ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ: ಡಾ. ಶರಣಪ್ಪ

| Published : Feb 09 2024, 01:49 AM IST

ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ: ಡಾ. ಶರಣಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಿಗೆ ಪಠ್ಯದ ಜೊತೆಗೆ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ಸೃಜನಶೀಲ ಮನಸ್ಸು ಬೆಳೆಯುತ್ತದೆ. ಅದಕ್ಕೆ ಪೋಷಕರು ಮತ್ತು ಶಿಕ್ಷಕರ ಪ್ರೋತ್ಸಾಹ ಅಗತ್ಯ: ಪ್ರೊ. ರಾಜನಳ್ಕರ್ ಲಕ್ಷ್ಮಣ

ಕನ್ನಡಪ್ರಭ ವಾರ್ತೆ ಕಲಬುರಗಿ

ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಣದ ಪಾತ್ರ ಬಹಳ ಮುಖ್ಯ. ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡುವುದು ಶಿಕ್ಷಕರ ಜವಾಬ್ದಾರಿ ಎಂದು ಕುಲಸಚಿವ ಡಾ. ಶರಣಪ್ಪ ಹೇಳಿದರು.

ಗುವಿವಿ ಅಂಬೇಡ್ಕರ್ ಭವನದಲ್ಲಿ ವಿಶ್ವವಿದ್ಯಾಲಯದ ಕನ್ನಡ ಪೂರ್ವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಾರ್ಷಿಕೋತ್ಸವ 2023-24 ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ''''ಏಳಿ ಎದ್ದೇಳಿ ಗುರಿ ಮಟ್ಟುವ ತನಕ ನಿಲ್ಲದಿರಿ'''' ಎಂಬ ಸ್ವಾಮಿ ವಿವೇಕಾನಂದರ ವಾಣಿಯಂತಹ ಮಾತುಗಳ ಪ್ರೇರಣೆ ಅಗತ್ಯವಿದೆ. ಮಕ್ಕಳಲ್ಲಿ ಶಿಸ್ತು ಮತ್ತು ಅಧ್ಯಯನದ ಕಡೆಗೆ ಆಸಕ್ತಿ ಬೆಳೆಸಬೇಕೆಂದರು.

ವಿತ್ತಾಧಿಕಾರಿ ಪ್ರೊ. ರಾಜನಳ್ಕರ್ ಲಕ್ಷ್ಮಣ ಮಾತನಾಡಿ, ಮಕ್ಕಳಿಗೆ ಪಠ್ಯದ ಜೊತೆಗೆ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ಸೃಜನಶೀಲ ಮನಸ್ಸು ಬೆಳೆಯುತ್ತದೆ. ಅದಕ್ಕೆ ಪೋಷಕರು ಮತ್ತು ಶಿಕ್ಷಕರ ಪ್ರೋತ್ಸಾಹ ಅಗತ್ಯ ಎಂದರು.

ಶಾಲಾ ಮೇಲುಸ್ತುಧಾರರಾದ ಡಾ. ಚಂದ್ರಕಾಂತ ಬಿರಾದಾರ ಮಾತನಾಡಿದರು. ಪ್ರಾಥಮಿಕ ಶಾಲೆಯ ಶಿಕ್ಷಕ ಸೂರ್ಯಕಾಂತ್ ಅಮರೆ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಸಿಂಡಿಕೇಟ್ ಸದಸ್ಯ ರಾಘವೇಂದ್ರ ಎಂ ಭೈರಪ್ಪ, ಶಾಲಾ ಸುಧಾರಣಾ ಸಮಿತಿ ಸದಸ್ಯರಾದ ಪ್ರೊ. ದೇವಿದಾಸ ಮಾಲೆ, ಬಿ. ಎಂ. ರುದ್ರವಾಡಿ, ಕಲಬುರಗಿ ದಕ್ಷಿಣ ವಲಯ ಸಮೂಹ ಸಂಪನ್ಮೂಲ ಅಧಿಕಾರಿ ಶ್ರೀಮತಿ ಈರಮ್ಮ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು

ಕನ್ನಡ ಪೂರ್ವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು, ವಿಶ್ವವಿದ್ಯಾಲಯದ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಭಾಗವಹಿಸಿದ್ದರು.