ರೈತರೊಬ್ಬರು ಬಸ್ಸಿನಲ್ಲಿ ಬಿಟ್ಟು ಹೋದ ಎಲೆಕ್ಟ್ರಿಕಲ್ ಮೋಟಾರ್ ಮತ್ತು ಅದರ ಉಪಕರಣಗಳನ್ನು ಬಸ್ಸಿನ ನಿರ್ವಾಹಕಿ ಅದರ ವಾರಸುದಾರರಿಗೆ ಹಿಂದಿರುಗಿಸಿದ ಘಟನೆ ಸೋಮವಾರ ತಾಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ನಡೆದಿದೆ. ಸಬೀನಾ ಎನ್. ಪ್ರಾಮಾಣಿಕತೆ ತೋರಿದ ನಿರ್ವಾಹಕಿ.

ರಾಣಿಬೆನ್ನೂರು: ರೈತರೊಬ್ಬರು ಬಸ್ಸಿನಲ್ಲಿ ಬಿಟ್ಟು ಹೋದ ಎಲೆಕ್ಟ್ರಿಕಲ್ ಮೋಟಾರ್ ಮತ್ತು ಅದರ ಉಪಕರಣಗಳನ್ನು ಬಸ್ಸಿನ ನಿರ್ವಾಹಕಿ ಅದರ ವಾರಸುದಾರರಿಗೆ ಹಿಂದಿರುಗಿಸಿದ ಘಟನೆ ಸೋಮವಾರ ತಾಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ನಡೆದಿದೆ. ಸಬೀನಾ ಎನ್. ಪ್ರಾಮಾಣಿಕತೆ ತೋರಿದ ನಿರ್ವಾಹಕಿ.

ನೂಕಾಪುರ ಗ್ರಾಮದ ರಾಜು ವಡೆಯರ ಎಂಬುವರು ಭಾನುವಾರ ನಗರದಲ್ಲಿ ಕೃಷಿ ಚಟುವಟಿಕೆಗೆ ನೀರು ಹಾಯಿಸಲು ಎಲೆಕ್ಟ್ರಿಕಲ್ ಮೋಟಾರ್ ಮತ್ತು ಅದರ ಉಪಕರಣಗಳನ್ನು ಖರೀದಿಸಿ ನಗರದಿಂದ ಚೌಡಯ್ಯದಾನಪುರ ಮಾರ್ಗವಾಗಿ ಗುತ್ತಲಕ್ಕೆ ಚಲಿಸುವ ಬಸ್ ಹತ್ತಿದ್ದರು. ಆದರೆ, ತಮ್ಮ ಗ್ರಾಮದಲ್ಲಿ ಇಳಿಯುವಾಗ ತಾವು ತಂದಿದ್ದ ಉಪಕರಣಗಳನ್ನು ಮರೆತು ಇಳಿದಿದ್ದರು. ನಂತರ ಸಂಜೆಯಾದ ಮೇಲೆ ಉಪಕರಣಗಳ ನೆನಪಾಗಿ ವಿವಿಧ ಭಾಗಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಕೊನೆಗೆ ನಿರ್ವಾಹಕಿ ಸಬೀನಾ ಎನ್. ಅವರನ್ನು ಫೋನ್ ಮೂಲಕ ಸಂಪರ್ಕಿಸಿದಾಗ ತಕ್ಷಣವೇ ಅವರು ಅದಕ್ಕೆ ಸ್ಪಂದಿಸಿ ಮೋಟಾರ್ ಸೀಟಿನ ಕೆಳಗಡೆ ಇತ್ತು. ಅದನ್ನು ಸುರಕ್ಷಿತವಾಗಿ ಇರಿಸಿದ್ದು ಬಂದು ತೆಗೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ಸೋಮವಾರ ಬೆಳಗ್ಗೆ ಚಾಲಕ ಪ್ರಕಾಶ ಹೆಗ್ಗೋಳ ಮತ್ತು ನಿರ್ವಾಹಕಿ ಸಬೀನಾ ಅವರು ಚೌಡಯ್ಯದಾನಪುರ ಗ್ರಾಮದಲ್ಲಿ ಎಲೆಕ್ಟ್ರಿಕಲ್ ಮೋಟಾರ್ ಮತ್ತು ಅದರ ಉಪಕರಣಗಳನ್ನು ರೈತ ರಾಜು ವಡೆಯರ ಅವರಿಗೆ ಮರಳಿಸಿದರು.