ಬಸವಣ್ಣ ತತ್ವಾದರ್ಶಗಳು ಇಂದಿಗೂ ಪ್ರಸ್ತುತ: ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ

| Published : May 11 2024, 01:31 AM IST

ಬಸವಣ್ಣ ತತ್ವಾದರ್ಶಗಳು ಇಂದಿಗೂ ಪ್ರಸ್ತುತ: ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಸಕಲ ಜೀವಿಗೆ ಒಳಿತು ಬಯಸಿದವರು ಬಸವಣ್ಣ. ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದು ಒಂದು ಹೊಸ ಮನ್ವಂತರವೇ ಆಗಿದೆ. ಒಂದು ದೇಶ ತನ್ನನ್ನು ತಾನು ಪರಿಚಯಿಸಿಕೊಳ್ಳಲು ಅಲ್ಲಿನ ಸಂಸ್ಕೃತಿ ಮುಖ್ಯವಾಗುತ್ತದೆ. ನಾಡಿನ ಸಂಸ್ಕೃತಿಯೇ ವೈಶಿಷ್ಟ್ಯ ಪಡೆದುಕೊಳ್ಳುತ್ತದೆ. ಇಂತಹ ಸಾಂಸ್ಕೃತಿಕ ನಾಯಕನಾಗಿ ಇತಿಹಾಸ ಸೃಷ್ಟಿ ಮಾಡಿದವರು ಬಸವಣ್ಣ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

12ನೇ ಶತಮಾನದಲ್ಲಿಯೇ ಸಮಾಜದ ಓರೆ ಕೋರೆಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಶ್ವಗುರು ಬಸವಣ್ಣನವರ ತತ್ವ-ಆದರ್ಶಗಳು ಇಂದಿಗೂ ಪ್ರಸ್ತುತ ಎಂದು ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಇಲ್ಲಿನ ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ವತಿಯಿಂದ ವಿಶ್ವಮಾನವ ಬಸವೇಶ್ವರ ಜಯಂತಿ ಅಂಗವಾಗಿ ನಗರದ ಬಸವೇಶ್ವರ ವೃತ್ತದಲ್ಲಿ ಗಾಂಧಿ ಪಾರ್ಕ್ ಮುಂಭಾಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಸವಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿ ಸಕಲ ಜೀವಿಗೆ ಒಳಿತು ಬಯಸಿದವರು ಬಸವಣ್ಣ. ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದು ಒಂದು ಹೊಸ ಮನ್ವಂತರವೇ ಆಗಿದೆ. ಒಂದು ದೇಶ ತನ್ನನ್ನು ತಾನು ಪರಿಚಯಿಸಿಕೊಳ್ಳಲು ಅಲ್ಲಿನ ಸಂಸ್ಕೃತಿ ಮುಖ್ಯವಾಗುತ್ತದೆ. ನಾಡಿನ ಸಂಸ್ಕೃತಿಯೇ ವೈಶಿಷ್ಟ್ಯ ಪಡೆದುಕೊಳ್ಳುತ್ತದೆ. ಇಂತಹ ಸಾಂಸ್ಕೃತಿಕ ನಾಯಕನಾಗಿ ಇತಿಹಾಸ ಸೃಷ್ಟಿ ಮಾಡಿದವರು ಬಸವಣ್ಣ ಎಂದರು. ಇಡೀ ವಿಶ್ವವೇ ಬೆರಗಾಗಿ ನೋಡುವಂತೆ ಮಾಡಿದ ಪುಣ್ಯ ಪುರುಷ. ಅವರೊಂದು ಶಕ್ತಿ ಮತ್ತು ಚೈತನ್ಯ, ಅವರ ಆಡಳಿತ ವ್ಯವಸ್ಥೆ ಸರ್ವಕಾಲಕ್ಕೂ ಮಾದರಿ. ಎಲ್ಲಾ ಧರ್ಮಗಳಿಗೂ ಸಮಾನತೆಯನ್ನು ಸಾರಿದ ಬಸವಣ್ಣನವರ ವಚನಗಳು ಸರ್ವಕಾಲಿಕವಾಗಿದ್ದು, ಸರ್ವಧರ್ಮಗಳಿಗೂ ಪ್ರಸ್ತುತವಾಗಿದೆ. ಕಾಯಕವೇ ಕೈಲಾಸ ಎಂದು ಸಾರಿ ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಎಂದು ಹೇಳುತ್ತಾ ಸಮಾಜದಲ್ಲಿ ಹೆಣ್ಣು ಗಂಡು ಎಂಬ ತಾರತಮ್ಯವಿಲ್ಲದೆ ಸಮಾಜವನ್ನು ಬೆಳೆಸಬೇಕು. ಬಸವಣ್ಣನವರ ತತ್ವ ಆದರ್ಶಗಳ ಪಾಲಿಸುವುದರಿಂದ ಸಮಾಜದಲ್ಲಿ ಸುಖ ಶಾಂತಿ ಲಭಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರಾದ ಎಸ್ ಎಸ್ ಜ್ಯೋತಿಪ್ರಕಾಶ್, ಶಾಸಕ ಎಸ್ ರುದ್ರೇಗೌಡ, ಮಾಜಿ ಶಾಸಕರಾದ ಎಸ್.ಎಂ. ಚಂದ್ರಶೇಖರಪ್ಪ, ಪ್ರಮುಖರಾದ ಎಸ್ಪಿ ದಿನೇಶ್., ಎನ್.ಜೆ.ರಾಜಶೇಖರ್, ಡಾ.ಧನಂಜಯ ಸರ್ಜಿ, ವೈ.ಎಚ್.ನಾಗರಾಜ್, ಮೂರ್ತಿ, ರೋಟರಿ ವಿಜಯ್ ಕುಮಾರ್, ಬಳ್ಳಕೆರೆ ಸಂತೋಷ್, ಶಾಂತ ಆನಂದ್, ಅನಿತಾ ರವಿಶಂಕರ್, ತಾರಾನಾಥ್, ಗಣೇಶ ಅಂಗಡಿ, ಮಹೇಶ್ ಮೂರ್ತಿ, ಮಹೇಶ್ವರಪ್ಪ ಸೇರಿದಂತೆ ವೀರಶೈವ ಸಮಾಜದ ಮುಖಂಡರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.

