ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ವಾರ್ಡ್ ನಂ. 4ರ ನಿವಾಸಿ ಗಂಗವ್ವ ಬಸವರಾಜ ರಿತ್ತಿ ಎಂಬುವರ ಮನೆಗೆ ಶನಿವಾರ ಅಡಿಪಾಯ ಅಗೆಯುವ ಸಂದರ್ಭದಲ್ಲಿ ಅಪಾರ ಪ್ರಮಾಣದ (ಅರ್ಧ ಕೆಜಿಗೂ ಅಧಿಕ) ಬಂಗಾರದ ಆಭರಣಗಳು ಪತ್ತೆಯಾಗಿವೆ.
ವಿಶೇಷ ವರದಿ
ಗದಗ: ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಐತಿಹಾಸಿಕ ಪರಂಪರೆ ಎಷ್ಟು ಶ್ರೀಮಂತವಾಗಿದೆಯೋ ಅಲ್ಲಿನ ಮಣ್ಣು ಕೂಡಾ ಅಷ್ಟೇ ಶ್ರೀಮಂತವಾಗಿದೆ. ಅದಕ್ಕೆ ಉತ್ತಮ ಉದಾಹರಣೆ ಎನ್ನುವಂತೆ ಶನಿವಾರ ಗ್ರಾಮದ ವಾರ್ಡ್ ನಂ. 4ರ ನಿವಾಸಿ ಗಂಗವ್ವ ಬಸವರಾಜ ರಿತ್ತಿ ಎಂಬುವರ ಮನೆಗೆ ಅಡಿಪಾಯ ಅಗೆಯುವ ಸಂದರ್ಭದಲ್ಲಿ ಅಪಾರ ಪ್ರಮಾಣದ (ಅರ್ಧ ಕೆಜಿಗೂ ಅಧಿಕ) ಬಂಗಾರದ ಆಭರಣಗಳು ಪತ್ತೆಯಾಗಿವೆ.ಚಾಲುಕ್ಯರ ಕಾಲದಲ್ಲಿ ಠಂಕಸಾಲೆ (ನಾಣ್ಯಗಳ ಮುದ್ರಣ) ಮತ್ತು ಅತ್ತಿಮಬ್ಬೆ ಕಾಲದಲ್ಲಿ ದೇಶದಲ್ಲೆ ಹೆಸರಾಂತ ನಾಡಾಗಿದ್ದ ಜಿಲ್ಲೆಯ ಲಕ್ಕುಂಡಿ ಪ್ರವಾಸೋದ್ಯಮ ಕ್ಷೇತ್ರವನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಲು ಬೇಕಾದ ಎಲ್ಲ ಅರ್ಹತೆಗಳನ್ನು ಹೊಂದಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಪ್ರತಿಪಾದನೆ ಮಾಡುತ್ತಲೇ ಬಂದಿದ್ದಾರೆ. ಈಗ ದೊರೆತ ಚಿನ್ನದ ನಿಧಿ ಮತ್ತೊಮ್ಮೆ ಲಕ್ಕುಂಡಿಯತ್ತ ಸಂಶೋಧಕರು ಕಣ್ಣರಳಿಸಿ ನೋಡುವಂತಾಗಿದೆ. ಅಲ್ಲದೇ ಸಚಿವರ ಪ್ರತಿಪಾದನೆಗೆ ಪುಷ್ಟಿ ನೀಡಿದೆ.
ಘಟನೆ ವಿವರ: ಗ್ರಾಮದ ನಿವಾಸಿ ಅತ್ಯಂತ ಬಡ ಕುಟುಂಬವಾಗಿರುವ ಗಂಗವ್ವ ಬಸವರಾಜ ರಿತ್ತಿ ಎಂಬವರ ಮನೆಗೆ ಅಡಿಪಾಯ ಅಗೆಯುವ ಸಂದರ್ಭದಲ್ಲಿ ಒಂದು ತಾಮ್ರದ ಚಿಕ್ಕ ಬಿಂದಿಗೆ ಸಿಕ್ಕಿದೆ. ಅದನ್ನು ಪರಿಶೀಲಿಸಿದಾಗ ಅದರಲ್ಲಿ ಚಿನ್ನಾಭರಣಗಳು ಇರುವುದು ಕಂಡುಬಂದಿದೆ. ಇದರಲ್ಲಿ ಅರ್ಧ ಕೆಜಿಗೂ ಅಧಿಕ ತೂಕದ ಚಿನ್ನಾಭರಣಗಳು (ನಿಧಿ) ಇರಬಹುದು ಎನ್ನಲಾಗಿದೆ.ಉತ್ತರ ಕರ್ನಾಟಕ ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ಅಪರೂಪದ ಬಂಗಾರದ ಆಭರಣಗಳು ಸಿಕ್ಕಿವೆ ಎನ್ನಲಾಗಿದೆ. ದೊರೆತ ಚಿನ್ನಾಭರಣಗಳು ಯಾರ ಕಾಲದ್ದು? ಅವುಗಳ ಮೇಲೆ ಏನೆಲ್ಲ ಬರೆಯಲಾಗಿದೆ ಎನ್ನುವುದು ತಜ್ಞರ ಪರಿಶೀಲನೆಯಿಂದಲೇ ತಿಳಿದು ಬರಬೇಕಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಲಕ್ಕುಂಡಿ ಪ್ರಾಧಿಕಾರದ ಸದಸ್ಯರು ಮತ್ತು ಪುರಾತತ್ವ ಇಲಾಖೆ ಸಿಬ್ಬಂದಿ, ಅಪರ ಜಿಲ್ಲಾಧಿಕಾರಿ ದುರಗೇಶ, ಎಸ್ಪಿ ರೋಹನ್ ಜಗದೀಶ ಇತರರು ಭೇಟಿ ನೀಡಿ ಪರಿಶೀಲಿಸಿದರು.
