ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು ಸಕಾರಾತ್ಮಕ ಚಿಂತನೆಯೊಂದಿಗೆ ಸಮುದಾಯದ ಆಸ್ತಿಯಾಗುವ ಮೂಲಕ ಶಿಬಿರಾರ್ಥಿಗಳು ಪ್ರಧಾನ ಮೋದೀಜಿ ಅವರ ವಿಕಸಿತ ಭಾರತದ ಪರಿಕಲ್ಪನೆಗೆ ಕೈಜೋಡಿಸಬೇಕೆಂದು ಮೈಸೂರು ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕರೆ ನೀಡಿದರು. ತಾಲೂಕಿನ ಬಿಳಿಕೆರೆಯ ಶ್ರೀ ನಂಜುಂಡೇಶ್ವರ ಕಲ್ಯಾಣಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಾರಕಾಲ ಆಯೋಜಿಸಿದ್ದ 1877ನೇ ಮದ್ಯವರ್ಜನಾ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಗ್ರಾಮೀಣ ಭಾಗದ ಆರ್ಥಿಕ ಅಭಿವೃದ್ಧಿ, ಮಹಿಳಾ ಸಬಲೀಕರಣ, ಅಕ್ಷರ ಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಅಸಾಧಾರಣ ಸೇವೆ ನೀಡುವ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ನೆಲೆನಿಂತಿದೆ. ಸಮಾಜಕ್ಕೆ ಅಂಟುಜಾಡ್ಯವಾಗಿರುವ ಕುಡಿತದ ಚಟ ಬಿಡಿಸಲು ಸತ್ತತ ಕಾರ್ಯಕ್ರಮದೊಂದಿಗೆ ಲಕ್ಷಾಂತರ ಕುಟುಂಬಗಳನ್ನು ಉಳಿಸಿದ ಪುಣ್ಯದ ಕೆಲಸ ಮಾಡುತ್ತಿದೆ. ವಾರಗಳ ಕಾಲ ಶಿಬಿರದ ಪ್ರಯೋಜನ ಪಡೆದು ಕುಡಿತದ ದಾಸ್ಯದಿಂದ ಹೊರಬರಲು ನಿರ್ಧರಿಸಿರುವ ಶಿಬಿರಾರ್ಥಿಗಳು ಮುಂದಿನ ದಿನಗಳಲ್ಲಿ ನಿಮ್ಮ ಗ್ರಾಮಕ್ಕೆ ನೀವು ಆಸ್ತಿಯಾಗಬೇಕು. ಸಮಾಜದ ಸತ್ಪ್ರಜೆಯಾಗಿ ಪ್ರಧಾನ ಮೋದೀಜಿಯವರ ವಿಕಸಿತ ಭಾರತ ಕಟ್ಟುವ ಮೂಲಕ ಭವಿಷ್ಯದ ಪೀಳಿಗೆಗೆ ದೇಶದಲ್ಲಿ ಉತ್ತಮ ವಾತಾವರಣ ನಿರ್ಮಿಸುವ ಕಾರ್ಯಕ್ಕೆ ನಿಮ್ಮಿಂದಲೂ ಸೇವೆ ಸಿಗಲಿ ಎಂದು ಆಶಿಸಿದರು.ಯೋಜನೆಯ ಮಾನವ ಸಂಪನ್ಮೂಲ ತರಬೇತಿ ಸಂಸ್ಥೆಯ ಪ್ರಾಂಶುಪಾಲ ದಿನೇಶ್ ಪೂಜಾರಿ ಮಾತನಾಡಿ, 1998ರಿಂದ ಆರಂಭಗೊಂಡ ಮದ್ಯವರ್ಜನ ಶಿಬಿರದ ಮೂಲಕ ಈವರೆಗೆ ಒಂದೂವರೆ ಲಕ್ಷಕ್ಕೂ ಹೆಚ್ಚು ಕುಟುಂಬಗಳು ಪ್ರಯೋಜನೆ ಪಡೆದುಕೊಂಡಿವೆ ಎಂದರು. ತಾಲೂಕು ಯೋಜನಾಧಿಕಾರಿ ಬಿ. ಧನಂಜಯ್ ಮಾತನಾಡಿ, ಈ ಶಿಬಿರದಲ್ಲಿ 64 ಮಂದಿ ಕುಡಿತ ಬಿಡುವ ನಿರ್ಧಾರ ಕೈಗೊಂಡಿದ್ದಾರೆ. ಶಿಬಿರದ ಯಶಸ್ಸಿಗೆ ಕೈಜೋಡಿಸಿದ ಬಿಳಿಕೆರೆ ಗ್ರಾಮದ ಸಮಸ್ತ ಜನರಿಗೆ ವಂದನೆಗಳನ್ನು ತಿಳಿಸಿದರು. ಮಾದಳ್ಳಿ ಮಠದ ಶ್ರೀ ಸಾಂಬಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿದರು. ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಹಂದನಹಳ್ಳಿ ಸೋಮಶೇಖರ್, ಶಿಬಿರದ ಅಧ್ಯಕ್ಷ ಬಿಳಿಕೆರೆ ಪ್ರಸನ್ನ, ಗ್ರಾಪಂ ಅಧ್ಯಕ್ಷ ಮಹದೇವಮ್ಮ, ಸಿದ್ದಮ್ಮ, ಉಪಾಧ್ಯಕ್ಷೆ ಜ್ಯೋತಿ, ಶಿಬಿರಾಧಿಕಾರಿ ವಿದ್ಯಾಧರ, ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಚಿಕ್ಕದೇವಮ್ಮ, ಮೇಲ್ವಿಚಾರಕರಾದ ವೀಣಾ, ರೇಖಾ, ನಗ್ಮಾ, ಕಿರಣ್ ಕುಮಾರ್, ಅಂಬಿಕಾ, ಮುಖಂಡರಾದ ಶಿವಕುಮಾರ್, ಪ್ರೇಮ್ ಕುಮಾರ್, ಯೋಗಶಿಕ್ಷಕ ಮಂಜುನಾಥ್, ಮಹೇಶ್ ಮತ್ತು ಶಿಬಿರಾರ್ಥಿಗಳ ಕುಟುಂಬದವರು ಇದ್ದರು.------------------