆರ್. ಹೆಗ್ಡೆ ಪ್ರಶಸ್ತಿಗೆ ತುಳು ಭಾಷೆ ಹಾಗೂ ಸಂಸ್ಕೃತಿ ಚಿಂತಕ ಬೆನೆಟ್ ಜಿ. ಅಮ್ಮನ್ನ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು 20, 000 ರು. /- ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ ಎಂದು ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಮ್ಮನ್ನ ಅವರು ಕಾಪು ಸಮೀಪದ ಪಾಂಗಾಳದವರು, 30 ವರ್ಷಗಳ ಕಾಲ ಮಂಗಳೂರಿನ ಕರ್ನಾಟಕ ತಿಯೋಲಾಜಿಕಲ್ ಕಾಲೇಜಿನ ಪತ್ರಾಗಾರ ವಿಭಾಗದಲ್ಲಿ ಪತ್ರಾಗಾರ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ತುಳುನಾಡಿನ ಸಾಹಿತ್ಯ, ಶಿಕ್ಷಣ, ಸಂಸ್ಕೃತಿಗೆ ವಿದೇಶಿಯರ ಕೊಡುಗೆಗಳು, ತುಳುನಾಡು ಚರಿತ್ರೆಗೆ ಸಂಬಂಧಿಸಿದ ಸಂಶೋಧನೆ, ದಾಖಲೀಕರಣ, ಹಸ್ತಪ್ರತಿ, ಸಂರಕ್ಷಣೆ, ಭಾಷಾಂತರ ಮೊದಲಾದ ಕ್ಷೇತ್ರಗಳಲ್ಲಿ ಇವರು ಕೊಡುಗೆ ನೀಡಿದ್ದಾರೆ.

ಚಿಗುರಿದ ಬದುಕು (ಕಿರು ಕಾದಂಬರಿ), ಕ್ರೈಸ್ತರು ಮತ್ತು ಬಾಸೆಲ್ ಮಿಶನ್, ಜಾನ ಜೇಮ್ಸ್ ಬ್ರಿಗೆಲ್ ಬದ್‌ಕ್ ಬೊಕ್ಕ ಬರವು, ಕಾರ್ಕಳದಲ್ಲಿ ಕ್ರೈಸ್ತರು - ಒಂದು ಅಧ್ಯಯನ ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಕೋಟಿ ಚೆನ್ನಯ, ಅಪ್ರಕಟಿತ ತುಳು ಪಾಡ್ದನಗಳು, ತುಳು ವಿಕ್ರಮಾರ್ಕ ಕಥೆ, ತುಳು ಪಂಚತಂತ್ರ ತುಳುಗಾದೆಗಳು ಮುಂತಾದ ಪುಸ್ತಕಗಳನ್ನು ಇತರರೊಂದಿಗೆ ಸಂಪಾದಿಸಿದ್ದಾರೆ.

ಅವರ ಬಾಸೆಲ್ ಮಿಶನ್ ಪ್ರೆಸ್‌ನ ಪಿತಾಮಹ ಗಾಡ್ ಫ್ರೆಡ್ ವೈಗ್ಲೆ, ಉಡುಪಿಯ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆ ಶತಮಾನದ ಹೆಜ್ಜೆಗಳು ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಕ್ರೈಸ್ತರು, ರೈಟ್ ರೆವೆರೆಂಡ್ ಡಾ. ಸಿ.ಡಿ ಜತ್ತನ್ನ (ಬದುಕು ಸಾಧನೆ) ಕೃತಿಗಳು ಪ್ರಕಟಣೆಯ ಹಾದಿಯಲ್ಲಿವೆ. ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಂಶೋಧನೆ ಹಾಗೂ ಪತ್ರಾಗಾರ ಕ್ಷೇತ್ರದ ಸಾಧನೆಗಾಗಿ ಸನ್ಮಾನಿಸಲಾಗಿದೆ. ಹಂಪಿ ಕನ್ನಡ ವಿ.ವಿ ಹಾಗೂ ಸುದಾನ-ಕಿಟೆಲ್ ಸೆಂಟರ್ ಫಾರ್ ಡೆವಲಪ್‌ಮೆಂಟ್ ಸ್ಟಡೀಸ್ ವತಿಯಿಂದಲೂ ಸಮ್ಮಾನಿತರಾಗಿದ್ದಾರೆ.