ಹೇಟ್ ಸ್ಪೀಚ್ ಕಾನೂನು ಅಡಿಯಲ್ಲಿ ಬಳ್ಳಾರಿ, ಬೀದರ್, ಹುಬಳ್ಳಿ ಘಟನೆಯಲ್ಲಿ ಆಡಳಿತ ಪಕ್ಷದವರನ್ನು ಬಿಟ್ಟು ಪ್ರತಿ ಪಕ್ಷದ ವರನ್ನು ಜೈಲಿಗೆ ಹಾಕುವ ಹುನ್ನಾರ ಸರ್ಕಾರ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹುಮನಾಬಾದ್
ಹೇಟ್ ಸ್ಪೀಚ್ ಕಾನೂನು ಅಡಿಯಲ್ಲಿ ಬಳ್ಳಾರಿ, ಬೀದರ್, ಹುಬಳ್ಳಿ ಘಟನೆಯಲ್ಲಿ ಆಡಳಿತ ಪಕ್ಷದವರನ್ನು ಬಿಟ್ಟು ಪ್ರತಿ ಪಕ್ಷದ ವರನ್ನು ಜೈಲಿಗೆ ಹಾಕುವ ಹುನ್ನಾರ ಸರ್ಕಾರ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ ಆರೋಪಿಸಿದ್ದಾರೆ.ಪಟ್ಟಣದ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಅವರ ಗೃಹ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನೂತನ ಹೇಟ್ ಸ್ಪೀಚ್ ಕಾನೂನು ಜಾರಿಯಾದ ಮೇಲೆ ಮೋದಲ ಅಪರಾಧಿ ಬಳ್ಳಾರಿಯಲ್ಲಿ ಬಿಜೆಪಿ ಶಾಸಕರ ಮನೆ ಮುಂದೆ ಕಾಂಗ್ರೆಸ್ ಪಕ್ಷದ ನಾಯಕರ ಭಾವಚಿತ್ರ ಬ್ಯಾನರ್ ಹಾಕಿ ಅಪಮಾನ ಮಾಡುವುದು, ಎರಡನೇ ಹುಮನಾಬಾದ್ ಸಿದ್ದು ಪಾಟೀಲ್ ಕುಳಿತ ಸ್ಥಳಕ್ಕೆ ಬಂದು ಹಲ್ಲೆಗೆ ಮುಂದಾಗಿರುವುದು, ಮೂರನೇ ಹುಬ್ಬಳ್ಳಿ ಘಟನೆಯ ಕುರಿತು ಪ್ರಕರಣ ದಾಖಲಾಗಬೇಕಿತ್ತು. ಆದರೆ, ರಾಜ್ಯ ಸರ್ಕಾರ ತಮ್ಮನ್ನು ತಾವು ಬಚಾವು ಮಾಡಿಕೊಳ್ಳಲು (12 ಕೊಲೆ ರದ್ದು) ಬಾರಾಖೂನ್ ಮಾಫ್ ಎನ್ನುವ ಗಾದೆ ಮಾತಿನಂತೆ ನಡೆದುಕೊಳ್ಳುತ್ತಿದ್ದು ಈ ಸರ್ಕಾರ ದಾರಿ ಬಿಟ್ಟಿದೆ ಎಂದರು.
