ಮನಸ್ಸಿನ ಆರೋಗ್ಯಕ್ಕೆ ಹಿರಿಯರಿಂದ ಪುಸ್ತಕ ಓದುವ ಪರಿಪಾಠ: ಹುಸ್ಕೂರು ಕೃಷ್ಣೇಗೌಡ

| Published : Apr 29 2024, 01:39 AM IST

ಮನಸ್ಸಿನ ಆರೋಗ್ಯಕ್ಕೆ ಹಿರಿಯರಿಂದ ಪುಸ್ತಕ ಓದುವ ಪರಿಪಾಠ: ಹುಸ್ಕೂರು ಕೃಷ್ಣೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಸಾಹಿತ್ಯವೆಂಬುದು ಜೇನಿನ ಹನಿ ಇದ್ದಂತೆ. ಹೇಗೆ ಜೇನುತುಪ್ಪ ಸಿಹಿಯನ್ನು ನೀಡಿ ಔಷಧವಾಗಿ ಕೆಲಸ ನಿರ್ವಹಿಸವುದೋ ಹಾಗೆಯೇ ಸಾಹಿತ್ಯದ ಓದು ಮತ್ತು ಬರಹ ನಮಗೆ ಮುದ ನೀಡುವುದರ ಜತೆಗೆ ನಮ್ಮ ಬಾಳು ಸಹ್ಯವಾಗಲು ನೆರವಾಗುತ್ತದೆ. ಓದು,ಬರಹಗಳಿಂದ ಸಾಹಿತಿಗಳು ದೈಹಿಕ ಮತ್ತು ಮಾನಸಿಕ ಆರೋಗ್ಯದಿಂದಿರುತ್ತಿದ್ದರು .

ಕನ್ನಡಪ್ರಭ ವಾರ್ತೆ ಮಂಡ್ಯ

ಮನಸ್ಸಿನ ಆರೋಗ್ಯಕ್ಕಾಗಿ ಮನೆಗಳಲ್ಲಿ ಸಾಧಕರು, ಸಾಹಿತಿಗಳು, ಹಿರಿಯರು ಪುಸ್ತಕಗಳನ್ನು ಇಟ್ಟುಕೊಳ್ಳುತ್ತಿದ್ದರು. ಪ್ರಸ್ತುತ ಪುಸ್ತಕಗಳ ಬದಲಿಗೆ ಮಾತ್ರೆಗಳನ್ನು ಇಟ್ಟುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಹುಸ್ಕೂರು ಕೃಷ್ಣೇಗೌಡ ಆತಂಕ ವ್ಯಕ್ತಪಡಿಸಿದರು.

ತಾಲೂಕಿನ ತಗ್ಗಹಳ್ಳಿ ಶ್ರೀರಾಮ ಮಂದಿರದಲ್ಲಿ ಆಯೋಜಿಸಿದ್ದ ಸಾಹಿತಿ ಸಬ್ಬನಹಳ್ಳಿ ಶಶಿಧರ ಅವರ ‘17ನೇ ಗೀತಾಂಕುರ ಕೃತಿ ಬಿಡುಗಡೆ’ ಸಮಾರಂಭದಲ್ಲಿ ಮಾತನಾಡಿ, ಮಾನಸಿಕ ಆರೋಗ್ಯ ಅತ್ಯವಶ್ಯಕ. ಅದಕ್ಕಾಗಿ ಒಳ್ಳೆಯ ಸಾಹಿತ್ಯದ ಅಭಿರುಚಿ ಇಟ್ಟುಕೊಂಡಿದ್ದೆವು. ಆದರೆ, ಈಗ ಪುಸ್ತಕಗಳ ಬದಲಿಗೆ ಔಷಧಿಗಳನ್ನು ಇಟ್ಟುಕೊಳ್ಳಬೇಕಾಗಿದೆ ಎಂದು ವಿಷಾಧಿಸಿದರು.

ಸಾಹಿತ್ಯವೆಂಬುದು ಜೇನಿನ ಹನಿ ಇದ್ದಂತೆ. ಹೇಗೆ ಜೇನುತುಪ್ಪ ಸಿಹಿಯನ್ನು ನೀಡಿ ಔಷಧವಾಗಿ ಕೆಲಸ ನಿರ್ವಹಿಸವುದೋ ಹಾಗೆಯೇ ಸಾಹಿತ್ಯದ ಓದು ಮತ್ತು ಬರಹ ನಮಗೆ ಮುದ ನೀಡುವುದರ ಜತೆಗೆ ನಮ್ಮ ಬಾಳು ಸಹ್ಯವಾಗಲು ನೆರವಾಗುತ್ತದೆ. ಓದು,ಬರಹಗಳಿಂದ ಸಾಹಿತಿಗಳು ದೈಹಿಕ ಮತ್ತು ಮಾನಸಿಕ ಆರೋಗ್ಯದಿಂದಿರುತ್ತಿದ್ದರು ಎಂದು ಹೇಳಿದರು.

