ಕೊಪ್ಪಳ: ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಅವರು ಸಚಿವ ಸ್ಥಾನ ಸಿಗದ ಕಾರಣ ಮುನಿಸಿಕೊಂಡಿದ್ದಾರೆ ಎನ್ನುವ ಮಾತು ಸದ್ಯ ಚರ್ಚೆ ಆಗುತ್ತಿವೆ.

ನೂತನ ಸಿಎಂ ಡಿ.ಕೆ. ಶಿವಕುಮಾರ ಸಂಪುಟದ ಮೊದಲ ಪಟ್ಟಿಯಲ್ಲಿ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಅವರಿಗೆ ಸಚಿವ ಸ್ಥಾನ ದೊರೆಯದ ಕಾರಣ ನಿರಾಸೆ ಭಾವ ತರಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೆ ಕಳೆದ ಎರಡು ದಿನಗಳಿಂದ ದೂರವಾಣಿ ಸಂಪರ್ಕಕ್ಕೆ ಸಿಗುತ್ತಿಲ್ಲ, ಅವರು ವಿದೇಶಕ್ಕೆ ಹೋಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಕ್ಷೇತ್ರದ ಜನರು, ಪಕ್ಷದ ಮುಖಂಡರ ಸಂಪರ್ಕಕ್ಕೂ ಬಸವರಾಜ ರಾಯರಡ್ಡಿ ಸಿಗುತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಸ್ಪೀಕರ್‌ ಹುದ್ದೆ: ಮಾಜಿ ಸಿಎಂ ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರಡ್ಡಿ, ಕಳೆದ ಅವಧಿಯಲ್ಲಿ ಸಿಎಂ ಆರ್ಥಿಕ ಸಲಹೆಗಾರರಾಗಿದ್ದರು. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಆಗಿದ್ದರು. ಸಿದ್ದರಾಮಯ್ಯ ಬದಲಾವಣೆ ನಂತರ ಸಿಎಂ ಡಿಕೆಶಿ ಸಂಪುಟದಲ್ಲಿ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂಬ ಚರ್ಚೆ ಇತ್ತು. ಆದರೆ ಮೊದಲ ಪಟ್ಟಿಯಲ್ಲಿ ಸಚಿವ ಸ್ಥಾನ ದೊರೆಯದೇ ಇರುವುದರಿಂದ ಅವರನ್ನು ಸ್ವೀಕರ್ ಹುದ್ದೆಗೆ ನೇಮಿಸಬಹುದು ಎಂಬ ಚರ್ಚೆಯಿದೆ. ಕಾನೂನು ಪದವಿಧರ ರಾಯರಡ್ಡಿ ಅವರಿಗೆ ಅನುಭವ ಉಂಟು. ಆದರೆ, ಅದಕ್ಕೆ ಒಪ್ಪದ ಅವರು ವಿದೇಶಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರಬೇಕು ಎಂದು ರಾಯರೆಡ್ಡಿ ಹೇಳುತ್ತಿದ್ದರು. ಸಿಎಂ ಬದಲಾವಣೆ ಆದರೆ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕು ಎಂದು ಹೇಳಿ ಪರೋಕ್ಷವಾಗಿ ಡಿ.ಕೆ. ಶಿವಕುಮಾರಗೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗುತ್ತಿದೆ.