ಕೊರತೆಗಳಿಗೆ ಅಗ್ರ ಪ್ರಾತಿನಿಧ್ಯ ನೀಡದೇ ಸಾಧನೆಯತ್ತ ಸಾಗಿ

| Published : May 11 2024, 01:31 AM IST

ಸಾರಾಂಶ

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಲೋಕುರ ಗ್ರಾಮದ ಸಿದ್ಧಾಂತ ಗಡಗೆಯವರ ತೋಟಕ್ಕೆ ಶುಕ್ರವಾರ ಶಾಸಕ ರಾಜು ಕಾಗೆ ತೆರಳಿ ಸಿಹಿ ತಿನ್ನಿಸಿ ಸನ್ಮಾನಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಜೀವನದಲ್ಲಿ ಕೊರತೆಗಳು ಇರುತ್ತವೆ. ಅವುಗಳನ್ನು ದೂಷಿಸುತ್ತ ಅವುಗಳಿಗೆ ಅಗ್ರ ಪ್ರಾತಿನಿಧ್ಯ ನೀಡುವ ಬದಲು ಸಾಧನೆಗೆ ಬೇಕಾದ ತಯಾರಿ ಮಾಡಿಕೊಳ್ಳಬೇಕು. ಇಂಥಹ ಮನಸ್ಥಿತಿ ಇರುವವರೇ ಭವಿಷ್ಯದಲ್ಲಿ ಬೇಕಾದ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಾರೆ ಎಂಬುವುದಕ್ಕೆ ಲೋಕೂರ ಗ್ರಾಮದ ರೈತನ ಮಗ ಸಿದ್ಧಾಂತ ನಾಯಿಕಬಾ ಗಡಗೆ ಸಾಕ್ಷಿ ಎಂದು ಕಾಗವಾಡ ಶಾಸಕ ರಾಜು ಕಾಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಲೋಕುರ ಗ್ರಾಮದ ಸಿದ್ಧಾಂತ ಗಡಗೆಯವರ ತೋಟಕ್ಕೆ ಶುಕ್ರವಾರ ತೆರಳಿ ಸಿಹಿ ತಿನ್ನಿಸಿ ಸನ್ಮಾನಿಸಿ ಮಾತನಾಡಿದ ಅವರು, ನಗರ ಪ್ರದೇಶದಲ್ಲಿ ಲಕ್ಷಾಂತರ ರುಪಾಯಿ ಖರ್ಚು ಮಾಡಿದರೂ ಸಾಧನೆ ಮಾಡದ ವಿದ್ಯಾರ್ಥಿಗಳ ಮಧ್ಯೆ ಕಾಗವಾಡ ತಾಲೂಕಿನ ಲೋಕೂರ ಎಂಬ ಕೂಗ್ರಾಮದ ರೈತನ ಮಗ ಸಿದ್ಧಾಂತ ನಾಯಿಕಬಾ ಗಡಗೆ ಯುವಕ ಯಾವುದೇ ಟ್ಯೂಶನ್ ಇಲ್ಲದೇ ಕೇವಲ ಶಿಕ್ಷಕರ ಬೋಧನೆಯ ಜೊತೆಗೆ ಕಠಿಣ ಪರಿಶ್ರಮಪಟ್ಟು ಎಸ್ಸೆಸ್ಸೆಲ್ಸಿಯಲ್ಲಿ 625 ಕ್ಕೆ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವುದು ನನಗೆ ಸಂತಸ ತಂದಿದೆ ಎಂದು ಶ್ಲಾಘಿಸಿದರು.

ಭಾರತದಲ್ಲಿ ಆರ್ಯಭಟ, ರಾಮಾನುಜಂ, ಸರ್.ಎಂ.ವಿಶ್ವೇಶ್ವರಯ್ಯ, ಡಾ.ಬಾಬಾಸಾಹೇಬ ಅಂಬೇಡ್ಕರ್‌ವರಂತಹ ಅಪ್ರತಿಮ ಪ್ರತಿಭೆಗಳು ಗ್ರಾಮೀಣ ಪ್ರದೇಶದಲ್ಲಿಯೇ ಹುಟ್ಟಿ ಬೆಳೆದು ಸಾಧನೆಯನ್ನು ಮಾಡಿದ್ದಾರೆ. ಅವರ ದಾರಿಯಲ್ಲಿ ಇಂದಿನ ಯುವಕರು ಸಾಗಿದರೇ ನಮ್ಮ ಪ್ರತಿಭೆಗಳು ಜಗತ್ತಿನ ಇತರ ದೇಶಗಳಲ್ಲಿ ಮಿಂಚಲಿದ್ದಾರೆ ಎಂದರು.

ಈ ಸನ್ಮಾನ ಸಮಾರಂಭದಲ್ಲಿ ಶಾಸಕ ರಾಜು ಕಾಗೆಯವರು ಪ್ರತಿಭಾವಂತ ವಿದ್ಯಾರ್ಥಿ ಸಿದ್ಧಾಂತ, ತಂದೆ ನಾಯಿಕಬಾ ಹಾಗೂ ತಾಯಿ ಮಂಗಲಾ ಅವರನ್ನು ಸನ್ಮಾನಿಸಿದರು. ಈ ವೇಳೆ ಪಿಕೆಪಿಎಸ್ ಅಧ್ಯಕ್ಷ ರಾಜಾರಾಮ ಗಡಗೆ, ತಾತ್ಯಾಸಾಬ ಗಡಗೆ, ಮುಖಂಡರಾದ ರಾಜು ಮದನೆ, ಎಂ.ಜಿ.ಸಂಕಪಾಳ, ಧರ್ಮರಾಜ ಗಡಗೆ, ಸುಭಾಷ ಭಗತ್, ಗುರುಪುತ್ರ ಗಸ್ತಿ, ಸತೀಶ ಪಾಟೀಲ, ವಕೀಲ ಮಮದಾಪುರೆ, ಡಾ.ಸಂಜಯ ಕಬಾಡಗೆ, ಪ್ರಕಾಶ ಕಾಂಬಳೆ, ಸದಾಶಿವ ಗಡಗೆ, ರಾಜು ಗಡಗೆ, ದಾದಾಸಾಬ ಗಡಗೆ ಸೇರಿದಂತೆ ಅನೇಕರು ಇದ್ದರು.ನಮ್ಮ ದೇಶದಲ್ಲಿ ಪ್ರತಿಭಾವಂತರಿಗೇನು ಕೊರತೆ ಇಲ್ಲ. ಆದರೆ, ಅದನ್ನು ಸಾಧಿಸಲು ಛಲ ಬೇಕು ಅಷ್ಟೆ. ಶ್ರದ್ಧೆ, ಭಕ್ತಿ ಮತ್ತು ಪರಿಶ್ರಮದಿಂದ ಅಭ್ಯಾಸ ಮಾಡಿದಲ್ಲಿ ಯಾರು ಬೇಕಾದರೂ ಪ್ರತಿಯೊಂದು ರಂಗದಲ್ಲಿಯೂ ಸಾಧನೆ ಮಾಡಬಹುದು ಎಂಬುವುದಕ್ಕೆ ಸಿದ್ಧಾಂತನೇ ಸಾಕ್ಷಿ. ಸಾಧನೆ ಮಾಡುವ ಸಾಧಕನಿಗೆ ಸಹನೆ, ಏಕಾಗ್ರತೆ ಮತ್ತು ಕಠಿಣ ಪರಿಶ್ರಮ ಅತ್ಯವಶ್ಯವಾಗಿದೆ.

-ರಾಜು ಕಾಗೆ,

ಶಾಸಕ.