ಎಡ ಸಮುದಾಯಕ್ಕೆ ನ್ಯಾಯ ಒದಗಿಸಲು ಸಿದ್ದು ಸರ್ಕಾರ ಯತ್ನ : ಸಚಿವ ಕೆ.ಎಚ್. ಮುನಿಯಪ್ಪ

| N/A | Published : Apr 07 2025, 01:31 AM IST / Updated: Apr 07 2025, 05:29 AM IST

ಎಡ ಸಮುದಾಯಕ್ಕೆ ನ್ಯಾಯ ಒದಗಿಸಲು ಸಿದ್ದು ಸರ್ಕಾರ ಯತ್ನ : ಸಚಿವ ಕೆ.ಎಚ್. ಮುನಿಯಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳ ಮುನಿರಾಬಾದ್‌ನಲ್ಲಿ ಭಾನುವಾರ ನಡೆದ ಮಾದಾರ ಚೆನ್ನಯ್ಯ ಸೇವಾ ಸಮಿತಿ ಸಮಾವೇಶವನ್ನು ಆಹಾರ ಸಚಿವ ಮುನಿಯಪ್ಪ ಉದ್ಘಾಟಿಸಿದರು. ಸಂಸದ ಗೋವಿಂದ ಕಾರಜೋಳ, ಮಾದಾರಚೆನ್ನಯ್ಯ ಸ್ವಾಮೀಜಿ ಇದ್ದಾರೆ.

 ಚಿತ್ರದುರ್ಗ : ಪರಿಶಿಷ್ಟ ಸಮುದಾಯಗಳಿಗೆ ಒಳ ಮೀಸಲು ಜಾರಿ ಸಂಬಂಧ ರಾಜ್ಯ ಸರ್ಕಾರದ ನಡೆಯ ಇನ್ನೆರೆಡು ತಿಂಗಳು ಕಾದು ನಂತರ ಹೋರಾಟದ ತಂತ್ರ ರೂಪಿಸುವ ನಿರ್ಣಯವನ್ನು ಹೊಸಪೇಟೆಯಲ್ಲಿ ಭಾನುವಾರ ನಡೆದ ಮಾದಾರ ಚೆನ್ನಯ್ಯ ಸೇವಾ ಸಮಿತಿ ಸಮಾವೇಶ ಕೈಗೊಂಡಿದೆ.

ಕೊಪ್ಪಳ ಮುನಿರಾಬಾದ್ ಎಅರ್‌ಎಸ್ ಹೋಮ್ ಸ್ಟೇ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಮಾದಿಗ ಸಮುದಾಯದ ಮುಖಂಡರು, ನ್ಯಾಯ ಸಿಗುವವರೆಗೂ ಪಕ್ಷಾತೀತವಾಗಿ ಎಲ್ಲಾ ನಾಯಕರೂ ಒಟ್ಟಾಗಿರಬೇಕು. ಸಮುದಾಯದ ಹಿತ ಕಾಯಲು ಬದ್ದರಾಗಿರಬೇಕೆಂಬ ಶಪಥ ಕೈಗೊಂಡರು.

ಸಮಾವೇಶದಲ್ಲಿ ಮಾತನಾಡಿದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಪರಿಶಿಷ್ಟ ಜಾತಿಯ ಎಡ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.

