ಕನ್ನಡಪ್ರಭ ವಾರ್ತೆ ತುಮಕೂರುಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಬೀದಿ ನಾಟಕಗಳ ಮೂಲಕ ಗ್ರಾಮೀಣ ಭಾಗದ ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತಿರುವ ಬೀದಿ ನಾಟಕ ಕಲಾವಿದರನ್ನು ಸರ್ಕಾರ ಕಲಾವಿದರೆಂದು ಗುರುತಿಸಿ, ಅವರನ್ನು ಪ್ರೋತ್ಸಾಹಿಸಲು ಎಲ್ಲಾ ಇಲಾಖೆಗಳ ಐಇಸಿ ಕಾರ್ಯಕ್ರಮಗಳನ್ನು ಬೀದಿ ನಾಟಕ ಕಲಾವಿದರ ಮೂಲಕ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಬೀದಿ ನಾಟಕ ಕಲಾ ತಂಡಗಳ ಒಕ್ಕೂಟದ ತುಮಕೂರು ಜಿಲ್ಲಾಧ್ಯಕ್ಷ ಮಂಜುನಾಥ ದಾಸರಹಳ್ಳಿ ಒತ್ತಾಯಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದಿ ನಾಟಕ ಒಂದು ಪ್ರಬಲ ಮಾಧ್ಯಮವಾಗಿದ್ದು, ಬಹುಬೇಗ ಜನರನ್ನು ತಲುಪುವ, ಪರಿಣಾಮಕಾರಿಯಾದ ಮಾಧ್ಯಮವಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಸರ್ಕಾರ ಜಾಗೃತಿ ಯೋಜನೆಗಳನ್ನು ಪ್ರಸಾರ ಮಾಡಲು ಅವಕಾಶ ಕಲ್ಪಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳ ಇಲಾಖೆಯವರು, ಆಟೋ ಪ್ರಚಾರ, ಎಲ್,ಇ.ಡಿ. ಸ್ಕ್ರೀನ್, ಇನ್ನಿತರ ಡಿಜಿಟೆಲ್ ಮಾಧ್ಯಮಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿರುವ ಸುಮಾರು 6 ಸಾವಿರ ಬೀದಿ ನಾಟಕ ಕಲಾವಿದರು ಕೆಲಸವಿಲ್ಲದೆ, ಜೀವನ ನಡೆಸುವುದು ಕಷ್ಟವಾಗಿದೆ ಎಂದರು. ಕರ್ನಾಟಕ ರಾಜ್ಯ ಬೀದಿ ನಾಟಕ ತಂಡಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜು ಮಂಡ್ಯ ಮಾತನಾಡಿ, ಸಂಘಟನೆಯಿಲ್ಲದೆ ಬೀದಿ ನಾಟಕ ಕಲಾವಿದರನ್ನು ಒಗ್ಗೂಡಿಸಿ 2020ರಲ್ಲಿ ಸಂಘವನ್ನು ಸ್ಥಾಪಿಸಿದ್ದರೂ ಕೆಲ ತಾಂತ್ರಿಕ ಕಾರಣಗಳಿಂದ ಸದಸ್ಯತ್ವ ನೊಂದಣಿ ಸಾಧ್ಯವಾಗಿರಲಿಲ್ಲ. ಕಳೆದ ಏಪ್ರಿಲ್‌ನಿಂದ ರಾಜ್ಯದಲ್ಲಿ ಸದಸ್ಯತ್ವ ನೊಂದಣಿ ಆರಂಭವಾಗಿದೆ. 300 ರು.ನೀಡಿ ಸದಸ್ಯತ್ವ ಪಡೆದುಕೊಳ್ಳಬೇಕು. ಶೀಘ್ರದಲ್ಲಿಯೇ ರಾಜ್ಯಮಟ್ಟದ ಬೀದಿ ನಾಟಕ ಕಲಾವಿದರ ಸಮಾವೇಶ ನಡೆಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಹಿರಿಯರಾದ ಎಚ್.ಎಂ.ರಂಗಯ್ಯ,ಕರ್ನಾಟಕ ರಾಜ್ಯ ಬೀದಿ ನಾಟಕ ಕಲಾ ತಂಡಗಳ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಶಿವರಾಜು, ವಲಯ ಸಂಚಾಲಕ ಶ್ರೀನಿವಾಸ್, ಜಿಲ್ಲಾ ಕಾರ್ಯದರ್ಶಿ ಬಸವರಾಜು ಹೊಸಕೆರೆ, ಉಪಾಧ್ಯಕ್ಷ ಮೋಹನಕುಮಾರ್ ಮಹಿಳಾ ಸಂಚಾಲಕರಾದ ರಂಗಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.