ಬಿಸಿಲಿನ ಜಳಕ್ಕೆ ಜನ ಹೈರಾಣು!

| Published : Apr 29 2024, 01:39 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಪಕ್ಷದ ಅಭ್ಯರ್ಥಿಗಳ ಪರವಾಗಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಆದರೆ, ಬಿಸಿಲಿನ ತಾಪಕ್ಕೆ ವೇದಿಕೆ ಮೇಲಿದ್ದ ಗಣ್ಯರು ಸೇರಿದಂತೆ ನೋಡಲು ಬಂದಿದ್ದ ಸಾವಿರಾರು ಜನರು ಕೂಡ ಹೈರಾಣಾಗಿ ಹೋದರು

ಕನ್ನಡಪ್ರಭ ವಾರ್ತೆ ಬೆಳಗಾವಿ

ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಪಕ್ಷದ ಅಭ್ಯರ್ಥಿಗಳ ಪರವಾಗಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಆದರೆ, ಬಿಸಿಲಿನ ತಾಪಕ್ಕೆ ವೇದಿಕೆ ಮೇಲಿದ್ದ ಗಣ್ಯರು ಸೇರಿದಂತೆ ನೋಡಲು ಬಂದಿದ್ದ ಸಾವಿರಾರು ಜನರು ಕೂಡ ಹೈರಾಣಾಗಿ ಹೋದರು.

ಈ ಸಮಾವೇಶಕ್ಕೆ ಜನಸಾಗರವೇ ಹರಿದು ಬಂದಿತ್ತು. ನಗರದ ಯಡಿಯೂರಪ್ಪ ಮಾರ್ಗದಲ್ಲಿರುವ ಮಾಲಿನಿ ಸಿಟಿ ಮೈದಾನದಲ್ಲಿ ಬಿಜೆಪಿ ಪಕ್ಷದಿಂದ ಆಯೋಜಿಸಲಾಗಿದ್ದ ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಜಿಲ್ಲೆಯ ಮೂಲೆ ಮೂಲೆಯಿಂದ ಆಗಮಿಸಿದ್ದರು. ವೇದಿಕೆ ಮುಂಭಾಗದಲ್ಲಿದ್ದ ಜನ ಸಂಖ್ಯೆಯಷ್ಟು ಜನರು ವೇದಿಕೆ ಹೊರಗೆ ಸುಡು ಬಿಸಿಲಿನಲ್ಲಿ ಮೋದಿ ಅವರನ್ನು ನೋಡಲು ಜನರು ಕಾದು ನಿಂತಿದ್ದರು.ಎತ್ತ ನೋಡಿದರತ್ತ ಕೇಸರಿ ಶಾಲು, ಪೇಟ ಹಾಗೂ ಧ್ವಜಗಳು ರಾಜಾಜಿಸುತ್ತಿದ್ದವು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರಗಳನ್ನು ಹಿಡಿದು ಮೋದಿಯತ್ತ ತೋರಿಸುತ್ತಿದ್ದರು. ಸುಡು ಬೀಸಿಲಿನಿಂದ ಬಸವಳಿದ್ದ ಜನತೆಗೆ ಕುಡಿಯಲು ನೀರಿಲ್ಲದೇ ಹೈರಾಣಾಗಿದ್ದರು, ಮಹಿಳೆ, ಮಕ್ಕಳು, ವೃದ್ಧರು ಈ ಸಮಾವೇಶಕ್ಕೆ ಆಗಮಿಸಿದ್ದರು. ಸಮಾವೇಶ ನಗರದಿಂದ 4 ಕಿಮೀ ದೂರದಲ್ಲಿತ್ತು. ಆದರೆ, ಬಾಗಲಕೋಟೆ ರಸ್ತೆಗೆ ಸಂಪರ್ಕಿಸುವ ಸೇತುವೆ ಬಳಿ ವಾಹನಗಳನ್ನು ಪೊಲೀಸರು ತಡೆದಿದ್ದರು. ಇದರಿಂದ ಬಾಗಲಕೋಟೆ ಕಡೆಯಿಂದ ನಗರಕ್ಕೆ ಆಗಮಿಸುವ ಜನರು, ವಾಹನ ಸವಾರರು ಪರದಾಡುವಂತಾಗಿತ್ತು.

ಸಮಾವೇಶಕ್ಕೆ ಆಗಮಿಸಿರುವ ಮೋದಿ ಅವರನ್ನು ನೋಡಲು ದೂರದ ಊರುಗಳಿಂದ ಆಗಮಿಸಿದ್ದ ಜನರ ವಾಹನಗಳ ನಿಲುಗಡೆಗೆ ಸ್ಥಳ ಗುರುತಿಸಲಾಗಿತ್ತು. ಆದರೆ, ಯಾವ ಸ್ಥಳದಲ್ಲಿ ಪಾರ್ಕಿಂಗ್‌ ಮಾಡಬೇಕೆನ್ನುವ ಮಾಹಿತಿ ಕೆಲವು ಪೊಲೀಸರಿಗೆ ಗೊತ್ತಿರಲಿಲ್ಲ. ಹೀಗಾಗಿ ಕೆಲವರು ವಾಹನ ಸವಾರರು ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್‌ ಮಾಡಿ ರಾಷ್ಟ್ರೀಯ ಹೆದ್ದಾರಿ ಮೇಲೆ ವೇದಿಕೆಯತ್ತ ಆಗಮಿಸುತ್ತಿದ್ದರು.

ನಂತರ ಎಚ್ಚೆತ್ತುಕೊಂಡ ಪೊಲೀಸರು ರಾಷ್ಟ್ರೀಯ ಹೆದ್ದಾರಿ ಮೇಲೆ ಬರುವವರನ್ನು ತಡೆಯುವಲ್ಲಿ ಮುಂದಾದರು. ಇನ್ನು ನಗರದ ಕಡೆಯಿಂದ ಹೋಗುವವರಿಗೆ ಸರ್ವಿಸ್‌ ರಸ್ತೆಗಳ ಮೂಲಕ ಸಂಚರಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಬಳ್ಳಾರಿ ನಾಲಾ ಸೇತುವೆ ಕೆಳಗೆ ಕೊಳಚೆ ನೀರಲ್ಲೇ ಜನರು ನಡೆದುಕೊಂಡು ಹೋಗಿದ್ದಲ್ಲದೇ ವಾಹನಗಳು ಕೊಳಚೆಯಲ್ಲಿಯೇ ಸಂಚರಿಸುತ್ತಿರುವುದು ಕಂಡು ಬಂದಿತು.