1991 ರಿಂದ 7 ಬಾರಿ ಸಂಸದನಾಗಿ ಮಾದಿಗ ಸಮುದಾಯಕ್ಕೆ ನ್ಯಾಯ ದೊರಕಿಸಲು ಯತ್ನಿಸಿದ್ದೇನೆ. ಅಂದಿನ ಪ್ರಧಾನ ಮಂತ್ರಿಗಳಾದ ಪಿ.ವಿ.ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ, ಡಾ.ಮನಮೋಹನ್ ಸಿಂಗ್ ರವರಿಗೆ ಸಮುದಾಯದ ಎಲ್ಲ ಸಂಸದರು ಒಟ್ಟಾಗಿ ನಿಯೋಗ ಹೋಗಿ ಮನವಿ ಮಾಡಿದ್ದರೂ ಇಲ್ಲಿಯವರೆಗೂ ದಕ್ಕಬೇಕಾದ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸ್ಥಾನಮಾನಗಳು ಸಿಕ್ಕಿಲ್ಲ. ಯಾವುದೇ ಪಕ್ಷವಿರಲಿ ನಾವು ಒಟ್ಟಾಗಿ ಹೋಗಬೇಕು. ಅಂದು ಕೇಂದ್ರದಲ್ಲಿ ನಮ್ಮ ಯುಪಿಎ ಸರ್ಕಾರ ವಿದ್ದಾಗ ಉಷಾ ಮೆಹರಾ ಆಯೋಗ ರಚಿಸಿ ಆಂಧ್ರ ಪ್ರದೇಶದಲ್ಲಿ ಮೀಸಲು ವರ್ಗೀಕರಣ ಮಾಡಲು ಮುಂದಾಗಲಾಯಿತು. ಮಾದಿಗ ಆದಿ ಆಂದ್ರ ಎಷ್ಟು ಜನಸಂಖ್ಯೆ ಇದೆ ಎಂದು ಮಾಹಿತಿ ಸಂಗ್ರಹಿಸಿತು. ಅದರ ಆಧಾರದ ಮೇಲೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲಿಯೂ ಜಾರಿಗೊಳಿಸಲು ನಾವು ನಿರ್ಧಾರ ಮಾಡಿದ್ದು, ವರ್ಗೀಕರಣ ಮಾಡಲು ಸಾಧ್ಯವಾಗಲಿಲ್ಲ. ಈ ಸಮುದಾಯಕ್ಕೆ ಸರಿಯಾದ ನ್ಯಾಯ ಸಿಗಲೇಬೇಕೆಂದು ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿಗೊಳಿಸಲು ಒಂದು ಐತಿಹಾಸಿಕ ಮಹತ್ವದ ತೀರ್ಪು ‌ನೀಡಿದೆ ಎಂದರು.

ತೀರ್ಪು ಬಂದ ಕೂಡಲೇ ನಾನು ಮತ್ತು ಅಬಕಾರಿ ಸಚಿವ ತಿಮ್ಮಾಪೂರ ರವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಿದೆವು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವುಕುಮಾರ್ ಅವರು ತೀರ್ಪುನ್ನು ಸ್ವಾಗತಿಸಿ ತಡ ಮಾಡದೆ ಅನುಷ್ಠಾನ ಮಾಡುವುದಾಗಿ ಹೇಳಿದ್ದರು. ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚಿಸಿದ್ದು, ಅದು ನಿಖರವಾದ ದತ್ತಾಂಶಗಳನ್ನು 40 ದಿನಗಳಲ್ಲಿ ಸಂಗ್ರಹಿಸಿ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ಕಲ್ಪಿಸಲು ಸಿದ್ಧತೆ ನಡೆಸುತ್ತಿದೆ. ನಮ್ಮ ಸೋದರ ಸಮುದಾಯಗಳ ಸಚಿವರಿಗೆ ಧನ್ಯವಾದಗಳನ್ನು ತಿಳಿಸಬೇಕು. ಎಲ್ಲಾ ಸಚಿವರು ಈ ಒಳಮೀಸಲಾತಿ ಅನುಷ್ಠಾನಕ್ಕೆ ಬೆಂಬಲವಾಗಿದ್ದಾರೆ ಎಂದರು.

