ಇತ್ತೀಚೆಗೆ ಯೂರೋಪಿನಿಂದ ಆಗಮಿಸಿರುವ ರ‍್ಯಾಪ್ಟರ್ ಹಕ್ಕಿ ಸಂಶೋಧಕರ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ.

ಗಜೇಂದ್ರಗಡ: ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಿಗೆ ಹೊಂದಿಕೊಂಡಿರುವ ಬೆಟ್ಟ ಪ್ರದೇಶಗಳಲ್ಲಿ ಉತ್ತಮ ಹುಲ್ಲುಗಾವಲು ಪರಿಸರ ಇರುವುದರಿಂದ ಯುರೋಪಿನಿಂದ ಹಲವಾರು ರ‍್ಯಾಪ್ಟರ್ ಹಕ್ಕಿಗಳು(ಮಾಂಟೆಗ್ ಹ್ಯಾರಿಯರ್‌) ವಲಸೆ ಬಂದಿದ್ದು. ಪಕ್ಷಿಪ್ರಿಯರಲ್ಲಿ ಸಂತಸ ಮೂಡಿಸಿದೆ.

ಪಟ್ಟಣದ ಕಲ್ಲಿನಕೋಟೆ ಹಾಗೂ ಸಮೀಪದ ಕಾಲಕಾಲೇಶ್ವರ, ಭೈರಾಪುರ ಹಾಗೂ ಭೈರಾಪುರ ತಾಂಡಾ, ಜಿಗೇರಿ, ನಾಗೇಂದ್ರಗಡ, ಪ್ಯಾಟಿ ಸೇರಿ ಇತರ ಗ್ರಾಮಗಳ ಸುತ್ತಲಿನ ಪ್ರದೇಶ ಕಲ್ಲಿನಿಂದ ಕೂಡಿದೆ. ಜತೆಗೆ ಅರಣ್ಯ ಪ್ರದೇಶ ಹಾಗೂ ಹುಲ್ಲುಗಾವಲು ಹೊಂದಿದೆ. ಹೀಗಾಗಿ ಚಿರತೆ ಸೇರಿ ಅನೇಕ ಕಾಡುಪ್ರಾಣಿಗಳು ವಾಸಸ್ಥಾನವಾಗಿದೆ. ಆದರೆ ಇತ್ತೀಚೆಗೆ ಯೂರೋಪಿನಿಂದ ಆಗಮಿಸಿರುವ ರ‍್ಯಾಪ್ಟರ್ ಹಕ್ಕಿ ಸಂಶೋಧಕರ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ.ಮಾಂಟೆಗ್ ಹ್ಯಾರಿಯರ್‌ ಎಂದು ಕರೆಯಲ್ಪಡುವ ಈ ರ‍್ಯಾಪ್ಟರ್ ಹಕ್ಕಿ ಅಕ್ಸಿಪಿಟ್ರಿಡೆ ಕುಟುಂಬಕ್ಕೆ ಸೇರಿದೆ. ಸರ್ಕಸ್ ಪೈಗಾರ್ಗಸ್‌ ಇದರ ವೈಜ್ಞಾನಿಕ ಹೆಸರು. ಯುರೋಪ್ ಮತ್ತು ಮಧ್ಯ ಏಷ್ಯಾ(ರಷ್ಯಾ, ಇತ್ಯಾದಿ ಸೇರಿದಂತೆ)ದ ತಮ್ಮ ಸಂತಾನೋತ್ಪತ್ತಿ ಸ್ಥಳಗಳಿಂದ ಆಫ್ರಿಕಾ(ಸಬ್- ಸಹಾರನ್, ಸಹೇಲ್) ಮತ್ತು ಭಾರತೀಯ ಉಪಖಂಡ(ಭಾರತ, ಶ್ರೀಲಂಕಾ)ದ ಪ್ರದೇಶಗಳಿಗೆ ಚಳಿಗಾಲದ ವೇಳೆ ವಲಸೆ ಹೋಗುತ್ತವೆ. ಶೀತ ಋತುಗಳಿಂದ ತಪ್ಪಿಸಿಕೊಳ್ಳಲು ಪ್ರಪಂಚದ ವಿವಿಧ ಮಾರ್ಗಗಳಿಂದ ಸಾವಿರಾರು ಕಿಲೋಮೀಟರ್ ಪ್ರಯಾಣಿಸುತ್ತವೆ.

ಪಶ್ಚಿಮ ಯುರೋಪ್‌ನ ಹ್ಯಾರಿಹರ್‌(ರ‍್ಯಾಪ್ಟರ್ ಹಕ್ಕಿ)ಗಳು ಆಫ್ರಿಕಾಕ್ಕೆ ವಲಸೆ ಹೋದರೆ ಪೂರ್ವ ಯುರೋಪ್‌ನ ಹ್ಯಾರಿಹರ್‌ಗಳು ಮಧ್ಯ ಏಷ್ಯಾಕ್ಕೆ ವಲಸೆ ಹೋಗುತ್ತವೆ. ಬೇಸಿಗೆ ಋತುವಿನಲ್ಲಿ ಹ್ಯಾರಿಹರ್‌ಗಳು ಯುರೋಪ್, ಫ್ರಾನ್ಸ್, ಸ್ಪೇನ್, ಯುಕೆ, ನೆದರ್‌ಲ್ಯಾಂಡ್, ರೊಮೇನಿಯಾ ಮತ್ತು ರಷ್ಯಾದ ಪ್ರದೇಶಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ.

ಚಳಿಗಾಲ ಋತುವಿನಲ್ಲಿ ಭಾರತದ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಮತ್ತು ಶ್ರೀಲಂಕಾದ ಹುಲ್ಲುಗಾವಲು ಪ್ರದೇಶಗಳಿಗೆ ವಲಸೆ ಬರುತ್ತವೆ. ಹ್ಯಾರಿಯರ್‌ಗಳು ಚಳಿಗಾಲಕ್ಕಾಗಿ ಚೆಚ್ಚಗಿನ ಹವಾಮಾನವನ್ನು ತಲುಪಲು ಸಾವಿರಾರು ಕಿಲೋಮಿಟರ್ ದೂರವನ್ನು ಕ್ರಮಿಸುವ ಮೂಲಕ ಮಹಾಪ್ರಯಾಣ ಕೈಗೊಳ್ಳುತ್ತವೆ. ಗಜೇಂದ್ರಗಡ ಬೆಟ್ಟ ಪ್ರದೇಶಗಳಲ್ಲಿ ಉತ್ತಮ ಹುಲ್ಲುಗಾವಲು ಪರಿಸರ ವ್ಯವಸ್ಥೆ ಇರುವುದರಿಂದ ಇಲ್ಲಿಗೆ ಯುರೋಪಿನಿಂದ ಹಲವಾರು ರ‍್ಯಾಪ್ಟರ್ ಹಕ್ಕಿಗಳು ವಲಸೆ ಬಂದಿವೆ ಎಂದು ಪಕ್ಷಿ ಸಂಶೋಧಕರಾದ ಪ್ರವೀಣ ಬಡ್ಡಿ, ಸಂಗಮೇಶ ಕಡಗದ ಮತ್ತು ರಾಜಶೇಖರ ಮೆಂತಾ ತಿಳಿಸಿದರು.