ಹಾವೇರಿ: ರಾಜನಾಗಿದ್ದರೂ ಯಾವುದೇ ಯುದ್ಧ ಮಾಡದೇ ಸಂಸ್ಥಾನದಲ್ಲಿ ಸಾಮಾಜಿಕ, ಶೈಕ್ಷಣಿಕ, ನೀರಾವರಿ, ಹಿಂದುಳಿದವರ ಏಳಿಗೆ ಮತ್ತು ಮಹಿಳಾ ಸಬಲೀಕರಣದಂತಹ ಕ್ರಾಂತಿಕಾರಿ ಕಾರ್ಯಗಳನ್ನು ಮಾಡಿದ ಮೈಸೂರಿನ ಯದುವಂಶದ ನಾಲ್ವಡಿ ಕೃಷ್ಣರಾಜ ಒಡೆಯರ ನಾಡು ಕಂಡ ಧೀಮಂತ ವ್ಯಕ್ತಿಯಾಗಿದ್ದರು ಎಂದು ಸಾಹಿತಿ ಸಿ.ಎಸ್. ಮರಳಿಹಳ್ಳಿ ಹೇಳಿದರು.ಇಲ್ಲಿನ ವಿನಾಯಕ ನಗರದ ದಿ. ಗಂಗಾಧರ ನಂದಿ ಸಾಹಿತ್ಯ ಭವನದಲ್ಲಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಮೈಸೂರು ಒಡೆಯ ನಾಲ್ವಡಿ ಕೃಷ್ಣರಾಜ ಒಡೆಯರ ಅವರ 142ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಾಲ್ವಡಿ ಕೃಷ್ಣರಾಜ ಒಡೆಯರ ಅವರದು 38 ವರ್ಷಗಳ ಆಡಳಿತವಾಗಿದ್ದು, ಶಿಕ್ಷಣ ಮತ್ತು ಔದ್ಯೋಗಿಕರಣದ ಮಹತ್ವ ಅರಿತಿದ್ದರು. ಪ್ರಜಾಪ್ರತಿನಿಧಿ ಸಭೆ, ಮೀಸಲಾತಿ ಮತ್ತು ಮಹಿಳಾ ಸಬಲೀಕರಣದ ಕಾನೂನುಗಳ ಮೂಲಕ ಜನಹಿತ ಕಾಪಾಡಿದ ನಾಲ್ವಡಿ ಕೃಷ್ಣರಾಜರು ಮೈಸೂರು ರಾಜ್ಯವನ್ನು ಮಾದರಿ ರಾಜ್ಯವನ್ನಾಗಿಸಿದರು. ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಮೀಸಲಾತಿಯನ್ನು ಜಾರಿಗೆ ತರುವ ಮೂಲಕ ತುಳಿತಕ್ಕೆ ಒಳಗಾದವರ ಉನ್ನತಿಗೆ ಶ್ರಮಿಸಿದರು. ಮೀಸಲಾತಿಗೆ ತೀವ್ರ ವಿರೋಧ ಬಂದರೂ ಅದನ್ನು ಲೆಕ್ಕಿಸದೇ ಅನುಷ್ಠಾನ ಮಾಡಿದರು. ಮೀಸಲಾತಿ ಮೂಲಕ ಸಮ ಸಮಾಜದ ಕನಸನ್ನು ನನಸು ಮಾಡಿ, ಭಾರತದ ಮೀಸಲಾತಿ ಜನಕ ಎನಿಸಿಕೊಂಡಿದ್ದಾರೆ ಎಂದು ಹೇಳಿದರು.ತಾಲೂಕು ಕಸಾಪ ಅಧ್ಯಕ್ಷ ವೈ.ಬಿ. ಆಲದಕಟ್ಟಿ ಮಾತನಾಡಿ, ನಾಲ್ವಡಿ ಅವರು ಬಾಲ್ಯದಿಂದಲೇ ಕಹಿ ಘಟನೆಗಳನ್ನು ಕಂಡರು. ಹತ್ತನೇ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡರು. ಕೆಲ ದಿನಗಳಲ್ಲಿಯೇ ತನ್ನ ಅಕ್ಕಂದಿರನ್ನು ಕಳೆದುಕೊಂಡರು. ಇದರಿಂದ ತೀವ್ರ ಮನನೊಂದು ಮುಂದೆ ಸಂಸ್ಥಾನದಲ್ಲಿ ಆಸ್ಪತ್ರೆ ಕಟ್ಟಿಸಿ ಉಚಿತ ಸೇವೆ ಒದಗಿಸಿದರು. ಹಲವಾರು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದ ಅವರು ಕಾಯಕ ಶ್ರದ್ಧೆ, ಶಿಸ್ತು ಮತ್ತು ಸಮಯಪಾಲನೆಯಲ್ಲಿ ಮುಂಚೂಣಿಯಲ್ಲಿದ್ದರು ಎಂದು ಹೇಳಿದರು.ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ಕೃಷಿ ಮತ್ತು ನೀರಾವರಿ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾದುದು. ಕಾವೇರಿ ನದಿಗೆ ಕನ್ನಂಬಾಡಿ ಅಣೆಕಟ್ಟು ನಿರ್ಮಾಣ ಅವರ ಕತೃತ್ವ ಶಕ್ತಿಗೆ ಸಾಕ್ಷಿಯಾಗಿದೆ. ತೀವ್ರ ಆರ್ಥಿಕ ಮುಗ್ಗಟ್ಟು ಎದುರಾದಾಗ ಖಜಾನೆಯ ಬಂಗಾರ ಮಾರಿ, ಅಣೆಕಟ್ಟು ಪೂರ್ಣಗೊಳಿಸಿದರು. ಇದರೊಂದಿಗೆ ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಮಿರ್ಜಾ ಇಸ್ಮಾಯಿಲ್ ಅವರ ಕೊಡುಗೆಯೂ ಸ್ಮರಣೀಯವಾಗಿದೆಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಎಚ್.ಬಿ. ಲಿಂಗಯ್ಯ ಮಾತನಾಡಿ, ಆಧುನಿಕ ಮೈಸೂರು ನಿರ್ಮಾಪಕರಾದ ಇವರು, ಮೈಸೂರ ವಿ.ವಿ., ಬಾಲಕಿಯರಿಗಾಗಿ ಶಾಲೆ, ಗಂಧದ ಎಣ್ಣೆ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ, ಕಾಗದ ಕಾರ್ಖಾನೆ, ಸಕ್ಕರೆ, ರಸಗೊಬ್ಬರ, ಸಾಬೂನು, ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗಳನ್ನು ಸ್ಥಾಪಿಸಿ, ಯುವ ಜನರಿಗೆ ಬೆಳಕಾದರು. ಕನ್ನಡ ಸಾಹಿತ್ಯ ಪರಿಷತ್ತು ಅವರ ಕನಸಿನ ಕೂಸಾಗಿತ್ತು. ಶ್ಯಾಮಶಾಸ್ತ್ರಿ, ಎಂ.ಹಿರಣ್ಣಯ್ಯ, ವೀಣೆ ಶೇಷಣ್ಣ, ಮುತ್ತಣ್ಣ ಭಾಗವತರ, ಟಿ. ಚೌಡಯ್ಯ ಮುಂತಾದ ವಿದ್ವಾಂಸರಿಗೆ ಪ್ರೋತ್ಸಾಹ ನೀಡಿದರು ಎಂದು ಹೇಳಿದರು.ಸಮಾರಂಭದಲ್ಲಿ ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ಎಸ್.ಎನ್. ದೊಡ್ಡಗೌಡರ, ಶಂಕರ ಸುತಾರ, ಎನ್.ಬಿ. ಕಾಳೆ, ಶಿವಬಸವ ಮರಳಿಹಳ್ಳಿ, ಪ್ರೊ. ಪಿ.ಸಿ. ಹಿರೇಮಠ, ಎ.ಬಿ. ಗುಡ್ಡಳ್ಳಿ ಇತರರಿದ್ದರು. ಪೃಥ್ವಿರಾಜ ಬೆಟಗೇರಿ ಸ್ವಾಗತಿಸಿದರು. ಪರಶುರಾಮ ಕರ್ಜಗಿ ನಿರೂಪಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ ನಾಡು ಕಂಡ ಧೀಮಂತ ವ್ಯಕ್ತಿ-ಮರಳಿಹಳ್ಳಿ
ರಾಜನಾಗಿದ್ದರೂ ಯಾವುದೇ ಯುದ್ಧ ಮಾಡದೇ ಸಂಸ್ಥಾನದಲ್ಲಿ ಸಾಮಾಜಿಕ, ಶೈಕ್ಷಣಿಕ, ನೀರಾವರಿ, ಹಿಂದುಳಿದವರ ಏಳಿಗೆ ಮತ್ತು ಮಹಿಳಾ ಸಬಲೀಕರಣದಂತಹ ಕ್ರಾಂತಿಕಾರಿ ಕಾರ್ಯಗಳನ್ನು ಮಾಡಿದ ಮೈಸೂರಿನ ಯದುವಂಶದ ನಾಲ್ವಡಿ ಕೃಷ್ಣರಾಜ ಒಡೆಯರ ನಾಡು ಕಂಡ ಧೀಮಂತ ವ್ಯಕ್ತಿಯಾಗಿದ್ದರು ಎಂದು ಸಾಹಿತಿ ಸಿ.ಎಸ್. ಮರಳಿಹಳ್ಳಿ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.