ಸಾರಾಂಶ
ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ನಂತರ ಮೊದಲ ಬಾರಿಗೆ ಸ್ಟಾರ್ ಚಂದ್ರು ಮಳವಳ್ಳಿಗೆ ಆಗಮಿಸುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಶಕ್ತಿ ತುಂಬಬೇಕು. ಮಾರ್ಚ್ 12ರಂದು ಮಳವಳ್ಳಿ ಪಟ್ಟಣದ ಟಿಎಪಿಸಿಎಂಎಸ್ ಮುಂಭಾಗದ ಆವರಣದಲ್ಲಿ ಸಬೆ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾಮೇಗೌಡ (ಸ್ಟಾರ್ ಚಂದ್ರು) ಮಾರ್ಚ್ 12ರಂದು ಪಟ್ಟಣದ ಟಿಎಪಿಸಿಎಂಎಸ್ ಮುಂಭಾಗದ ಆವರಣದಲ್ಲಿ ನಡೆಯಲಿರುವ ಕಾಂಗ್ರೆಸ್ ಕಾಯರ್ಕರ್ತರ ಸಭೆಗೆ ಆಗಮಿಸಲಿದ್ದಾರೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮನವಿ ಮಾಡಿದರು.ತಾಲೂಕಿನ ಮಾಗನೂರು, ಸಾಸಿಯಾಲಪುರ, ಗಾಣಿಗನಪುರ, ಬಂಡೂರು, ದಡದಪುರ, ಹಿಟ್ಟನಹಳ್ಳಿ ಕೊಪ್ಪಲು, ದೋರನಹಳ್ಳಿ, ಹಳ್ಳದ ಕೊಪ್ಪಲು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರಸ್ತೆ ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರೆವೇರಿಸಿ ಮಾತನಾಡಿದರು.
ಬರಗಾಲದ ನಡುವೆಯೂ ಜನರು ನೆಮ್ಮದಿಯಿಂದ ಬದುಕಲು ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ. ಸಂಕಷ್ಟದಲ್ಲಿರುವ ಜನರ ಜೊತೆ ಇರುವ ಕಾಂಗ್ರೆಸ್ ಪಕ್ಷವನ್ನು ಲೋಕಸಭಾ ಚುನಾವಣೆಯಲ್ಲಿ ಕೈಹಿಡಿಯುತ್ತಾರೆಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ನಂತರ ಮೊದಲ ಬಾರಿಗೆ ಸ್ಟಾರ್ ಚಂದ್ರು ಮಳವಳ್ಳಿಗೆ ಆಗಮಿಸುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಶಕ್ತಿ ತುಂಬಬೇಕೆಂದು ಕೋರಿದರು.
ವಿಶ್ವೇಶ್ವರಯ್ಯ ನಾಲಾ ಆಧುನೀರಣಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಸಂಪೂರ್ಣ ಬಗೆಹರಿಯಲಿದೆ. ಈಗಾಗಲೇ ನೂರಾರು ಕೋಟಿ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿಯೂ ನೀರಾವರಿ, ಶಿಕ್ಷಣ, ಆರೋಗ್ಯ ಸೇರಿದಂತೆ ಗ್ರಾಮೀಣ ರಸ್ತೆ ಮತ್ತು ಕುಡಿಯುವ ನೀರಿಗೆ ಹೆಚ್ಚು ಒತ್ತು ನೀಡಲಾಗುವುವುದು ಎಂದರು.ಈ ವೇಳೆ ಜಿಪಂ ಮಾಜಿ ಸದಸ್ಯರಾದ ಸುಜಾತ ಕೆ.ಎಂ.ಪುಟ್ಟು, ತಾಪಂ ಮಾಜಿ ಉಪಾಧ್ಯಕ್ಷ ಸಿ.ಮಾಧು, ಕೆಪಿಸಿಸಿ ಸದಸ್ಯ ಪುಟ್ಟಸ್ವಾಮಿ, ಟಿಎಪಿಸಿಎಂಎಸ್ ಸದಸ್ಯ ಬಸವೇಶ್, ಮುಂಖಡರಾದ ಟಿ.ಸಿ ಚೌಡಯ್ಯ, ವಿಶ್ವ, ಮನು ಅರಸು, ಜಗದೀಶ್, ಶಾಂತರಾಜು, ಅಂಬರೀಶ್ , ಶಿವಕುಮಾರ್ , ರವೀಂದ್ರ, ಮಹೇಶ್ ಸೇರಿದಂತೆ ಇತರರು ಇದ್ದರು.