ಸಿಲಿಕಾನ್‌ ಸಿಟಿಯಲ್ಲಿ ರಾಮನವಮಿ ಸಂಭ್ರಮ, ಪಾನಕ, ಮಜ್ಜಿಗೆ ವಿತರಣೆ

| Published : Apr 07 2025, 01:31 AM IST

ಸಿಲಿಕಾನ್‌ ಸಿಟಿಯಲ್ಲಿ ರಾಮನವಮಿ ಸಂಭ್ರಮ, ಪಾನಕ, ಮಜ್ಜಿಗೆ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಮತಾರಕ ಯಜ್ಞ, ತೊಟ್ಟಿಲು ಸೇವೆ, ರಥೋತ್ಸವ, ಸಂಗೀತ, ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಿಲಿಕಾನ್‌ ಸಿಟಿಯಲ್ಲಿ ಶ್ರೀರಾಮನವಮಿ ಸಡಗರ, ಸಂಭ್ರಮದಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಮತಾರಕ ಯಜ್ಞ, ತೊಟ್ಟಿಲು ಸೇವೆ, ರಥೋತ್ಸವ, ಸಂಗೀತ, ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಿಲಿಕಾನ್‌ ಸಿಟಿಯಲ್ಲಿ ಶ್ರೀರಾಮನವಮಿ ಸಡಗರ, ಸಂಭ್ರಮದಿಂದ ನಡೆಯಿತು.

ನಗರದ ರಾಮ-ಆಂಜನೇಯ ಸೇರಿ ವಿವಿಧ ದೇವಸ್ಥಾನಗಳಲ್ಲಿ ದಿನವಿಡಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೀದಿಗಳಲ್ಲಿ ಕೋಸಂಬರಿ, ಪಾನಕ, ಮಜ್ಜಿಗೆ ವಿತರಣೆ ನಡೆಯಿತು.

ನಸುಕಿನಿಂದಲೇ ಭಕ್ತರು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಇಸ್ಕಾನ್‌, ರಾಜಾಜಿನಗರದ ಶ್ರೀರಾಮ ಮಂದಿರ, ರಾಗಿಗುಡ್ಡ ಆಂಜನೇಯ, ಹನುಮಂತ ನಗರದ ರಾಮಾಂಜನೇಯ ಗುಡ್ಡ, ಜಯನಗರದ ಪಟ್ಟಾಭಿರಾಮ, ಮಾರುಕಟ್ಟೆ ಬಳಿಯ ಕೋಟೆ ಆಂಜನೇಯ ದೇವಸ್ಥಾನಗಳಲ್ಲಿ ರಾಮನವಮಿಯ ಪ್ರಯುಕ್ತ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶ್ರೀರಾಮ ಪರಿವಾರ ದೇವರನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ರಸ್ತೆಗಳಲ್ಲಿ ಜನತೆಗೆ ಪಾನಕ, ಹಣ್ಣು, ಮಜ್ಜಿಗೆ, ಕೋಸಂಬರಿ ವಿತರಣೆ ಕೆಲವೆಡೆ ಮಧ್ಯಾಹ್ನ ಪಲಾವ್‌ ನೀಡಲಾಯಿತು.

ಶ್ರೀರಾಮಚಂದ್ರಾಪುರ ಮಠ:

ಗಿರಿನಗರದ ಶ್ರೀರಾಮಚಂದ್ರಾಪುರಮಠ ಶ್ರೀರಾಮಾಶ್ರಮದಲ್ಲಿ ರಾಮನವಮಿ ಪ್ರಯುಕ್ತ ವಿಶೇಷ ಧಾರ್ಮಿಕ ಕೈಂಕರ್ಯಗಳು ನೆರವೇರಿದವು. ಬೆಳಗ್ಗೆ 10.30ರಿಂದ ರಾಮತಾರಕ ಹವನ, ಮಧ್ಯಾಹ್ನ ಪೂರ್ಣಾಹುತಿ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮಗಳು ನೆರವೇರಿದವು. ಮಹಿಳೆಯರು ಕುಂಕುಮಾರ್ಚನೆ ಸೇವೆ ನಡೆಸಿದರು. ಭಕ್ತರಿಗಾಗಿ ರಾಮನವಮಿ ಸರ್ವಸೇವೆ ಸೇರಿ ಹಲವು ಸೇವಾವಕಾಶ ಕಲ್ಪಿಸಲಾಗಿತ್ತು. ಸಂಜೆ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌ ಅವರಿಂದ ತತ್ವಧಾರಾ ಪ್ರವಚನಮಾಲಿಕೆ ನಡೆಯಿತು.

ಇಸ್ಕಾನ್‌:

ಇಸ್ಕಾನ್‌ನಿಂದ ನಗರದ 108 ಕಡೆಗಳಲ್ಲಿ ಅರುಣೋದಯ ಕೀರ್ತನೆಗಳನ್ನು ನಡೆಸಲಾಯಿತು. ಇಸ್ಕಾನ್‌ ಬೆಂಗಳೂರು ಅಧ್ಯಕ್ಷ ಮಧುಪಂಡಿತ ದಾಸರು ಕೀರ್ತನೆ ನಡೆಸಿಕೊಟ್ಟರು. ಹನುಮಂತನಗರ ಸೇರಿ ವಿವಿಧೆಡೆ ಸುಮಾರು 20-50 ಜನ ಸೇರಿ ರಾಮನಾಮ ಸಂಕೀರ್ತನೆ, ನೃತ್ಯ, ಭಕ್ತಿ ಸಂಗೀತ ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು. ಜತೆಗೆ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಜತೆಗೆ ರಾಜಾಜಿನಗರ ಮತ್ತು ಕನಕಪುರ ರಸ್ತೆಯ ಇಸ್ಕಾನ್‌ನಲ್ಲಿ ತಾಮತಾರಕ ಯಜ್ಞ ನೆರವೇರಿತು.