ಮಡಿವಾಳ ಸಂಘದಿಂದ ಬಸವ ಜಯಂತಿ:

ಜಿಲ್ಲಾ ಮಡಿವಾಳ ಸಂಘದ ವತಿಯಿಂದ ಶ್ರೀ ಬಸವೇಶ್ವರರ ಜಯಂತಿಯನ್ನು ಡಿವಿಎಸ್ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಪುಷ್ಪಮಾಲೆ ಅರ್ಪಿಸುವ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, 12 ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯ ಸುಧಾರಕರಾಗಿ ಅನುಭವ ಮಂಟಪ ಸ್ಥಾಪಿಸಿ ಸಮಾಜದಲ್ಲಿ ತಾರತಮ್ಯವನ್ನು ನಿವಾರಿಸಲು ಅರಿವು ಮೂಡಿಸಿದವರು, ಮಹಿಳೆಯರಿಗೆ ಆದ್ಯತೆ ನೀಡಿರುವವರು, ಕಾಯಕತತ್ವ ಮತ್ತು ದಾಸೋಹ ತತ್ವವನ್ನು ಕೊಟ್ಟವರು, ಅವರೊಬ್ಬ ವಿಶ್ವನಾಯಕ ಮತ್ತು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಡಿವಾಳ ಸಂಘದ ಗೌರವ ಅಧ್ಯಕ್ಷ ಎಂ.ಮಂಜಪ್ಪ, ಮಹಾ ಕಾರ್ಯಧ್ಯಕ್ಷ ಬಾಲಾಜಿ ರಾಜ್, ಕಾರ್ಯಧ್ಯಕ್ಷ ಎಂ. ರಾಜಶೇಖರ, ಮಹಾ ಪ್ರಧಾನಕಾರ್ಯದರ್ಶಿ ಎಂ.ಕೆ., ಪ್ರಮೋದ್, ಕೋಶಧ್ಯಕ್ಷ ಎನ್. ಮಂಜುನಾಥ್, ಪ್ರಧಾನಕಾರ್ಯದರ್ಶಿ ಮೈಲಾರಪ್ಪ , ರಾಕೇಶ್ ಪೋಷಕರಾದ ಹುಚ್ಚಪ್ಪ, ಕೆ.ಜಿ.ಗಂಗಾಧರ ಕಾರ್ಯದರ್ಶಿಗಳಾದ ಜಯಪ್ಪ ಮತ್ತು ರಾಜು ಸಂಘಟನಾ ಕಾರ್ಯದರ್ಶಿ ಪ್ರಹ್ಲಾದ್, ಸುಮಿತ್ ಆನಂದ್, ಮತ್ತು ಮಡಿವಾಳರ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಜಿಲ್ಲಾಡಳಿತದಿಂದ ಬಸವ ಜಯಂತಿ ಆಚರಣೆ

ಶಿವಮೊಗ್ಗ ಜಿಲ್ಲಾಡಳಿತದ ವತಿಯಿಂದ ಕುವೆಂಪು ರಂಗಮಂದಿರದಲ್ಲಿ "ಜಗಜ್ಯೋತಿ ಶ್ರೀ ಬಸವ ಜಯಂತಿ " ಹಾಗೂ "ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ " ಯನ್ನು ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್ ಹಾಗೂ ಶಿವಶರಣೆ ಹೇಮರೆಡ್ಡಿ ಸಮಾಜ ಸಂಘದ ಅಧ್ಯಕ್ಷ ಜಿ.ಎನ್. ಕುಮಾರಸ್ವಾಮಿರವರು ನೆರವೇರಿಸಿ ಸಮಾಜ ಬಾಂಧವರಿಗೆ ಶುಭ ಹಾರೈಸಿದರು.

ಈ ವೇಳೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಸ್.ಪಿ.ಮಿಥುನ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಎಚ್‌.ಉಮೇಶ್‌ , ವೀರಶೈವ ಹಾಗೂ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಮಾಜದ ಮುಖಂಡರಾದ ಮಹೇಶ್ ಮೂರ್ತಿ, ಸಂತೋಷ್, ಉಮಾಶಂಕರ, ಮಲ್ಲಿಕಾರ್ಜುನಸ್ವಾಮಿ, ಎಚ್.ಎಸ್. ಈಶ್ವರಪ್ಪ, ಶಾಂತಾ ಆನಂದ್, ಅನಿತಾ ರವಿಶಂಕರ್, ಡಿ. ಗಂಗಾಧರಪ್ಪ, ಡಾ.ಕೊಟ್ರೇಶ್, ವಿಜಯಕುಮಾರ್ ಇತರರು ಪಾಲ್ಗೊಂಡಿದ್ದರು.