ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಸರ್ಕಾರದ ವಿವಿಧ ಯೋಜನೆಗಳಡಿ ಫಲಾನುಭವಿಗಳ ಅರ್ಜಿಗಳನ್ನು ಬ್ಯಾಂಕ್‌ಗಳು ಆದ್ಯತೆಯ ನೆಲೆಯಲ್ಲಿ ಪರಿಗಣಿಸಿ ಇತ್ಯರ್ಥಗೊಳಿಸುವಂತೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಆನಂದ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಸಮಾಲೋಚನಾ ಸಮಿತಿ ಹಾಗೂ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವನಿಧಿ ಅರ್ಜಿ ತಿರಸ್ಕಾರ ಯಾಕೆ?:ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಸಾಲ ಸೌಲಭ್ಯದ ಬಹಳಷ್ಟು ಅರ್ಜಿಗಳನ್ನು ಬ್ಯಾಂಕ್‌ಗಳು ತಿರಸ್ಕಾರಗೊಳಿಸಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಡಾ.ಆನಂದ್, ಆರ್ಥಿಕ- ಸಾಮಾಜಿಕವಾಗಿ ತೀರ ಹಿಂದುಳಿದವರಿಗಾಗಿ ಜಾರಿಗೆ ಬಂದಿರುವ ಈ ಯೋಜನೆಯ ಅರ್ಜಿಗಳನ್ನು ತಿರಸ್ಕಾರ ಮಾಡುವುದು ಸರಿಯಲ್ಲ. ಒಂದು ವೇಳೆ ತಿರಸ್ಕಾರ ಮಾಡುವುದಾದರೆ ಅದಕ್ಕೆ ಗಂಭೀರ ಕಾರಣಗಳನ್ನು ನೀಡಬೇಕು ಎಂದು ನಿರ್ದೇಶಿಸಿದರು.
ಸಭೆಯಲ್ಲಿ ಸ್ವನಿಧಿ ಯೋಜನೆಯ ತಿರಸ್ಕೃತ ಅರ್ಜಿಗಳ ಸಂಖ್ಯೆಯನ್ನು ನಮೂದಿಸದ ಬಗ್ಗೆ ಗರಂ ಆದ ಸಿಇಒ, ಇದುವರೆಗೆ ತಿರಸ್ಕೃತವಾದ ಎಲ್ಲ ಅರ್ಜಿಗಳ ವಿಮರ್ಶೆ ನಡೆಸುವಂತೆ ಹಾಗೂ ಮುಂದಿನ ಸಭೆಯಲ್ಲಿ ಸಮಗ್ರ ಮಾಹಿತಿಯೊಂದಿಗೆ ಆಗಮಿಸುವಂತೆ ಸೂಚಿಸಿದರು.ಜನಧನ್ ಖಾತೆ ಸಾಧನೆ ಕುಸಿತ:
ಪ್ರಧಾನಮಂತ್ರಿ ಜನಧನ್ ಖಾತೆಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳ ಕಳಪೆ ಸಾಧನೆ ಕುರಿತು ಸಿಇಒ ಗರಂ ಆದರು. ಜನಧನ್ ಖಾತೆ ತೆರೆಯಲು ನಿಮಗಿರುವ ಸಮಸ್ಯೆಯಾದರೂ ಏನು? ಕೇವಲ ಶೇ.6.9 ಗುರಿ ಸಾಧನೆ ಆಗುತ್ತದೆ ಎಂದರೆ ನಿರ್ದಿಷ್ಟ ಕಾರಣ ಬೇಡವೇ? ಬ್ಯಾಂಕ್‌ಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು. ಪ್ರತಿ ಬ್ಯಾಂಕ್ ಗುರಿ ಸಾಧನೆಯ ಪ್ರಗತಿ ಪರಿಶೀಲನೆಯನ್ನು ಪ್ರತ್ಯೇಕವಾಗಿ ಆಲಿಸಿದ ಅವರು, ಯಾವುದೇ ಕಾರಣಕ್ಕೂ ಗುರಿ ಸಾಧನೆಯಿಂದ ಹಿಂದೆ ಸರಿಯುವಂತಿಲ್ಲ ಎಂದು ಸೂಚಿಸಿದರು.