ನಾಡು-ನುಡಿಗೆ ಶ್ರಮಿಸಿದ ಮಹನೀಯರ ಸ್ಮರಿಸಿ: ಎಚ್.ಎಸ್.ರಘು

| Published : Feb 09 2024, 01:49 AM IST

ಸಾರಾಂಶ

ಶಿಕಾರಿಪುರದ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ಹುಲ್ಲತ್ತಿ ಗಣೇಶಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಕರ್ನಾಟಕ ಏಕೀಕರಣಕ್ಕಾಗಿ ಹಲವರು ಹೋರಾಡಿದ್ದು, ಕನ್ನಡ ನಾಡು-ನುಡಿ, ಭಾಷೆಗಾಗಿ ಶ್ರಮಿಸಿದ ಎಲ್ಲ ಮಹನೀಯರನ್ನು ಸ್ಮರಿಸಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್.ರಘು ಸಲಹೆ ನೀಡಿದರು.

ಗುರುವಾರ ಪಟ್ಟಣದ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ನಡೆದ ಹುಲ್ಲತ್ತಿ ಗಣೇಶಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಲವು ಸಾಹಿತಿಗಳು ಹಾಗೂ ಹೋರಾಟಗಾರರ ಹೋರಾಟದ ಫಲವಾಗಿ ಕರ್ನಾಟಕ ಏಕೀಕರಣವಾಗಿದೆ. ಕನ್ನಡ ಭಾಷೆ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಬೆಳೆಸಿಕೊಳ್ಳ ಬೇಕು. ಉನ್ನತ ಅಂಕ ಗಳಿಕೆಗೆ ಮಾತ್ರ ಸೀಮಿತರಾಗದೇ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಪಾಲ್ಗೊಳ್ಳುವ ಅಭಿರುಚಿಯನ್ನು ಬೆಳೆಸಿ ಕೊಳ್ಳಬೇಕು. ಲೇಖಕರಾಗಿ, ಕವಿಗಳಾಗಿ ಹೊರಹೊಮ್ಮಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ ಕನ್ನಡ ನಾಡು, ನುಡಿ ಉಳಿವಿಗಾಗಿ ಶ್ರಮಿಸುತ್ತಿದೆ ಎಂದರು.

ಕರ್ನಾಟಕ ಏಕೀಕರಣ ಚಳವಳಿ ವಿಷಯ ಕುರಿತು ಸರ್ಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಕೆ.ಎಚ್.ಪುಟ್ಟಪ್ಪ ಮಾತನಾಡಿ, ಕನ್ನಡ ನಾಡಿನ ಆಸ್ಮಿತೆ ಉಳಿಸಲು ನಡೆದ ಹೋರಾಟವೇ ಕರ್ನಾಟಕ ಏಕೀಕರಣ ಚಳವಳಿಯಾಗಿದೆ. 22 ಪ್ರಾಂತ್ಯದಲ್ಲಿ ಹಂಚಿಹೋಗಿದ್ದ ಕರ್ನಾಟಕ ಪ್ರದೇಶದ ಎಲ್ಲ ಪ್ರಾಂತ್ಯಗಳನ್ನು ಒಂದುಗೂಡಿಸಿ ಅಖಂಡ ಕರ್ನಾಟಕ ನಿರ್ಮಾಣ ಮಾಡುವ ಹೋರಾಟವೇ ಕರ್ನಾಟಕ ಏಕೀಕರಣವಾಗಿದೆ. ವಿದ್ಯಾರ್ಥಿಗಳು ಏಕೀಕರಣ ಚಳವಳಿ ಬಗ್ಗೆ ಓದಬೇಕು. ನಾಡು ನುಡಿ ಅಸ್ಮಿತೆಗೆ ದಕ್ಕೆ ಬಂದಾಗ ಪ್ರತಿಯೊಬ್ಬರೂ ಹೋರಾಡಲು ಸಿದ್ಧರಾಗಬೇಕು ಎಂದು ಕರೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎಸ್.ಹುಚ್ರಾಯಪ್ಪ ಮಾತನಾಡಿ, ಕನ್ನಡ ಭಾಷೆ ಉಳಿಸಲು ಭಾಷೆ ಬಳಸಬೇಕು. ದಿನಪತ್ರಿಕೆ ಹಾಗೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪೋಷಕರ ಗೌರವ ಹೆಚ್ಚಿಸಲು ಉತ್ತಮ ಫಲಿತಾಂಶ ಮೂಲಕ ಉನ್ನತ ಶಿಕ್ಷಣ ಪಡೆಯಬೇಕು ಎಂದರು.

ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸುರೇಶ್ ಲಮಾಣಿ ಕಾರ್ಯಕ್ರಮ ಉದ್ಘಾಟಿಸಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ಜಡಿಯಪ್ಪ ಪಸಾರದ, ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜು ಉಪನ್ಯಾಸಕರಾದ ಬಂಗಾರಪ್ಪ, ಹಾಲಪ್ಪ, ದಿನಕರ್, ಸುರೇಶ್, ಫಾಹಮಿದ ಬಿ. ಉಪಸ್ಥಿತರಿದ್ದರು.