ಭಟ್ಕಳ: ತಾಲೂಕಿನ ಶನಿವಾರ ಸಂಜೆ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ. ಭಾರೀ ಮಳೆಗೆ ಪಟ್ಟಣದ ನಗರಸಭೆ ಎಡಬದಿ ರಸ್ತೆ ಮತ್ತು ಮುಖ್ಯ ರಸ್ತೆಯಲ್ಲಿ ಮಳೆ ನೀರು ಹರಿದು ವಾಹನ ಮತ್ತು ಜನ ಸಂಚಾರಕ್ಕೆ ತೊಂದರೆ ಉಂಟಾಯಿತು.
ಪಟ್ಟಣದಲ್ಲಿ ಮುಖ್ಯರಸ್ತೆ, ಪುರಸಭೆ ಎಡಬದಿ ರಸ್ತೆಯ ಗಟಾರ ಸ್ವಚ್ಛ ಮಾಡಿದ್ದರೂ ಕೋಟೇಶ್ವರ ನಗರ ಕಡೆಯ ನೀರು ಒಮ್ಮೆಲೇ ಬಂದಿದ್ದರಿಂದ ರಸ್ತೆಯ ಮೇಲೆ ಮಳೆ ನೀರು ಹರಿಯುವಂತಾಯಿತು. ವರ್ಷಂಪ್ರತಿ ಇಲ್ಲಿ ಇದೇ ಗೋಳಾಗಿದೆ. ರಂಗಿನಕಟ್ಟೆಯಿಂದ ತಾಪಂ ವರೆಗೆ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಗಟಾರ ವ್ಯವಸ್ಥೆ ಸರಿಯಿಲ್ಲ. ಹೆದ್ದಾರಿ ಕಾಮಗಾರಿ ಮಾಡುವವರು ಕೆಲವು ಕಡೆ ಗಟಾರ ಕಾಮಗಾರಿ ಮಾಡಿದ್ದರೂ ಸಹ ಪೂರ್ಣಗೊಂಡಿಲ್ಲ. ರಸ್ತೆ ಅರ್ಧಂಬರ್ಧ ಸ್ಥಿತಿಯಲ್ಲಿರುವುದರಿಂದ ಜನರು ದಿನಂಪ್ರತಿ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಯಂಚಿನ ಅಂಗಡಿಗಳ ಎದುರು ಗಟಾರ ಕಾಮಗಾರಿ ಮಾಡುತ್ತಿದ್ದು, ಮಳೆಗೆ ಕೆಸರುಮಯವಾಗಿದೆ. ಮಳೆಯ ಆರಂಭದಲ್ಲೇ ಹೀಗೆ ಆದರೆ ದೊಡ್ಡ ಮಳೆ ಬಂದರೆ ಏನಾದೀತು ಎಂದು ಜನರು ಪ್ರಶ್ನಿಸುತ್ತಿದ್ದಾರೆ.ಮಳೆ ಆರಂಭವಾಗುವ ಪೂರ್ವದಲ್ಲೇ ಹೆದ್ದಾರಿ ಮತ್ತು ಗಟಾರ ಕಾಮಗಾರಿ ಮುಗಿಸಿದ್ದರೆ ಮಳೆಗಾಲದಲ್ಲಿ ಜನರು ತೊಂದರೆ ಅನುಭವಿಸುವುದು ತಪ್ಪುತ್ತಿತ್ತು ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಾಲೂಕಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ಹದ ಮಳೆ ಬೀಳುತ್ತಿದೆ. ಕೃಷಿ ಚಟುವಟಿಕೆಗೆ ರೈತರು ಸಿದ್ದರಾಗುತ್ತಿದ್ದಾರೆ. ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ತಾಲೂಕಿನಲ್ಲಿ ಕರೆಂಟ್ ಪದೇ ಪದೇ ಕೈಕೊಡುತ್ತಿದ್ದು, ಒಮ್ಮೊಮ್ಮೆ ಹೊನ್ನಾವರ, ಕುಮಟಾದಲ್ಲಿ ಮುಖ್ಯತಂತಿಯಲ್ಲಿ ತಾಂತ್ರಿಕ ತೊಂದರೆ ಉಂಟಾದರೂ ಭಟ್ಕಳದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಶನಿವಾರವೂ ವಿದ್ಯುತ್ ವ್ಯತ್ಯಯ ಉಂಟಾಗಿ ಜನರು ತೊಂದರೆ ಅನುಭವಿಸಿದರು.