ಕಣ್ಣಿಗೆ ಕಾಣುವ ರೀತಿಯಲ್ಲಿ ಘಟನೆಗಳು ನಡೆಯುತ್ತಿದ್ದರೂ ನಮ್ಮ ಮೇಲೆ ದಾದಾಗಿರಿ ನಡೆಸಿ, ನಮ್ಮ ಮೇಲೆಯೇ ಎಫ್.ಐ.ಆರ್. ಹಾಕಿ ನಮ್ಮನ್ನೇ ಬಂಧನ ಮಾಡಲಾಗುತ್ತಿದೆ. ಇದಕ್ಕೆ ಹುಬ್ಬಳ್ಳಿ ಘಟನೆ, ಬಳ್ಳಾರಿ ಜನಾರ್ಧನ ರೆಡ್ಡಿ ಮೇಲೆ ಕೇಸ್ ದಾಖಲು ಸಾಕ್ಷಿ. ಸರ್ಕಾರಕ್ಕೆ ತಲೆಯ ಮೇಲೆ ಕಣ್ಣು ಬಂದ ಹಾಗೆ ಕಾಣುತ್ತೆ, ಜನಪ್ರತಿನಿಧಿಯಾಗಲಿ, ಅಧಿಕಾರಿಗಳಾಗಲಿ ಶಾಶ್ವತ ಅಲ್ಲ. ದ್ವೇಷದ ರಾಜಕೀಯ ಮಾಡಲಾಗುತ್ತಿದೆ ಎಂದರು.ಹುಮನಾಬಾದ್ ಆರ್‌ಟಿಒ ಚೆಕ್‌ಪೋಸ್ಟ್ ಹೆಸರಿನಲ್ಲಿ ಹಣ ಲೂಟಿ. ಅಕ್ಕಿ ಸಾಗಾಟ, ಗಾಂಜಾ ಸಾಗಟ, ಮರಳು ದಂಧೆ, ಪ್ರತಿ ಪಕ್ಷದವರ ಸ್ವಾತಂತ್ರ್ಯ ಭಂಗ ಮಾಡುವುದು ಈ ಕುರಿತು ಬೀದರ್ ಘಟನೆ ಜಿಲ್ಲಾ ಉಸ್ತುವಾರಿ ಸಚಿವರ ಕಣ್ಣು ಮುಂದೆಯೇ ನಡೆದಿದೆ. ಅವರು ಉತ್ತರ ನೀಡಬೇಕು. ಅಧಿವೇಶನದಲ್ಲಿ ಪ್ರಶ್ನಿಸಲಾಗುವುದು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಾಚ್, 14 ಸೈಟ್‌ಗಳು, ರಾಜ್ಯಾದ್ಯಂತ ರಸ್ತೆ ಗುಂಡಿಯನ್ನು ಮುಚ್ಚದೆ ಅನೇಕ ಅಮಾಯಕ ರನ್ನು ಬಲಿ ಪಡೆದಿದ್ದು. 224 ಶಾಸಕರ ಮುಂದೆ ಗೃಹ ಲಕ್ಷ್ಮೀ ಹಣ ಕುರಿತು ಸುಳ್ಳು ಹೇಳಿಕೆ. ಮಹರ್ಷಿ ವಾಲ್ಮೀಕಿ ನಿಗಮ, ಡಾ.ಅಂಬೇಡ್ಕರ್ ನಿಗಮದ ಭ್ರಷ್ಟಾಚಾರ ಸೇರಿದಂತೆ ಅನೇಕ ಸಾಧನೆಗಳು ಮಾಡಿದ್ದಾರೆ. ದೇವರಾಜ ಅರಸು ಅವರು ಉಳುವವನೇ ಭೂಮಿಯ ಒಡೆಯ ಅಂತ ಜನರಿಗೆ ಭೂಮಿ ಹಂಚಿದರು. ಈ ಎಲ್ಲಾ ಘಟನೆಗಳ ಕುರಿತು ಆಡಳಿತ ಪಕ್ಷದ ವಿರುದ್ಧ ಜ.12ರಂದು ಸೋಮವಾರ ಬೀದರ್ ಜಿಲ್ಲಾ ಕೇಂದ್ರದಲ್ಲಿ ಬೃಹತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.ಈ ಸಂದರ್ಭದಲ್ಲಿ ಶಾಸಕ ಡಾ.ಸಿದ್ದಲಿಂಗಪ್ಪಾ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಬಸವರಾಜ ಆರ್ಯ, ಅನೀಲ ಪಸರ್ಗಿ, ವಿಶ್ವನಾಥ ಪಾಟೀಲ್ ಮಾಡಗೂಳ, ರವಿಕುಮಾರ ಹೊಸಳ್ಳಿ, ಪಿಕೆಪಿಎಸ್ ಅಧ್ಯಕ್ಷ ಸಂತೋಷ ಪಾಟೀಲ್ ಸೇರಿದಂತೆ ಅನೇಕರಿದ್ದರು.