ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ 15 ಜಿಲ್ಲೆಗಳಲ್ಲಿರುವ ಮಾಜಿ ದೇವದಾಸಿಯರ ಮರು ಸಮೀಕ್ಷೆ ನಡೆಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 23,395 ಮಂದಿಯನ್ನು ಗುರುತಿಸಿದ್ದು, ದೇವದಾಸಿಯರು ಹಾಗೂ ಅವರ ಅವಲಂಬಿತರಿಗೆ ಪುನರ್ ವಸತಿ ಕಲ್ಪಿಸಲು ‘ವಿಶೇಷ ಪ್ಯಾಕೇಜ್‌’ ಘೋಷಣೆ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಸಮೀಕ್ಷಾ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದರು.

ವರದಿಯಲ್ಲಿ 15 ಜಿಲ್ಲೆಗಳಲ್ಲಿನ 23,395 ಮಂದಿ ಮಾಜಿ ದೇವದಾಸಿಯರು ಹಾಗೂ ಮೂರು ತಲೆಮಾರಿನ 90,092 ಅವಲಂಬಿತರನ್ನು ಗುರುತಿಸಲಾಗಿದೆ. ಅತಿ ಹೆಚ್ಚು ದೇವದಾಸಿಯರನ್ನು ಹೊಂದಿರುವ ಜಿಲ್ಲೆಗಳ ಪೈಕಿ ಬಾಗಲಕೋಟೆಯಲ್ಲಿ 4,189, ವಿಜಯನಗರ ಜಿಲ್ಲೆಯಲ್ಲಿ 3,876, ಬೆಳಗಾವಿ ಜಿಲ್ಲೆಯಲ್ಲಿ 2,649, ಕೊಪ್ಪಳ ಜಿಲ್ಲೆಯಲ್ಲಿ 2,469, ಬಳ್ಳಾರಿ 2,469 ಮೊದಲ ಐದು ಸ್ಥಾನ ಪಡೆದಿದೆ.

ಸಮೀಕ್ಷೆಯಲ್ಲಿ ಮಾಜಿ ದೇವದಾಸಿಯರ ಹಾಗೂ ಮೂರು ತಲೆಮಾರಿನ ಕುಟುಂಬದವರ ಸಾಮಾಜಿಕ ಸ್ಥಿತಿಗತಿ ಬಗ್ಗೆ ಶೈಕ್ಷಣಿಕ ಮಾಹಿತಿ, ಉದ್ಯೋಗದ ಮಾಹಿತಿ, ಕೃಷಿ ಭೂಮಿ, ಆದಾಯ, ಕೌಶಲ್ಯ ತರಬೇತಿ, ಆರೋಗ್ಯದ ಸ್ಥಿತಿಗತಿ, ಮಾಸಾಶನ ಮಾಹಿತಿ ಹಾಗೂ ಮೂಲ ಸೌಕರ್ಯಗಳ ಕುರಿತು ಮಾಹಿತಿ ನೀಡಲಾಗಿದೆ.


ಪ್ರಮುಖ ಶಿಫಾರಸುಗಳೇನು?:

ದೇವದಾಸಿಯರು ಹಾಗೂ ಅವಲಂಬಿತರಿಗೆ ಪುನರ್‌ವಸತಿ ಕಲ್ಪಿಸಲು ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಿಸಬೇಕು. ಶಾಲಾ-ಕಾಲೇಜುಗಳಲ್ಲಿ ಹಾಗೂ ವಿವಿಧ ಅರ್ಜಿ ನಮೂನೆಗಳಲ್ಲಿ ತಂದೆಯ ಹೆಸರು ನಮೂದಿಸುವ ಕಡ್ಡಾಯ ನಿಯಮದಿಂದ ವಿನಾಯಿತಿ ನೀಡಬೇಕು. ದೇವದಾಸಿಯರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳಿಗೆ ಸೇರಿದವರು ಹೆಚ್ಚಿದ್ದು, ಶಿಕ್ಷಣಕ್ಕಾಗಿ ಆರ್ಥಿಕ ಸಹಾಯ ನೀಡಲು ‘ವಿಶೇಷ ವಿದ್ಯಾರ್ಥಿ ವೇತನ ಯೋಜನೆ’ ಜಾರಿಗೆ ತರಬೇಕು.

