ಲೋಕ ಚುನಾವಣೆ ಮನೆಯಲ್ಲಿಯೇ ಮತದಾನಕ್ಕೆ ನಗರದಲ್ಲಿ ಚಾಲನೆ

| Published : Apr 29 2024, 01:39 AM IST

ಲೋಕ ಚುನಾವಣೆ ಮನೆಯಲ್ಲಿಯೇ ಮತದಾನಕ್ಕೆ ನಗರದಲ್ಲಿ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಮತಪತ್ರ, ಮತಪೆಟ್ಟಿಗೆ, ಶಾಯಿ ಸೇರಿದಂತೆ ಮತದಾನಕ್ಕೆ ಬೇಕಾದ ಸಾಮಗ್ರಿಗಳೊಂದಿಗೆ ವೃದ್ಧರ ಮನೆಗಳಿಗೆ ತೆರಳಿದ ಚುನಾವಣಾ ಸಿಬ್ಬಂದಿ, ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಿದರು.

ಬಳ್ಳಾರಿ: ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಲು ಸಾಧ್ಯವಾಗದ ಸ್ಥಿತಿಯಲ್ಲಿರುವ ವೃದ್ಧರು ಹಾಗೂ ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡುವ ಪ್ರಕ್ರಿಯೆ ನಗರದಲ್ಲಿ ಭಾನುವಾರ ಚಾಲನೆಗೊಂಡಿತು.

ಸಹಾಯಕ ಚುನಾವಣಾ ಅಧಿಕಾರಿ ಖಲೀಲಸಾಬ್ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ. ತಂಡದ ಸಿಬ್ಬಂದಿ ಮನೆಯಲ್ಲಿಯೇ ಮತ ಚಲಾಯಿಸಲು ಬಯಸಿರುವವರ ಮನೆಗಳಿಗೆ ತೆರಳಿ ಮತದಾನ ಪ್ರಕ್ರಿಯೆ ನಡೆಸಿದರು.

ಮತಪತ್ರ, ಮತಪೆಟ್ಟಿಗೆ, ಶಾಯಿ ಸೇರಿದಂತೆ ಮತದಾನಕ್ಕೆ ಬೇಕಾದ ಸಾಮಗ್ರಿಗಳೊಂದಿಗೆ ವೃದ್ಧರ ಮನೆಗಳಿಗೆ ತೆರಳಿದ ಚುನಾವಣಾ ಸಿಬ್ಬಂದಿ, ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಿದರು.

ಜಿಲ್ಲೆಯಲ್ಲಿ 2419 ಜನರು 85 ವರ್ಷ ಮೇಲ್ಪಟ್ಟವರು ಹಾಗೂ 1540 ವಿಕಲಚೇತನರಿದ್ದಾರೆ. ಈ ಪೈಕಿ ನಗರದ 78 ಮತದಾರರು ಮನೆಯಲ್ಲಿಯೇ ಹಕ್ಕು ಚಲಾಯಿಸಲು ಬಯಸಿದ್ದು ಮತದಾರರ ಮನೆಗಳಿಗೆ ತೆರಳಿ ಮತದಾನ ಪ್ರಕ್ರಿಯೆ ಕೈಗೊಳ್ಳಲಾಗುವುದು. ಭಾನುವಾರ ಹಾಗೂ ಸೋಮವಾರ ಈ ಪ್ರಕ್ರಿಯೆ ನಡೆಯಲಿದೆ ಎಂದು ಸಹಾಯಕ ಚುನಾವಣೆ ಅಧಿಕಾರಿ ಖಲೀಲ್ ಸಾಬ್ ತಿಳಿಸಿದರು.

ಹಕ್ಕು ಚಲಾವಣೆ ಬಳಿಕ ಮಾತನಾಡಿದ ಪಾರ್ವತಿನಗರದ 90 ವರ್ಷದ ವೃದ್ಧೆ ಕುಮುದಾ, ಈ ಹಿಂದೆ ಹಕ್ಕು ಚಲಾಯಿಸಲು ಮತದಾನ ಕೇಂದ್ರಕ್ಕೆ ತೆರಳಬೇಕಾಗಿತ್ತು. ಆದರೆ, ವಯೋಸಹಜ ಸಮಸ್ಯೆಯಿಂದ ಕೇಂದ್ರಕ್ಕೆ ಹೋಗಲು ಕಷ್ಟವಾಗುತ್ತದೆ. ಈ ಹಿನ್ನಲೆಯಲ್ಲಿ ಮನೆಯಲ್ಲಿಯೇ ಮತದಾನ ಮಾಡುವುದಾಗಿ ತಿಳಿಸಿದ್ದೆವು. ಚುನಾವಣೆ ಅಧಿಕಾರಿಗಳು ಮನೆಗೆ ಬಂದು ಹಕ್ಕು ಚಲಾಯಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ನನಗೆ ನಿಜಕ್ಕೂ ಹೆಚ್ಚು ಸಂತಸವಾಗಿದೆ ಎಂದು ಕನ್ನಡಪ್ರಭಕ್ಕೆ ತಿಳಿಸಿದರು.

ಮತಗಟ್ಟೆಗೆ ತೆರಳಲು ಸಾಧ್ಯವಾಗದ 75 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ ವಿಕಲಚೇತನರಿಗೆ ಮನೆಯಲ್ಲಿಯೇ ಮತದಾನ ಮಾಡುವ ಅವಕಾಶವನ್ನು ಚುನಾವಣೆ ಆಯೋಗ ಕಲ್ಪಿಸಿದೆ.

ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ಕಲ್ಪಿಸಿದ ಚುನಾವಣೆ ಆಯೋಗಕ್ಕೆ ಧನ್ಯವಾದ. ಈ ಹಿಂದೆ ಮಕ್ಕಳು ಮತಕೇಂದ್ರಕ್ಕೆ ಕರೆದುಕೊಂಡು ಹೊಗುತ್ತಿದ್ದರು. ಈ ಬಾರಿ ಅಧಿಕಾರಿಗಳೇ ಮನೆಗೆ ಬಂದು ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಿದ್ದಾರೆ. ಅತ್ಯಂತ ಸಂತಸವಾಗಿದೆ ಎನ್ನುತ್ತಾರೆ 90 ವರ್ಷದ ವೃದ್ಧೆ, ಪಾರ್ವತಿ ನಗರ ಬಳ್ಳಾರಿ ಕುಮುದಾ.