8 ನೇ ವಾರ್ಡ್‌ನ ಸದಸ್ಯ ರಮೇಶ ಹ್ಯಾಟಿ ಅಧ್ಯಕ್ಷರಾಗುವುದು ಪಕ್ಕಾ ಆಗಿದೆ. ಕಾಂಗ್ರೆಸ್ ಪಕ್ಷದ ಸದಸ್ಯರು ಹೈಕಮಾಂಡ್ ಸಭೆಯಲ್ಲಿ ಈ ಕುರಿತು ನಿರ್ಧಾರವಾಗಿದ್ದು

ಸೋಮರಡ್ಡಿ ಅಳವಂಡಿ ಕೊಪ್ಪಳ

ಭಾರಿ ಕುತೂಹಲ ಕೆರಳಿರುವ ಭಾಗ್ಯನಗರ ಪಪಂ ಅಧ್ಯಕ್ಷ ಸ್ಥಾನಕ್ಕೆ ಡಿ.31ರಂದು ಚುನಾವಣೆ ನಡೆಯಲಿದ್ದು, ಭಾರಿ ಪೈಪೋಟಿಯ ನಡುವೆಯ ಕಾಂಗ್ರೆಸ್ ಪಕ್ಷದ ರಮೇಶ ಹ್ಯಾಟಿ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ.

ಹಾಲಿ ಅಧ್ಯಕ್ಷ ತುಕಾರಾಮಪ್ಪ ಗಡಾದ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು, ತೆರೆಮರೆಯಲ್ಲಿ ಭಾರಿ ಪೈಪೋಟಿ ನಡೆಯುತ್ತಿದೆ.

ಬಿಜೆಪಿಯಿಂದಲೂ ಅಭ್ಯರ್ಥಿ ಕಣಕ್ಕೆ ಇಳಿಸುವ ಸಾಧ್ಯತೆ ಇದ್ದು, ಯಾರನ್ನು ಕಣಕ್ಕೆ ಇಳಿಸುತ್ತಾರೆ ಎನ್ನುವುದು ತಡರಾತ್ರಿಯವರೆಗೂ ಗುಟ್ಟಾಗಿಯೇ ಇರಿಸಲಾಗಿದೆ.

ಏನಿದೆ ಬಲಾಬಲ?:ಭಾಗ್ಯನಗರ ಪಪಂನಲ್ಲಿ ಒಟ್ಟು 19 ಸದಸ್ಯ ಬಲ ಇದ್ದು, ಇದರಲ್ಲಿ ಬಿಜೆಜಿ 9, ಕಾಂಗ್ರೆಸ್ 8 ಹಾಗೂ ಪಕ್ಷೇತರರು 2 ಸದಸ್ಯರಿದ್ದಾರೆ. ಪಕ್ಷೇತರರು ಇಬ್ಬರು ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವುದರಿಂದ ಕಾಂಗ್ರೆಸ್ ಪಕ್ಷ 10 ಸದಸ್ಯ ಬಲ ಹೊಂದಿದೆ. ಜತೆಗೆ ಸಂಸದರು ಮತ್ತು ಶಾಸಕರಿಬ್ಬರ ಮತಗಳು ಬಲವೂ ಕಾಂಗ್ರೆಸ್ ಪಕ್ಷಕ್ಕೆ ದೊರೆಯುವುದರಿಂದ ಸಹಜವಾಗಿಯೇ ಕಾಂಗ್ರೆಸ್ ಪಕ್ಷಕ್ಕೆ 12 ಸದಸ್ಯ ಬಲ ಹೊಂದಿ, ಬಹುಮತ ಪಡೆಯುವುದಕ್ಕೆ ಲೆಕ್ಕಾಚಾರ ಪಕ್ಕಾ ಆಗಿದೆ.

ರಮೇಶ ಹ್ಯಾಟಿ ಅಧ್ಯಕ್ಷ: 8 ನೇ ವಾರ್ಡ್‌ನ ಸದಸ್ಯ ರಮೇಶ ಹ್ಯಾಟಿ ಅಧ್ಯಕ್ಷರಾಗುವುದು ಪಕ್ಕಾ ಆಗಿದೆ. ಕಾಂಗ್ರೆಸ್ ಪಕ್ಷದ ಸದಸ್ಯರು ಹೈಕಮಾಂಡ್ ಸಭೆಯಲ್ಲಿ ಈ ಕುರಿತು ನಿರ್ಧಾರವಾಗಿದ್ದು, ಕಾಂಗ್ರೆಸ್ ಪಕ್ಷದಿಂದ ಇವರು ಮಾತ್ರ ನಾಮಪತ್ರ ಸಲ್ಲಿಸಲಿದ್ದಾರೆ. ಹೀಗಾಗಿ ಇವರು ಆಯ್ಕೆಯಾಗುವ ಸಾಧ್ಯತೆ ನಿಚ್ಚಳವಾಗಿದೆ. 9 ಸದಸ್ಯ ಬಲ ಹೊಂದಿರುವ ಬಿಜೆಪಿ ಅಭ್ಯರ್ಥಿಯನ್ನು ಅಖಾಡಕ್ಕೆ ಇಳಿಸಿ ಶತಾಯಗತಾಯ ಪ್ರಯತ್ನ ಮಾಡಲಿದೆ.

ಗೋವಾದಲ್ಲಿ ಮಜಾ: ಕಾಂಗ್ರೆಸ್ ಪಾಳೆಯದ ಸದಸ್ಯರು ಈಗಾಗಲೇ ಗೋವಾದಲ್ಲಿ ಪ್ರವಾಸ ಮಾಡಿ ಮಜಾ ಮಾಡಿ, ಚುನಾವಣೆಗೆ ನೇರವಾಗಿ ಆಗಮಿಸಲಿದ್ದಾರೆ. ಕಳೆದ ವಾರವೇ ಪ್ರವಾಸ ಬೆಳೆಸಿದ್ದು, ಡಿ.31ರಂದು ಬೆಳಗ್ಗೆಯೇ ನೇರವಾಗಿ ಆಗಮಿಸಲಿದ್ದಾರೆ.