ಡ್ರೋಣ್‌ ಮೂಲಕ ಅಭಿಷೇಕ:

ರಾಮನವಮಿಯ ಪ್ರಯುಕ್ತ ರಾಜಾಜಿನಗರ ಶ್ರೀರಾಮ ಮಂದಿರವನ್ನು ವಿಶೇಷವಾಗಿ ಅಲಂಕೃತಗೊಂಡಿತ್ತು. ಇಲ್ಲಿ ನಿರ್ಮಿಸಿರುವ 63 ಅಡಿ ಎತ್ತರದ ಶ್ರೀರಾಮನ ವಿಗ್ರಹಕ್ಕೆ ಡ್ರೋಣ್‌ ಮೂಲಕ ಅಭಿಷೇಕ ಮಾಡಿದ್ದು ವಿಶೇಷವಾಗಿತ್ತು. ದೇವಸ್ಥಾನದ ಆಂಜನೇಯ ಪ್ರತಿಮೆ ಮುಂಭಾಗ ನಿರ್ಮಿಸಿರುವ ಉದ್ಯಾನವನ್ನು ಶಾಸಕ ಎಸ್.ಸುರೇಶ್ ಕುಮಾರ್ ಉದ್ಘಾಟಿಸಿದರು. ಇದರೊಂದಿಗೆ ರಥ ಪೂಜೆ, ಬ್ರಹ್ಮರಥೋತ್ಸವ ನಡೆಯಿತು. ಅಶ್ವವಾಹನೋತ್ಸವ, ಗಜ ವಾಹನೋತ್ಸವ, ಶೇಷವಾಹನೋತ್ಸವ ಹಾಗೂ ಗರುಡ ವಾಹನೋತ್ಸವಗಳು ನಡೆದವು.

ಗಾಳಿ ಆಂಜನೇಯ:

ಮೈಸೂರು ರಸ್ತೆಯ ಗಾಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ನಸುಕಿನಿಂದಲೇ ಸಾವಿರಾರು ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಮಧ್ಯಾಹ್ನದ ಬಳಿಕ ಇಲ್ಲಿ ನಡೆದ ಶ್ರೀರಾಮ ರಥೋತ್ಸವದಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಬೆಳಗ್ಗೆ ದೇವಸ್ಥಾನದ ಬಳಿ ಭಕ್ತರು ಕೋಸಂಬರಿ , ಪಾನಕ, ಮಜ್ಜಿಗೆಯನ್ನು ಜನತೆಗೆ ವಿತರಿಸಿದರು.

ಚಾಮರಾಜಪೇಟೆಯ ಓಲ್ಡ್‌ ಫೋರ್ಟ್‌ ಹೈಸ್ಕೂಲ್‌ ಗ್ರೌಂಡ್‌ನಲ್ಲಿ ಶ್ರೀರಾಮ ಸೇವಾ ಮಂಡಳಿಯಿಂದ 87ನೇ ವರ್ಷದ ರಾಮನವಮಿ ಪ್ರಯುಕ್ತ ಖ್ಯಾತ ಗಾಯಕರಿಂದ ‘ಗ್ಲೋಬಲ್‌ ಮ್ಯೂಸಿಕ್‌ ಫೆಸ್ಟಿವಲ್‌’ ನಡೆಯಿತು.

ಉಳಿದಂತೆ ವಿದ್ಯಾರಣ್ಯಪುರದ ಶ್ರೀರಾಮ ಭಕ್ತ ಸಭಾ, ಕೊಟ್ಟಿಗೆಪಾಳ್ಯದ ರಾಮ ದೇವಾಲಯ, ಟಿ.ದಾಸರಹಳ್ಳಿಯ ರಾಮ ಮಂದಿರ, ರಾಜಾಜಿನಗರದ ರಾಮಮಂದಿರ, ಮಿಂಟೋ ಆಂಜನೇಯ, ವಿಜಯನಗರದ ರಾಮಮಂದಿರ, ಸುಂಕದಕಟ್ಟೆಯ ಬೋಡುಬಂಡೆ ಆಂಜನೇಯ ಸ್ವಾಮಿ, ಮಹಾಲಕ್ಷ್ಮೀ ಬಡಾವಣೆಯ ಪ್ರಸನ್ನ ವೀರಾಂಜನೇಯ ಸ್ವಾಮಿ, ಮಾರುತಿಮಂದಿರ, ಶಿವಾಜಿನಗರದ ಆಂಜನೇಯ ಸ್ವಾಮಿ, ಮೈಸೂರು ಬ್ಯಾಂಕ್ ವೃತ್ತ, ಯಲಹಂಕ ದಾರಿ ಆಂಜನೇಯ ಸೇರಿ ನಗರದ ರಾಮಾಂಜನೇಯ ದೇವಾಲಯಗಳಲ್ಲಿ ಭಾನುವಾರ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ಪೂಜೆ, ರಾಮತಾರಕ ಹೋಮ, ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು.