ಬರಗಾಲದ ತೀವೃತೆ ಅರಿತು ಕಾರ್ಯ ನಿರ್ವಹಿಸಿ

| Published : Mar 12 2024, 02:05 AM IST

ಸಾರಾಂಶ

ಹುಕ್ಕೇರಿ: ಪ್ರಸಕ್ತ ವರ್ಷ ಬರಗಾಲ ತೀವೃವಾಗಿದೆ. ಇದರ ಗಾಂಭೀರ್ಯತೆ ಅರಿತು ಅಧಿಕಾರಿಗಳು ಸಮನ್ವಯದಿಂದ ಕೆಲಸ ನಿರ್ವಹಿಸಬೇಕು. ಗ್ರಾಮೀಣ ಜನರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಬೇಕು ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್.ಮಲ್ಲಾಡದ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಪ್ರಸಕ್ತ ವರ್ಷ ಬರಗಾಲ ತೀವೃವಾಗಿದೆ. ಇದರ ಗಾಂಭೀರ್ಯತೆ ಅರಿತು ಅಧಿಕಾರಿಗಳು ಸಮನ್ವಯದಿಂದ ಕೆಲಸ ನಿರ್ವಹಿಸಬೇಕು. ಗ್ರಾಮೀಣ ಜನರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಬೇಕು ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್.ಮಲ್ಲಾಡದ ಸೂಚನೆ ನೀಡಿದರು.

ಇಲ್ಲಿನ ತಾಪಂ ಸಭಾಭವನದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ಎರಡ್ಮೂರು ತಿಂಗಳ ಅವಧಿಯಲ್ಲಿ ಜನಸಾಮಾನ್ಯರಿಗೆ, ಜಾನುವಾರುಗಳಿಗೆ ನೀರು, ಮೇವಿನ ಸಮಸ್ಯೆ ತಲೆದೋರಿದಲ್ಲಿ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಜನಸಾಮಾನ್ಯರ ಅಹವಾಲುಗಳಿಗೆ ಸಹಾನುಭೂತಿಯಿಂದ ಸ್ಪಂದಿಸಬೇಕು ಎಂದರು.ನೀರು ಹಿತಮಿತವಾಗಿ ಬಳಸಿಕೊಳ್ಳಲು ಅರಿವು ಮೂಡಿಸಬೇಕು. ಬರಗಾಲದ ಕಾಮಗಾರಿ ಕೈಗೆತ್ತಿಕೊಂಡು ಶೀಘ್ರವಾಗಿ ಪೂರ್ಣಗೊಳಿಸಬೇಕು. ಅಧಿಕಾರಿಗಳು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ ಸರ್ಕಾರದ ಅನುದಾನ ಸದ್ಬಳಕೆಯಾಗುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ವಾಸ್ತವಾಂಶ ಅರಿಯುವ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು. ಎಲ್ಲ ಮುಂಜಾಗೃತಾ ಕ್ರಮಗಳನ್ನು ಕೈಕೊಂಡು ಬರ ಮತ್ತು ಬೇಸಿಗೆ ದಿನಗಳನ್ನು ಸಮರ್ಥವಾಗಿ ಎದುರಿಸಬೇಕು ಎಂದು ಸೂಚಿಸಿದರು.ಬರಗಾಲ ಹಿನ್ನೆಲೆಯಲ್ಲಿ ದುಡಿಯುವ ಜನರು ಗುಳೆ ಹೋಗದಂತೆ ನರೇಗಾದಲ್ಲಿ ಕೂಲಿ ಕೆಲಸ ನೀಡಬೇಕು. 15ನೇ ಹಣಕಾಸು ಸೇರಿದಂತೆ ಎಲ್ಲ ಯೋಜನೆಗಳನ್ನು ನಿಗದಿತ ಅವಧಿಯಲ್ಲಿ ಅನುಷ್ಠಾನಗೊಳಿಸಬೇಕು. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಬಾಕಿ ಇರುವ ಎಲ್ಲ ಕಡತಗಳನ್ನು ವಿಲೇವಾರಿ ಮಾಡಬೇಕು. ಯಾವುದೇ ಅನುದಾನ ಮರಳಿ ಹೋಗದಂತೆ ನೋಡಿಕೊಳ್ಳಬೇಕು ಎಂದರು.ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಎಇಇ ವಿಜಯ ಮಿಶ್ರಿಕೋಟಿ, ತಾಪಂ ವ್ಯವಸ್ಥಾಪಕ ಅವಿನಾಶ ಹೊಳೆಪ್ಪಗೋಳ, ಯೋಜನಾಧಿಕಾರಿ ಪ್ರಶಾಂತ ಮುನ್ನೋಳಿ, ನರೇಗಾ ಸಹಾಯಕ ನಿರ್ದೇಶಕ ಲಕ್ಷ್ಮೀನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

--- ಬಾಕ್ಸ್ ---

ಪರಿಣಾಮಕಾರಿ ಮತದಾನ ಜಾಗೃತಿ

ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಸ್ವೀಫ್ ತಾಲೂಕು ಸಮಿತಿಯೊಂದಿಗೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಚುನಾವಣಾ ಪರ್ವ-ದೇಶದ ಗರ್ವ ಘೋಷವಾಕ್ಯದಡಿ ಮತದಾನ ಮಹತ್ವ ಸೇರಿದಂತೆ ಹಲವು ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ವಿಶೇಷಚೇತನರ ತ್ರಿಚಕ್ರ ರ್‍ಯಾಲಿ, ವಿದ್ಯಾರ್ಥಿಗಳಿಂದ ಪಾಲಕ-ಪೋಷಕರಿಗೆ ಪತ್ರ ಚಳವಳಿ, ರಂಗೋಲಿ, ಚಿತ್ರಕಲೆ, ಮುಂಜಾನೆ ಮ್ಯಾರಾಥಾನ್, ಯುವ ಮತದಾರರ ನೊಂದಣಿ ಸೇರಿದಂತೆ ಮತ್ತಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.