ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕನ್ನಡ ರಾಜ್ಯೋತ್ಸವ ಅಂಗವಾಗಿ ರಾಜ್ಯ ಸರ್ಕಾರದಿಂದ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ ಮಾಡಲಾಗಿದ್ದು, ಕೊಡಗು ಮೂಲದ ಡಾ. ಪದ್ಮಾಶೇಖರ್‌ಗೆ ಶಿಕ್ಷಣ ಕ್ಷೇತ್ರದಿಂದ ಪ್ರಶಸ್ತಿ ಘೋಷಣೆ ಮಾಡಲಾಗಿದೆ.ಪದ್ಮಶೇಖರ್ ವಿಶ್ರಾಂತ ಕುಲಪತಿಯಾಗಿದ್ದು, ಸಾಹಿತಿ ಹಾಗೂ ಶಿಕ್ಷಣ ತಜ್ಞೆ. ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ. ಡಿ.11 1952ರಲ್ಲಿ ಜನಿಸಿದರು. ಇವರು ಎಂ.ಎ, ಪಿಎಚ್ ಡಿ, ಜೈನಾಲಜಿ ಸ್ನಾತಕೋತ್ತರ ಡಿಪ್ಲೋಮ, ಶಾಸನಶಾಸ್ತ್ರ ಸ್ನಾತಕೋತ್ತರ ಡಿಪ್ಲೋಮಾ ಮಾಡಿದ್ದಾರೆ.
ಡಾ. ಪದ್ಮಾಶೇಖರ್ ಮೂಲತಃ ಹುಟ್ಟೂರು ಕೊಡಗಿನ ಹೆಬ್ಬಾಲೆ. ಮೈಸೂರಿನ ವಿಶ್ವವಿದ್ಯಾಲಯದಲ್ಲಿ ಪ್ರಾಕೃತ್ ವಿಭಾಗ ಮುಖ್ಯಸ್ಥರಾಗಿ ಕರ್ತವ್ಯ ಆರಂಭಿಸಿ ನಂತರ ಬೆಂಗಳೂರಿನಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಯಾಗಿ ನಿವೃತ್ತಿ ಹೊಂದಿದರು.ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಎಂಟನೇ ಸಮ್ಮೇಳನ ಮೂರ್ನಾಡಿನಲ್ಲಿ 2010ರಲ್ಲಿ ಜರುಗಿದಾಗ ಅಂದು ಸಮ್ನೆಳನಾಧ್ಯಕ್ಷರಾಗಿದ್ದರು.
ರಾಜ್ಯ ಸರ್ಕಾರದಿಂದ ಕರ್ನಾಟಕ ಸಂಭ್ರಮ 50ರ ಅಭಿಯಾನದ ಸುವರ್ಣ ಮಹೋತ್ಸವ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಕೊಡಗಿನ ಇಬ್ಬರಿಗೆ ಪ್ರಶಸ್ತಿ ಲಭಿಸಿದೆ.ಕ್ರೀಡಾ ವಿಭಾಗದಲ್ಲಿ ಸುಂಟಿಕೊಪ್ಪದ ನಂದಿನಿ ಬಸಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ನಂದಿನಿ ಬಸಪ್ಪ 1960 ಜು.4ರಂದು ಜನಿಸಿದರು. 1980ರಲ್ಲಿ ಬೆಂಗಳೂರಿನಲ್ಲಿ ನಡೆದ ಸೀನಿಯರ್ ವುಮೆನ್ಸ್ ಬಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್‌ನಲ್ಲಿ ಬೆಳ್ಳಿ ಪದಕ, 1981, 1982, 1983ರಲ್ಲಿ ಕೊಲ್ಕೊತ್ತಾ, ಇಂಡೋರ್, ಲೂಧಿಯಾನದಲ್ಲಿ ನಡೆದ ಸೀನಿಯರ್ ವುಮೆನ್ಸ್ ಬಾಸ್ಕೆಟ್ ಬಾಲ್ ಚಾಂಪಿಯನ್ ನಲ್ಲಿ ತಂಡದ ನಾಯಕಿಯಾಗಿದ್ದರು.
1981ರಲ್ಲಿ ಹಾಂಗ್ ಕಾಂಗ್ ನಲ್ಲಿ ನಡೆದಿದ್ದ ಏಷ್ಯನ್ ಬಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್, 1981ರಲ್ಲಿ ಥಾಯ್ಲೆಂಡ್ ನಲ್ಲಿ ನಡೆದಿದ್ದ ಜೂನಿಯರ್ ವುಮೆನ್ಸ್ ಸೀನಿಯರ್ ವುಮೆನ್ಸ್ ಬಾಸ್ಕೆಟ್ ಬಾಲ್ ಚಾಂಪಿಯನ್ ನಲ್ಲಿ ತಂಡದ ನಾಯಕಿಯಾಗಿ ಪಾಲ್ಗೊಂಡಿದ್ದರು.1987ರಿಂದ 2000 ವರೆಗೆ ಭಾರತ ಬಾಸ್ಕೆಟ್ ಬಾಲ್ ಫೆಡರೇಷನ್ ಉಪಾಧ್ಯಕ್ಷರಾಗಿ, 1985ರಿಂದ 2000 ವರೆಗೆ ಕರ್ನಾಟಕ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ನ ಉಪಾಧ್ಯಕ್ಷರಾಗಿ ಹಾಗೂ 1987ರಲ್ಲಿ ಪಿಲಿಪೈನ್ಸ್ ನಲ್ಲಿ ನಡೆದಿದ್ದ ಭಾರತ ಜೂನಿಯರ್ ವುಮೆನ್ ಬಾಸ್ಕೆಟ್ ಬಾಲ್ ತಂಡದ ಮ್ಯಾನೇಜರ್ ಆಗಿದ್ದರು.
1982ರಲ್ಲಿ ಕರ್ನಾಟಕ ರಾಜ್ಯ ಕ್ರೀಡಾ ಪ್ರಶಸ್ತಿ, 2001ರಲ್ಲಿ ಕೆಂಪೇಗೌಡ ಪ್ರಶಸ್ತಿ ಪಡೆದಿದ್ದಾರೆ.ಕೊಡಗಿನ ಪೊನ್ನಂಪೇಟೆಯ ಹಿರಿಯ ಸಮಾಜಸೇವಕ, ಕಿಗ್ಗಟ್ ನಾಡ್ ಹಿರಿಯ ನಾಗರಿಕ ವೇದಿಕೆಯ ಸಂಸ್ಥಾಪಕರು, ರಾಷ್ಟ್ರೀಯ ಕ್ರೀಡಾಪಟುಗಳಾಗಿದ್ದ ಕಾಟಿಮಡ ಜಿಮ್ಮಿ ಅಣ್ಣಯ್ಯ ಅವರಿಗೆ ಈ ಬಾರಿಯ ಕ್ರೀಡಾ ಪ್ರಶಸ್ತಿ ಲಭಿಸಿದೆ.