ಪತ್ರ ಬರಹಗಾರರ ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಜಿಲ್ಲಾ ದಸ್ತಾವೇಜು ಬರಹಗಾರರ ಕ್ಷೇಮಾಭಿವೃದ್ಧಿ ಸಂಘದಿಂದ ಯಲಬುರ್ಗಾ ಪಟ್ಟಣದ ಉಪನೋಂದಣಾಧಿಕಾರಿಗಳ ಕಚೇರಿ ಆವರಣದಲ್ಲಿ ಮುಷ್ಕರ ನಡೆಸಲಾಯಿತು.

ಯಲಬುರ್ಗಾ: ಪತ್ರ ಬರಹಗಾರರ ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಜಿಲ್ಲಾ ದಸ್ತಾವೇಜು ಬರಹಗಾರರ ಕ್ಷೇಮಾಭಿವೃದ್ಧಿ ಸಂಘದಿಂದ ಪಟ್ಟಣದ ಉಪನೋಂದಣಾಧಿಕಾರಿಗಳ ಕಚೇರಿ ಆವರಣದಲ್ಲಿ ಮುಷ್ಕರ ನಡೆಸಲಾಯಿತು.

ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪರಶುರಾಮ ಹೊಸ್ಮನಿ ಮಾತನಾಡಿ, ಹೊರ ರಾಜ್ಯದಲ್ಲಿರುವಂತೆ ನಮ್ಮ ರಾಜ್ಯದಲ್ಲಿ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ನೀಡಬೇಕು. ಕಾವೇರಿ ೨.೦ ತಂತ್ರಾಂಶದಲ್ಲಿ ಆಗುತ್ತಿರುವ ತೊಂದರೆಗಳನ್ನು ಆದಷ್ಟು ಬೇಗನೆ ಸರಿಪಡಿಸಬೇಕು. ನೋಂದಣಿ ಆಗುವ ಎಲ್ಲ ದಸ್ತಾವೇಜುಗಳಿಗೆ ಕಡ್ಡಾಯವಾಗಿ ಪತ್ರ ಬರಹಗಾರರ ಅಥವಾ ವಕೀಲರ ಬಿ ಕಲಂ ಕಡ್ಡಾಯಗೊಳಿಸಬೇಕು. ಅನಧಿಕೃತ ವ್ಯಕ್ತಿಗಳನ್ನು ತಡೆಗಟ್ಟುವುದು ಮತ್ತು ರಾಜ್ಯದ ಎಲ್ಲ ಪತ್ರ ಬರಹಗಾರರಿಗೆ ಏಕ ಮಾದರಿಯ ಗುರುತಿನ ಚೀಟಿ ನೀಡಬೇಕು. ೧೯೭೮ರಿಂದಲೂ ಸೇವೆ ಮಾಡುತ್ತ ಬಂದಿರುವ ದಸ್ತಾವೇಜು ಬರಹಗಾರರಿಗೆ ಸೇವಾ ಭದ್ರತೆ ಒದಗಿಸಬೇಕು. ಇವೆಲ್ಲ ಬೇಡಿಕೆ ಈಡೇರದಿದ್ದರೆ ಬೆಳಗಾವಿಯ ಸುವರ್ಣ ಸೌಧದ ಮುಂದೆ ಧರಣಿ ನಡೆಸಲಾಗುವುದು ಎಂದು ಒತ್ತಾಯಿಸಿದರು.

ಹೋರಾಟಗಾರರಾದ ವಸಂತ ಭಾವಿಮನಿ, ಡಿ.ಕೆ. ಪರಶುರಾಮ ಮಾತನಾಡಿ, ದಸ್ತಾವೇಜು ಬರಹಗಾರರ ಹಲವು ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು. ಅವರಿಗೆ ಸೇವಾ ಭದ್ರತೆ ಒದಗುಸುವ ಜತೆಗೆ ಅನಧಿಕೃತ ಪತ್ರ ಬರಹಗಾರರನ್ನು ತಡೆಗಟ್ಟಬೇಕು ಎಂದರು.

ಈ ಸಂದರ್ಭ ಎ.ಎಂ. ಕೊಪ್ಪಳ, ನಜೀರ್‌ಸಾಬ್ ಹಿರೇಮನಿ, ಖಾಜಾಸಾಬ್ ಅತ್ತಾರ, ಯು.ಎಂ. ಕೊಪ್ಪಳ, ನಾಗರಾಜ ಬಂಕದಮನಿ, ರಾಘವೇಂದ್ರ ದೊಡ್ಮನಿ, ಮಹ್ಮದ್‌ರಫಿ, ರಾಕೇಶ ಹೊಸ್ಮನಿ, ಶರಣಪ್ಪ, ಶರಣು ಹಂಪಣ್ಣವರ, ವೆಂಕಟೇಶ ಜಾಲಗಾರ, ಕೃಷ್ಣ ಮುಖ್ತೇದಾರ್, ವಕೀಲ ಹಿರೇಗೌಡ್ರ, ಮಂಜುನಾಥ ಜಾಲಗಾರ, ರವಿಕುಮಾರ ಲಕ್ಷ್ಮೇಶ್ವರ‌ ಮತ್ತಿತರರು ಭಾಗವಹಿಸಿದ್ದರು.

ಮುಷ್ಕರ ಬಳಿಕ ಉಪನೋಂದಣಾಧಿಕಾರಿ ಹಾಗೂ ತಹಸಿಲ್ ಕಚೇರಿಗೆ ಮನವಿ ಸಲ್ಲಿಸಲಾಯಿತು.