ಸಚಿವ ಮಹಾದೇವಪ್ಪ ಲೋಕಸಭೆ ಸ್ಪರ್ಧೆಗೆ ಒತ್ತಡ ಬೇಡ

| Published : Feb 09 2024, 01:49 AM IST

ಸಾರಾಂಶ

ಒಂದು ವೇಳೆ ಡಾ. ಮಹದೇವಪ್ಪ ಅವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರೇರೇಪಿಸಿದರೆ ವಿವಿಧ ದಲಿತ ಸಂಘಟನೆಗಳು ಜತೆಗೂಡಿ ಬೀದಿಗಿಳಿದು ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಬಳ್ಳಾರಿ: ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹಾದೇವಪ್ಪರನ್ನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಹೇರುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಜಿಲ್ಲಾ ಪ್ರಮುಖರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿಪತ್ರ ರವಾನಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಅವರು ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ರೂಪಿಸಿ ಶೋಷಿತ ಮತ್ತು ತುಳಿತಕ್ಕೊಳಗಾದ ದಮನಿತರ ಸಮುದಾಯಗಳ ಮುನ್ನೆಲೆಗೆ ತರುವ ಮತ್ತು ಅವುಗಳನ್ನು ಜಾರಿಗೆ ತರುತ್ತಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ಬಹುದೊಡ್ಡ ಯಶಸ್ಸು ಮತ್ತು ಶಕ್ತಿಯನ್ನು ತಂದುಕೊಡುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಹೆಚ್ಚು ಸಕ್ರಿಯವಾಗಿ ಶೋಷಿತ ಸಮುದಾಯದ ಪರ ಶ್ರಮಿಸುತ್ತಿರುವ ಎಚ್.ಸಿ. ಮಹಾದೇವಪ್ಪ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಡ ಹಾಕದೆ ಇಲಾಖೆಯ ಸಚಿವರಾಗಿಯೇ ಮುಂದುವರಿಯುವಂತೆ ನೋಡಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮುಖ್ಯಮಂತ್ರಿ ಮಾಡಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಪಕ್ಷದ ಹಿರಿಯ ಮುತ್ಸದ್ಧಿಗಳಾದ ಮಲ್ಲಿಕಾರ್ಜುನ ಖರ್ಗೆ, ಡಾ. ಜಿ. ಪರಮೇಶ್ವರ್ ಅವರ ವಿರುದ್ಧ ರಾಜಕೀಯ ಪಿತೂರಿ ಮಾಡಲಾಯಿತು ಎಂಬ ಆರೋಪ ಕಾಂಗ್ರೆಸ್ ಮೇಲಿದೆ. ಡಾ. ಎಚ್.ಸಿ. ಮಹಾದೇವಪ್ಪ ಅವರನ್ನು ಸಹ ರಾಜ್ಯ ರಾಜಕಾರಣದಿಂದ ಹೊರಹಾಕುವ ರಾಜಕೀಯ ಪಿತೂರಿಗೆ ಆಸ್ಪದ ನೀಡುವುದಿಲ್ಲ. ಒಂದು ವೇಳೆ ಸಚಿವ ಸಂಪುಟದಿಂದ ಕೈ ಬಿಟ್ಟು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರೇರೇಪಿಸಿದರೆ ವಿವಿಧ ದಲಿತ ಸಂಘಟನೆಗಳು ಜತೆಗೂಡಿ ಬೀದಿಗಿಳಿದು ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ವೇದಿಕೆ ಜಿಲ್ಲಾಧ್ಯಕ್ಷ ಧರ್ಮಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಶಂಕರ್ ನಂದಿಹಾಳ್, ಜಿಲ್ಲಾ ಕಾರ್ಯಾಧ್ಯಕ್ಷ ಸಿ. ಹನುಮೇಶ್ ಕಟ್ಟೆಮನಿ, ಬಿ.ಎಂ. ಮಾರೆಪ್ಪ, ಹೊನ್ನಳ್ಳಿಪ್ಪ, ಶೇಖರಪ್ಪ, ರಮೇಶ್ ಚಲವಾದಿ, ಮಲ್ಲಿಕಾರ್ಜುನ ಗೋನಾಳ್ ಮತ್ತಿತರರಿದ್ದರು.