ಮನುಷ್ಯ ಬಳಕೆ ಆಭರಣಗಳು: ಪತ್ತೆಯಾದ ಚಿನ್ನಾಭರಣಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇವು ರಾಜರ ಕಾಲದಲ್ಲಿ ಬಳಕೆ ಮಾಡುತ್ತಿದ್ದ ವಸ್ತುಗಳು ಎನ್ನುವುದು ಕಂಡು ಬರುತ್ತದೆ. ಎರಡು ಬಂಗಾರದ ಕಾಲಿನ ಚೈನುಗಳು, ಬಂಗಾರದ ಕೈಗಡ, ವಿವಿಧ ರೀತಿಯ ಕುತ್ತಿಗೆಯ ಹಾರಗಳು ಲಭ್ಯವಾಗಿದ್ದು, ಇದರೊಟ್ಟಿಗೆ ಕೆಲವೊಂದಿಷ್ಟು ವೃತ್ತಾಕಾರದ ನಾಣ್ಯದ ರೀತಿಯ ಆಭರಣಗಳು ದೊರೆತಿವೆ. ಇತಿಹಾಸ ತಜ್ಞರು ಸೇರಿದಂತೆ ಜಿಲ್ಲೆಯಾದ್ಯಂತ ಬಹುದೊಡ್ಡ ಚರ್ಚೆಗೆ ಆಭರಣಗಳು ಕಾರಣವಾಗಿವೆ.ಶ್ರೀಮಂತ ಸಂಸ್ಕೃತಿ ಇನ್ನಾದರೂ ಪರಿಚಿತವಾಗಲಿ: ಲಕ್ಕುಂಡಿ ಕೇವಲ ಅಪರೂಪದ ಕೆತ್ತನೆ ಮಾತ್ರವಲ್ಲ, ಅಲ್ಲಿನ ನೆಲದಲ್ಲಿಯೂ ಬಹುದೊಡ್ಡ ಸಂಸ್ಕೃತಿ ಮತ್ತು ಶ್ರೀಮಂತಿಕೆ ಅಡಗಿದೆ ಎನ್ನುವುದಕ್ಕೆ ಶನಿವಾರದ ಘಟನೆ ಸಾಕ್ಷಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಉತ್ಖನನಕ್ಕೆ ಚಾಲನೆ ನೀಡಿ ಆರೇಳು ತಿಂಗಳುಗಳೇ ಗತಿಸಿದ್ದರೂ ಕಾರ್ಯ ಆರಂಭವಾಗಿಲ್ಲ. ಇನ್ನಾದರೂ ಇದಕ್ಕೆ ವೇಗ ಸಿಗುತ್ತಾ ಎನ್ನುವುದು ಕಾಯ್ದು ನೋಡಬೇಕು.ಲಕ್ಕುಂಡಿಯಲ್ಲಿನ ಸಾಕಷ್ಟು ಶ್ರೀಮಂತ ಪರಂಪರೆ ಇದೆ. ಇಲ್ಲಿನ ಮಣ್ಣಿನಲ್ಲಿ ಚಿನ್ನವಿದೆ ಎನ್ನುವ ಹಿರಿಯ ಮಾತಿಗೆ ಪೂರಕ ಸಾಕ್ಷಿ ಎನ್ನುವಂತೆ ಶನಿವಾರ ಅಪರೂಪದ ಬಂಗಾರದ ಆಭರಣಗಳು ದೊರೆತಿವೆ. ಪ್ರಸ್ತುತ ನಿಧಿ ಸಿಕ್ಕಿರುವುದು ಉತ್ಖನನ ಕಾರ್ಯಕ್ಕೆ ಮತ್ತಷ್ಟು ಉತ್ಸಾಹ ತುಂಬಲಿದೆ ಎಂದು ಲಕ್ಕುಂಡಿ ಪ್ರಾಧಿಕಾರ ಸದಸ್ಯ ಸಿದ್ದು ಪಾಟೀಲ ಹೇಳುತ್ತಾರೆ.