ಕಾಲದ ಮಹಿಮೆ ಎಂಬಂತೆ ಇಂದು ನಾವು ಓದು-ಬರಹಗಳಿಂದ ದೂರಾಗಿದ್ದೇವೆ. ಹಾಗಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದೇವೆ. ‘ಗೀತಾಂಕುರ’ ಕೃತಿಕಾರನ ಮೊದಲ ಕವನ ಸಂಕಲನವಾಗಿದೆ. ಉತ್ತಮ ಶೀರ್ಷಿಕೆ. ಅವರ ಕಾವ್ಯ ಜಗತ್ತಿನ ಅಂಕುರವಾಗಿದೆ. ಶೇ.75ರಷ್ಟು ಪ್ರೇಮ ಕವಿತೆಗಳನ್ನು ಒಳಗೊಂಡಿರುವ ಗೀತಾಂಕುರ ಒಂದು ಒಳ್ಳೆಯ ಕವನ ಸಂಕಲನ ಎಂದು ಬಣ್ಣಿಸಿದರು.

ಕೃತಿ ಲೋಕಾರ್ಪಣೆ ಮಾಡಿದ ಶಿಕ್ಷಕ ಶಿವಣ್ಣ ಮಂಗಲ ಮಾತನಾಡಿ, ಕೃತಿಕಾರ ಸಬ್ಬನಹಳ್ಳಿ ಶಶಿಧರ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ತೊಡಗಿಸಿಕೊಂಡರೆ ಆಳವಾದ ಅಧ್ಯಯನದೊಂದಿಗೆ ಉತ್ತಮ ಕೊಡುಗೆ ನೀಡಬಹುದು ಎಂದು ಸಲಹೆ ನೀಡಿದರು.

ಶಿಕ್ಷಕಿ ಡಾ. ಕನ್ನಿಕಾ ಶಿಲ್ಪ ಮಾತನಾಡಿ, ನನ್ನ ಸಾಹಿತ್ಯದ ಓದು, ಕೃತಿಗಳ ರಚನೆಗೆ ಸದಾ ಹುರಿದುಂಬಿಸುತ್ತಿದ್ದದ್ದು ಸಬ್ಬನಹಳ್ಳಿ ಶಶಿಧರ ಅವರೇ, ಅವರದ್ದು ನೇರ, ದಿಟ್ಟ, ನಿರಂತರ ಎಂಬಂತಹ ವ್ಯಕ್ತಿತ್ವ. ಮಂಡ್ಯ ಜಿಲ್ಲೆಯ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ ಎಂದು ತಿಳಿಸಿದರು.

ಪತ್ರಕರ್ತ ಚಂದ್ರಶೇಖರ ದ.ಕೋ.ಹಳ್ಳಿ ಮಾತನಾಡಿ, ಸಬ್ಬನಹಳ್ಳಿ ಶಶಿಧರ ತಮ್ಮ ಕಾರ್ಯಸ್ಥಾನವಾದ ಗ್ರಾಮೀಣ ಪರಿಸರದಲ್ಲಿ ಸಾಹಿತ್ಯಿಕ ಕಾರ್ಯಕ್ರಮ ಆಯೋಜಿಸಿ ಲೇಖಕರು, ಸಾಹಿತಿಗಳು, ಉಪನ್ಯಾಸಕರು ಹಾಗೂ ಸಾಧಕರನ್ನು ಆಹ್ವಾನಿಸಿ ತಮ್ಮ ಕೃತಿ ಬಿಡುಗಡೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಉಪನ್ಯಾಸಕ ಮಂಚಶೆಟ್ಟಿ ಮಾತನಾಡಿ, ಕವಿ ಮಿತ್ರ ಸಬ್ಬನಹಳ್ಳಿ ಶಶಿಧರ ಅವರು ತಮ್ಮ ಕವನಸಂಕಲನದಲ್ಲಿ ಮಹಾಕಾವ್ಯಗಳನ್ನೂ ಪ್ರಶ್ನಿಸುವಂತಹ ಕವನಗಳನ್ನು ರಚಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಂಘಟಕ ಧನಂಜಯ ಜಿ. ಧರಸಗುಪ್ಪೆ, ಹಿಂದಿ ಶಿಕ್ಷಕ ಪ್ರಸನ್ನ, ಕವಿಯತ್ರಿ ರೇಖಾ ಶಶಿಧರ, ಕುಮಾರ ಸಬ್ಬನಹಳ್ಳಿ, ಕಸಾಪ ಗೌರವ ಕಾರ್‍ಯದರ್ಶಿ ಧನಂಜಯ ದರಸಗುಪ್ಪೆ ಹಲವರು ಭಾಗವಹಿಸಿದ್ದರು.