ಆಯಾ ವರ್ಗಗಳಿಗೆ ಸಂಬಂಧಿಸಿದ ವಸತಿ ಶಾಲೆಗಳಲ್ಲಿ ಆದ್ಯತೆ ನೀಡಬೇಕು. ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ವಿಶೇಷ ತರಬೇತಿ ನೀಡಬೇಕು. ಚಿಕಿತ್ಸೆಗೆ ಅನುಕೂಲವಾಗಲು ಸರ್ಕಾರದಿಂದ ಒದಗಿಸುವ ವಿವಿಧ ಯೋಜನೆಗಳಡಿ ಆರೋಗ್ಯ ಸೌಲಭ್ಯ ಕಲ್ಪಿಸಬೇಕು. ಇದಕ್ಕಾಗಿ ಆಯುಷ್ಮಾನ್‌ ಕಾರ್ಡ್‌ ವಿತರಿಸಬೇಕು. ಕೌಶಲ್ಯ ಅಭಿವೃದ್ಧಿ ತರಬೇತಿ, ಆರ್ಥಿಕ ಚಟುವಟಿಕೆಗಳಿಗೆ ಸಹಾಯಧನ ನೀಡಿ ಸ್ವಾವಲಂಬಿಗಳಾಗಿ ಬದುಕಲು ವಿಶೇಷ ಕಾರ್ಯಕ್ರಮ ರೂಪಿಸಬೇಕು.

ವಿವಾಹ ಹಾಗೂ ಅಂತರ್‌ಜಾತಿ ವಿವಾಹ ಪ್ರೋತ್ಸಾಹಿಸಲು ಪ್ರೋತ್ಸಾಹ ಧನ ನೀಡಬೇಕು. ಯಾವುದೇ ಕಾರಣಕ್ಕೂ ಸಮಾಜದ ಅನಿಷ್ಠ ಪದ್ಧತಿಗೆ ಸಮರ್ಪಣೆಯಾಗದಂತೆ ಸಮಾಜದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ರಾಜ್ಯದಲ್ಲಿ 10,365 ಲಿಂಗತ್ವ ಅಲ್ಪಸಂಖ್ಯಾತರು: ಸಮೀಕ್ಷಾ ವರದಿ

ಇದೇ ವೇಳೆ ಸಚಿವೆ ಹೆಬ್ಬಾಳ್ಕರ್‌ ಅವರು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿರುವ 2025-26ನೇ ಸಾಲಿನ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷಾ ವರದಿಯನ್ನು ಸಿಎಂಗೆ ಹಸ್ತಾಂತರಿಸಿದರು. 2025ರ ಸೆ.15 ರಿಂದ 31 ಜಿಲ್ಲೆಗಳಲ್ಲಿ ನಡೆದ ಸಮೀಕ್ಷೆ ವೇಳೆ 18 ವರ್ಷ ಮೇಲ್ಪಟ್ಟ 10,250 ಹಾಗೂ 18 ವರ್ಷದೊಳಗಿನ 115 ಮಂದಿ ಲಿಂಗತ್ವ ಅಲ್ಪಸಂಖ್ಯಾತರನ್ನು ಗುರುತಿಸಲಾಗಿದೆ. ಜತೆಗೆ ಸಾಮಾಜಿಕ ತಾರತಮ್ಯ ನಿವಾರಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.ವರದಿ ಸಲ್ಲಿಕೆ ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಶಾಮ್ಲಾ ಇಕ್ಬಾಲ್, ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್ ಬಾಬು ಹಾಜರಿದ್ದರು.