ಸಾರಾಂಶ
ಕನಕಪುರ: ಇತ್ತೀಚೆಗೆ ರಾಮನಗರ ಜಿಲ್ಲೆ ಹೆಸರು ಬದಲಾವಣೆ ಸುದ್ದಿ ತುಂಬಾ ಹರಿದಾಡುತ್ತಿದೆ. ಒಬ್ಬೊಬ್ಬ ರಾಜಕೀಯ ನಾಯಕರ ಬಾಯಲ್ಲಿ ಒಂದೊಂದು ರೀತಿಯಲ್ಲಿ ವೈಭವೀಕರಣಗೊಳ್ಳುತ್ತಿದೆ ಎಂದು ಸಂವಿಧಾನ ಬಳಗದ ಮುಖ್ಯಸ್ಥ ಹೆಗ್ಗನೂರು ಶಿವಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಆಳ್ವಿಕೆ ಸಂದರ್ಭದಲ್ಲಿ ಜಿಲ್ಲೆಯನ್ನು ನವ ಬೆಂಗಳೂರು ಎಂದು ಹೊಸ ನಾಮಕರಣ ಮಾಡಲು ಹೊರಟು ಬಂಡವಾಳ ಹೂಡಿಕೆದಾರರ ಕೊರತೆಯೋ ಅಥವಾ ಸರ್ಕಾರದ ಬೊಕ್ಕಸಕ್ಕೆ ಬರಬೇಕಾದ ಲಾಭ ನಷ್ಟಗಳ ವ್ಯತ್ಯಾಸವೋ ಹಾಗೆಯೇ ನೆನಗುದಿಗೆ ಬಿದ್ದಿತು ಎಂದು ಬೇಸರ ವ್ಯಕ್ತಪಡಿಸಿದರು.ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂದು ಇದ್ದಾಗ ರಾಮನಗರ ಜಿಲ್ಲೆಯ ಕನ್ನಡಿಗರು ಇತರೆ ದೇಶಗಳಿಗೆ, ರಾಜ್ಯಗಳಿಗೆ, ಹೋದ ವೇಳೆ ನಾವು ಬೆಂಗಳೂರು ಜಿಲ್ಲೆಯವರು ಎಂದು ಉಬ್ಬೇರಿಸಿ ನೋಡುತ್ತಿದ್ದರು. ಬೆಂಗಳೂರು ಎಂದಾಕ್ಷಣ ಇಡೀ ವಿಶ್ವವೇ ತಿರುಗಿ ನೋಡುವಷ್ಟು ಪ್ರಸಿದ್ಧಿ. ಗ್ರೀನ್ ಸಿಟಿ, ಬ್ಯೂಟಿಪುಲ್ ಸಿಟಿ ಎಂದೆಲ್ಲಾ ಕರೆಯುವುದುಂಟು. ಆದರೆ ರಾಮನಗರ ಜಿಲ್ಲೆ ಎಂದರೆ ಕರ್ನಾಟಕದ ಯಾವುದೋ ಒಂದು ಪುಟ್ಟ ಜಿಲ್ಲೆಯಿಂದ ಬಂದವರು ಎನ್ನುವಂತಾಗಿದೆ. ಕನ್ನಡ ನಾಡಿನ ಜನತೆಗೆ ರಾಮನಗರ ಎನ್ನುವುದು ಕರ್ನಾಟಕದಲ್ಲಿದೆ ಎಂದು ವಿದೇಶದಲ್ಲಿ ಹೊರ ರಾಜ್ಯಗಳಲ್ಲಿ ಮತ್ತೆ ಹೇಳಬೇಕಿದೆ ಎಂದು ಹೇಳಿದರು.
ಈಗ ರಾಮನಗರವನ್ನು ದಕ್ಷಿಣ ಬೆಂಗಳೂರು ಎಂದು ಮರು ನಾಮಕರಣ ಮಾಡುವುದರಿಂದ ರಾಮನಗರ ಬೆಂಗಳೂರಿನ ಒಂದು ಭಾಗ ಎಂದು ಗುರುತಿಸುವುದರ ಜೊತೆಗೆ ಹೊರ ರಾಜ್ಯದ/ದೇಶದ ಹೂಡಿಕೆದಾರರು ಸುಲಭವಾಗಿ ಪ್ರವೇಶಿಸಿ ಸ್ಥಳೀಯ ಜನರಿಗೆ ಉದ್ಯೋಗ ಸೃಷ್ಟಿಯಾಗುವುದರ ಜೊತೆಗೆ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಇಡೀ ಜಿಲ್ಲೆಗೆ ಒಂದು ಅಭಿವೃದ್ಧಿಯ ಬಲ ಬಂದಂತಾಗುತ್ತದೆ ಎಂದು ಹೇಳಿದರು.ಇದು ಕೇವಲ ರಾಜಕೀಯ ಕ್ಷೇತ್ರದ ಭದ್ರಕೋಟೆ ಎನ್ನುವ ಒಂದೇ ಉದ್ದೇಶವಾಗದೇ ನನ್ನ ಜಿಲ್ಲೆ ಹೆಮ್ಮೆಯ ಜಿಲ್ಲೆ ಎನ್ನುವಂತಾಗಬೇಕು. ಸಾವಿರಾರು ಹೂಡಿಕೆದಾರರು ಮತ್ತು ವಿದೇಶಿ ವಿದ್ಯಾರ್ಥಿಗಳು ಬರಬೇಕಾದರೆ ರಾಮನಗರ ಜಿಲ್ಲೆಯನ್ನು ದಕ್ಷಿಣ ಬೆಂಗಳೂರು ಅಥವಾ ನವ ಬೆಂಗಳೂರು ಎಂದು ಮರು ನಾಮಕರಣ ಮಾಡಿದಾಗಲೇ ಜಿಲ್ಲೆಯ ಅಭಿವೃದ್ಧಿ ಸಾಧ್ಯ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.