ಕುಶಾಲನಗರ : ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ಕೇವಲ ಮೆರವಣಿಗೆ ಅಥವಾ ಭಾಷಣಕ್ಕೆ ಸೀಮಿತವಾಗಬಾರದು ಎಂದು ಕುಶಾಲನಗರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರು ಹಾಗೂ ತಹಸೀಲ್ದಾರ್ ರಮೇಶ್ ಬಾಬು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಆಶ್ರಯದಲ್ಲಿ ಕುಶಾಲನಗರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ 71ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ದಿನದ ಸಂದೇಶ ನೀಡಿದರು. ಶಾಲಾ ಕಾಲೇಜುಗಳಲ್ಲಿ ವ್ಯಾಪಾರ ವಹಿವಾಟುಗಳಲ್ಲಿ ಕಚೇರಿಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಬೇಕು ಐತಿಹಾಸಿಕ ಕನ್ನಡ ಭಾಷೆ ಸಂಸ್ಕೃತಿಯ ಪ್ರತೀಕವಾಗಿದೆ ಎಂದರು. ಮುಖ್ಯ ಭಾಷಣಕಾರರಾಗಿ ದಿನದ ಮಹತ್ವದ ಬಗ್ಗೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಗೌರವ ಕಾರ್ಯದರ್ಶಿ ಎಸ್ ಐ ಮುನೀರ್ ಅಹ್ಮದ್ ಭಾಷೆ ಸಂಸ್ಕೃತಿಯ ಪ್ರತೀಕವಾಗಿದ್ದು ಕೇವಲ ವ್ಯವಹಾರಕ್ಕೆ ಸೀಮಿತ ಆಗಬಾರದು. ಭಾಷೆಯನ್ನು ಸಾಹಿತ್ಯ ಕಲೆ ಕಲ್ಪನೆಗಳ ಮೂಲಕ ಹೊರಹೊಮ್ಮಿಸಬಹುದು ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಆಸ್ವಾದಿಸಬೇಕಾಗಿದೆ ಎಂದರು.ರಾಷ್ಟ್ರೀಯ ಹಬ್ಬ ಆಚರಣೆ ಸಮಿತಿ ವತಿಯಿಂದ ರಾಷ್ಟ್ರಮಟ್ಟದ ಕರಾಟೆಯಲ್ಲಿ ಚಿನ್ನದ ಪದಕ ಪಡೆದ ಕುಮಾರಿ ಎಸ್ ಎ ಅಂಜಲಿ, ಅಂಗನವಾಡಿ ಕಾರ್ಯಕರ್ತೆ ಪಿ ಎಸ್ ಇಂದಿರಾ. ಗೀತಾ, ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆ ಪೂಜಾ ಅಡುಗೆ ಕಾರ್ಯಕರ್ತೆ ಎವೆಲಿನ್ ಡಿಸೋಜಾ ಪೌರ ಕಾರ್ಮಿಕರಾದ ಈಶ್ವರ್ ಮತ್ತು ಅತ್ತೂರು ಗ್ರಾಮದ ಬಿ ಎಲ್ ಓ ಜ್ಯೋತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಪೊಲೀಸ್ ಇನ್ಸ್ಪೆಕ್ಟರ್ ಪ್ರದೀಪ್ ಕುಮಾರ್, ತಾಲೂಕು ಕಾರ್ಯನಿರ್ವಹಣಾ ಅಧಿಕಾರಿ ಕೆ ಸಿ ಅಪ್ಪಣ್ಣ, ಕುಶಾಲನಗರ ಪುರಸಭೆ ಕಾರ್ಯ ನಿರ್ವಹಣಾಧಿಕಾರಿ ಟಿ ಎಸ್ ಗಿರೀಶ್ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರಾದ ಕೆ ಎಸ್ ನಾಗೇಶ್ ಸಿ ಡಿ ಪಿ ಓ ಶ್ರೀದೇವಿ ಮತ್ತಿತರರು ಇದ್ದರು.ಆಕರ್ಷಕ ಪಥಸಂಚಲನ:
ಕುಶಾಲನಗರ ಟೌನ್ ಪೊಲೀಸ್ ಠಾಣಾಧಿಕಾರಿ ಶಿವಣ್ಣ ಅವರ ನೇತೃತ್ವದಲ್ಲಿ ಆಕರ್ಷಕ ಪಥಸಂಚಲನ ನಡೆಯಿತು. ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮಕ್ಕೆ ಮುನ್ನ ಕುಶಾಲನಗರ ಬೈಚನಹಳ್ಳಿ ಮಾರಿಯಮ್ಮ ದೇವಾಲಯ ಬಳಿಯಿಂದ ಕಾರ್ಯಕ್ರಮ ಆವರಣ ತನಕ ಮೆರವಣಿಗೆ ನಡೆಯಿತು.