ಸಾರಾಂಶ
ಬಸವ ಜಯಂತಿ ನಿಮಿತ್ತ ಕಾರಟಗಿಯ ನವಲಿ ರಸ್ತೆಯಲ್ಲಿನ ಕೆರೆ ಬಸವೇಶ್ವರ ದೇವಸ್ಥಾನದ ರಥೋತ್ಸವ ಶುಕ್ರವಾರ ಸಂಜೆ ಸಂಭ್ರಮದಿಂದ ನಡೆಯಿತು. ಬೆಳಗ್ಗೆ ದೇವಸ್ಥಾನದಲ್ಲಿ ಕೆರೆ ಬಸವೇಶ್ವರ ಉದ್ಭವ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರಗಳು ನಡೆದವು.
ಕಾರಟಗಿ: ಬಸವ ಜಯಂತಿ ನಿಮಿತ್ತ ಇಲ್ಲಿನ ನವಲಿ ರಸ್ತೆಯಲ್ಲಿನ ಕೆರೆ ಬಸವೇಶ್ವರ ದೇವಸ್ಥಾನದ ರಥೋತ್ಸವ ಶುಕ್ರವಾರ ಸಂಜೆ ಸಂಭ್ರಮದಿಂದ ನಡೆಯಿತು.
ಶುಕ್ರವಾರ ಮಧ್ಯಾಹ್ನ ವೀರಭದ್ರೇಶ್ವರ ದೇವಸ್ಥಾನದಿಂದ ಪಲ್ಲಕ್ಕಿ ಉತ್ಸವದ ಮೂಲಕ ಉತ್ಸವ ಮೂರ್ತಿಯನ್ನು ತರಲಾಯಿತು. ಆನಂತರ ಉತ್ಸವಕ್ಕೆ ಕಳಸಧಾರಣೆ ಮತ್ತು ವಿಧಿವಿಧಾನಗಳನ್ನು ಪೂರೈಸಿದ ಬಳಿಕ ಅಲಂಕೃತ ರಥದಲ್ಲಿ ಉತ್ಸವ ಮೂರ್ತಿ ಸ್ಥಾಪಿಸಲಾಯಿತು. ಆ ಬಳಿಕ ನಿಗದಿಪಡಿಸಿದ್ದ ಮುಹೂರ್ತದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥ ಎಳೆಯುತ್ತಿದ್ದಂತೆ ನೆರೆದಿದ್ದ ಭಕ್ತರು ಹೂವು, ಉತ್ತತ್ತಿ ಮತ್ತು ಬಾಳೆಹಣ್ಣು ಅರ್ಪಿಸಿದರು. ರಥೋತ್ಸವ ಪಾದಗಟ್ಟೆ ತಲುಪಿ ಅಲ್ಲಿಂದ ಮರಳಿ ಸ್ವಸ್ಥಾನಕ್ಕೆ ಬಂದು ತಲುಪಿತು.ಹೆಬ್ಬಾಳಮಠದ ಡಾ. ನಾಗಭೂಷಣ ಶಿವಾಚಾರ್ಯರು ರಥೋತ್ಸವದ ಸಾನ್ನಿಧ್ಯ ವಹಿಸಿದ್ದರು. ಮರಳಸಿದ್ದಯ್ಯ ಹಿರೇಮಠ ನೇತೃತ್ವದಲ್ಲಿ ರಥಕ್ಕೆ ವಿಶೇಷ ಪೂಜೆಗಳು ನಡೆದವು. ಬೆಳಗ್ಗೆ ದೇವಸ್ಥಾನದಲ್ಲಿ ಕೆರೆ ಬಸವೇಶ್ವರ ಉದ್ಭವ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರಗಳು ನಡೆದವು. ವೀರಶೈವ ಯುವಕ ಸಂಘದ ನೇತೃತ್ವದಲ್ಲಿ ದೇವಸ್ಥಾನದಲ್ಲಿ ಕಾರ್ಯಕ್ರಮಗಳು ನಡೆದವು. ಸಂಘದ ಪದಾಧಿಕಾರಿಗಳು ಇದ್ದರು.
ಕಾರ್ಯಕ್ರಮ: ಆನಂತರ ದೇವಸ್ಥಾನದ ಆವರಣದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಹೆಬ್ಬಾಳ ಡಾ. ನಾಗಭೂಣಷ ಸ್ವಾಮೀಜಿ ಮತ್ತು ಬೂದುಗುಂಪಾದ ಸಿದ್ದೇಶ್ವರ ದೇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ೧೨ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ಮಾಡಿದ ಬಸವಣ್ಣನವರ ವಿಚಾರ, ಕಾಯಕ ದಾಸೋಹ ಕುರಿತು ಶ್ರೀಗಳು ಮಾತನಾಡಿದರು. ಆನಂತರ ಹಾಸ್ಯ ಕಲಾವಿದ ಕೊಟ್ರೇಶ ಕೂಡ್ಲಿಗಿ ಅವರಿಂದ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಹಿರೇಮಠದ ಮರಳುಸಿದ್ದಯ್ಯ ಸ್ವಾಮಿ, ವೀರಶೈವ ಯುವಕ ಸಂಘದ ಅಧ್ಯಕ್ಷ ಜಿ. ಯಂಕನಗೌಡ ಇದ್ದರು.