ಪಿಎಂ ಮುದ್ರಾ ಯೋಜನೆಯಡಿ 2023ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 39,385 ಖಾತೆಗಳಲ್ಲಿ 559.54 ಕೋಟಿ ರು. ಸಾಲ ವಿತರಿಸಲಾಗಿದೆ. ಪಿಎಂ ಜೀವನ್ ಜ್ಯೋತಿ ಬಿಮಾ ಯೋಜನೆಯಲ್ಲಿ ಇದೇ ಅವಧಿಯಲ್ಲಿ 1,13,590 ಮಂದಿಯನ್ನು ನೋಂದಣಿ ಮಾಡಲಾಗಿದೆ. ಪಿಎಂ ಸುರಕ್ಷಾ ಬಿಮಾ ಯೋಜನೆಯಡಿ ಇದೇ ಅವಧಿಯಲ್ಲಿ 3,94,238 ಮಂದಿಯನ್ನು ಯೋಜನೆಗೆ ನೋಂದಣಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಅಟಲ್ ಪಿಂಚಣಿ ಯೋಜನೆಯಡಿ ಹೆಚ್ಚಿನ ಬ್ಯಾಂಕ್‌ಗಳು ಗುರಿಯನ್ನು ಮೀರಿ ಸಾಧನೆ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಲಾಯಿತು.
ಆರ್‌ಬಿಐ ಮ್ಯಾನೇಜರ್ ತನು ನಂಜಪ್ಪ, ಕೆನರಾ ಬ್ಯಾಂಕ್ ಎಜಿಎಂ ಆಂಟನಿ ರಾಜ್, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಕವಿತಾ ಶೆಟ್ಟಿ, ನಬಾರ್ಡ್ ಡಿಡಿಎಂ ಸಂಗೀತಾ ಇದ್ದರು.ಬಾಕ್ಸ್ಆನ್ಲೈನ್ ವಂಚನೆ ಬಗ್ಗೆ ಜಾಗೃತಿ
ಬ್ಯಾಂಕ್‌ಗಳ ಎಲ್ಲ ಶಾಖೆಗಳಲ್ಲಿ ನಿಯಮಿತವಾಗಿ ಗ್ರಾಹಕರ ಸಭೆ ನಡೆಸಬೇಕೆಂಬ ನಿಯಮ ಇದ್ದರೂ ದ.ಕ.ದ ಯಾವ ಬ್ಯಾಂಕ್ ಶಾಖೆಯಲ್ಲೂ ಈ ಸಭೆಗಳು ನಡೆಯುತ್ತಿಲ್ಲ ಎಂದು ಆರ್‌ಬಿಐ ಅಧಿಕಾರಿ ತನು ನಂಜಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಸಿಇಒ ಡಾ.ಆನಂದ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆ, ಒಟಿಪಿ ಶೇರ್ ಮಾಡುವ ಮೂಲಕ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಬ್ಯಾಂಕಿಂಗ್ ಸುಭದ್ರತೆ ಕುರಿತು ಗ್ರಾಹಕರಿಗೆ ಜಾಗೃತಿ ಮೂಡಿಸುವುದು ಬ್ಯಾಂಕ್‌ಗಳ ಕರ್ತವ್ಯ. ಪ್ರತಿ ತಿಂಗಳೂ ಗ್ರಾಹಕರ ಸಭೆ ನಡೆಸಿ ಈ ಕುರಿತು ಜಾಗೃತಿ ಮೂಡಿಸುವ ಕಾರ್ಯ ನಡೆಸಬೇಕು ಎಂದು ನಿರ್ದೇಶನ ನೀಡಿದರು.