ಸಂಸದ ಗೋವಿಂದ ಕಾರಜೋಳ ಮಾತನಾಡಿ, ಸದಾಶಿವ ಆಯೋಗ ಸೇರಿದಂತೆ ಇತರೆ ವರದಿಗಳಲ್ಲಿ ದತ್ತಾಂಶ ಸಂಗ್ರಹವಿತ್ತು. ಅದನ್ನಿಟ್ಟುಕೊಂಡೇ ಒಳ ಮೀಸಲು ಜಾರಿ ಮಾಡಬಹುದಿತ್ತು. ಸುಪ್ರೀಂ ಕೋರ್ಟ್‌ ಆಗಸ್ಟ್ ನಲ್ಲಿಯೇ ಒಳ ಮೀಸಲು ಜಾರಿಗೆ ಆಯಾ ರಾಜ್ಯಗಳಿಗೆ ಅಧಿಕಾರಿ ನೀಡಿತ್ತು. ಸಿಎಂ ಸಿದ್ದರಾಮಯ್ಯ ಅವರು ನಾಗಮೋಹನದಾಸ್ ಆಯೋಗ ನೇಮಕ ಮಾಡಿದ್ದರು. ಗಡುವು ಮುಗಿದೆ ನಂತರ ಮತ್ತೆ ಎರಡು ತಿಂಗಳು ಕಾಲಾವಕಾಶ ಕೋರಿದ್ದಾರೆ. ಇಷ್ಟು ದಿನ ಕಾದಿದ್ದೇವೆ. ಇನ್ನೆರೆಡು ತಿಂಗಳು ಸರ್ಕಾರದ ನಡೆಯ ಗಮನಿಸೋಣ. ಈ ವಿಚಾರದಲ್ಲಿ ಪಕ್ಷಾತೀತ ನಿಲುವಿಗೆ ಬದ್ದರಾಗಿರೋಣವೆಂದರು. ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ಸಮುದಾಯಕ್ಕೆ ಒಳಮೀಸಲು ಜಾರಿ ಆದೇ ಆಗುತ್ತದೆ. ಈಗ ತಡವಾಗಿದೆ, ಮತ್ತಷ್ಟು ತಡಮಾಡಬಾರದು ಎಂಬ ಸಂದೇಶವನ್ನು ಸರ್ಕಾರಕ್ಕೆ ರವಾನಿಸಿದ್ದೇವೆ. ಎರಡು ತಿಂಗಳಲ್ಲಿ ಜಾರಿ ಮಾಡದಿದ್ದರೆ ಹೋರಾಟವನ್ನು ತೀವ್ರ ಗೊಳಿಸಬೇಕಾಗುತ್ತದೆ. ಎಲ್ಲ ಪಕ್ಷದ ಮುಖಂಡರು ಈ ಬಗ್ಗೆ ತೀರ್ಮಾನ ಕೈಗೊಳ್ಲುತ್ತಾರೆ ಎಂದರು.

ಮಾದಿಗ ಸಮುದಾಯವ ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಕಟ್ಟುವ ಸಾಧ್ಯತೆ ಆಧಾರದ ಮೇಲೆ ಮಾದಾರ ಚೆನ್ನಯ್ಯ ಸೇವಾ ಸಮಿತಿ ಕಾರ್ಯನಿರ್ವಹಿಸುತ್ತಿದೆ. 2ನೇ ಸಮಾವೇಶಕ್ಕೆ ಉತ್ತಮ ಸ್ಪಂದನೆ ದೊರೆತಿದೆ. ಸಮುದಾಯದ ಏಳಿಗೆಗೆ ಎಲ್ಲರೂ ಪಣ ತೊಡೋಣ. ಮುಖಂಡರು ಯಾವುದೇ ಪಕ್ಷದಲ್ಲಿರಲಿ ಸಮುದಾಯದ ಪ್ರಶ್ನೆ ಬಂದಾಗ ಒಗ್ಗಟ್ಟು ಪ್ರದರ್ಶಿಸಬೇಕು. ಹೋರಾಟಗಳಿಗೆ ದನಿಗೂಡಿಸಬೇಕೆಂದು ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು.

ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ರಮೇಶ್ ಜಿಗಣಿಗಿ, ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಮಾಜಿ ಶಾಸಕರಾದ ತಿಮ್ಮರಾಯಪ್ಪ, ಬಸವರಾಜ ಧಡೆಸುಗೂರು, ಸುಜಾತ ದೊಡ್ಡಮನಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.