ರಾಜ್ಯೋತ್ಸವ ಪ್ರಶಸ್ತಿ: ಸೈನಿಕರ ಕಡೆಗಣನೆಗೆ ಆಕ್ರೋಶ

| Published : Nov 07 2025, 01:15 AM IST

ರಾಜ್ಯೋತ್ಸವ ಪ್ರಶಸ್ತಿ: ಸೈನಿಕರ ಕಡೆಗಣನೆಗೆ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯೋತ್ಸವದಲ್ಲಿ ಮಾಜಿ ಸೈನಿಕರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡದೆ ಕಡೆಗಣಿಸಿರುವುದು ಸರಿಯಲ್ಲ ಎಂದು ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಿದರೆ ಲೋಕೇಶ್ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ರಾಜ್ಯೋತ್ಸವದಲ್ಲಿ ಮಾಜಿ ಸೈನಿಕರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡದೆ ಕಡೆಗಣಿಸಿರುವುದು ಸರಿಯಲ್ಲ ಎಂದು ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಿದರೆ ಲೋಕೇಶ್ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ತಾಲೂಕು ಕಚೇರಿ ಮುಂದೆ ತಾಲೂಕು ದಂಡಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವವು ಕರ್ನಾಟಕದ ಅಸ್ತಿತ್ವ ಮತ್ತು ಕನ್ನಡಿಗರ ಒಗ್ಗಟ್ಟಿನ ಸಂಕೇತವಾಗಿದೆ. ಈ ದಿನದಂದು ಸರ್ಕಾರವು ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ತೊಡಗಿರುವ ವ್ಯಕ್ತಿಗಳಿಗೆ ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡುವುದು ಹಿಂದಿನಿಂದಲೂ ನಡೆದುಕೊಂಡ ಬಂದಿದೆ. ಆದರೆ ಈ ವರ್ಷ ಸರ್ಕಾರವು ಮಾಜಿ ಸೈನಿಕರಿಗೆ ಯಾವುದೇ ಪ್ರಶಸ್ತಿಯನ್ನು ನೀಡದೆ ನಿರಾಕರಿಸಿರುವುದು ಸೈನಿಕರಲ್ಲಿ ಬೇಸರ ಮತ್ತು ಆಕ್ರೋಶವನ್ನು ಉಂಟುಮಾಡಿದೆ.

ಸೈನಿಕರು ಮತ್ತು ದೇಶದ ರಕ್ಷಣೆ ಕೇವಲ ಕೇಂದ್ರ ಸರ್ಕಾರದ ಹೊಣೆಯಲ್ಲ, ದೇಶದ ಪ್ರತಿಯೊಂದು ರಾಜ್ಯದ ಕರ್ತವ್ಯವಾಗಿದೆ. ಕರ್ನಾಟಕ ರಾಜ್ಯದ ನೂರಾರು ಯುವಕರು ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾ ಯುದ್ದ ಭೂಮಿಯಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ ಹಾಗೂ ಸಾವಿರಾರು ಯುವಕರು ಪ್ರಸ್ತುತ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಸೇವೆಯು ಕೇವಲ ರಾಷ್ಟ್ರಕ್ಕೆ ಮಾತ್ರವಲ್ಲದೆ ಕರ್ನಾಟಕ ರಾಜ್ಯಕ್ಕೂ ಸಹ ಗೌರವದ ವಿಷಯವಾಗಿದೆ ಎಂದರು.ತಾಲೂಕು ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ರಾಜಶೇಖರಯ್ಯ, ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ವಿವೇಕಾನಂದ ಚಾರ್ ಮೋಹನ್, ಜಗದೀಶ್, ಚಂದ್ರಶೇಖರಯ್ಯ, ಪಂಚಾಕ್ಷರಯ್ಯ, ವೀರನಾರಿಯರಾದ ಭವ್ಯ, ಶೈಲಾರೈ ಹಾಗೂ ತಾಲೂಕಿನ ಮಾಜಿ ಸೈನಿಕರಗಳು ಉಪಸ್ಥಿತರಿದ್ದರು.