ದೇವದಾಸಿ ಪದ್ಧತಿ ಇಂದಿಗೂ ಚಾಲ್ತಿಯಲ್ಲಿರುವುದು ವಿಷಾದನೀಯ ಸಂಗತಿಯಾಗಿದೆ.

ಬಳ್ಳಾರಿ: ಜಿಲ್ಲೆಯಲ್ಲಿ ದೇವದಾಸಿ ಪದ್ಧತಿ ಇಂದಿಗೂ ಚಾಲ್ತಿಯಲ್ಲಿರುವುದು ವಿಷಾದನೀಯ ಸಂಗತಿಯಾಗಿದೆ. ದೇವರ ಹೆಸರಿನಲ್ಲಿ ನಡೆಯುತ್ತಿರುವ ಅನಿಷ್ಟ ಪದ್ಧತಿಯನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕೆ.ಜಿ.ಶಾಂತಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯತ್‌ನ ಹೊಸ ಅಬ್ದುಲ್ ನಜೀರಸಾಬ್ ಸಭಾಂಗಣದಲ್ಲಿ ಆಯೋಜಿಸಿದ್ದ ದೇವದಾಸಿ ಮಹಿಳೆಯರಿಗೆ ಮತ್ತು ವಿಕಲಚೇತನರಿಗೆ ಸರ್ಕಾರಿ ಸೌಲಭ್ಯಗಳ ಕುರಿತು ಕಾನೂನು ಅರಿವು ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣದ ಕೊರತೆಯಿಂದ ಅಮಾಯಕರು ಬಲಿಯಾಗುತ್ತಿದ್ದಾರೆ. ಈ ಅನಿಷ್ಟ ಪದ್ಧತಿ ನಿರ್ಮೂಲನೆಗೆ ಸರ್ಕಾರ ಹಲವು ಕಾನೂನು ಜಾರಿಗೆ ತಂದಿದೆ. ಆದರೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸದ ಪರಿಣಾಮ ಇದು ಇನ್ನು ಅಸ್ತಿತ್ವದಲ್ಲಿದೆ. ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕು. ಮಾಜಿ ದೇವದಾಸಿಯರಿಗೆ ಸರ್ಕಾರಿ ಸೌಲಭ್ಯಗಳು ದೊರೆಯದಿದ್ದರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನೆರವು ಪಡೆಯಬಹುದು ಎಂದು ಸಲಹೆ ನೀಡಿದರು.

ಮಾಜಿ ದೇವದಾಸಿ ಮಹಿಳೆಯರಿಗೆ ಹಲವಾರು ಸರ್ಕಾರದ ಸೌಲಭ್ಯಗಳಿದ್ದು, ಪುನರ್ವಸತಿ ಯೋಜನೆ (ನಿವೇಶನ/ಮನೆ), ಮಾಸಾಶನ, ಶಿಕ್ಷಣ, ತರಬೇತಿ ಮತ್ತು ಸ್ವಯಂ ಉದ್ಯೋಗ ಸೌಲಭ್ಯ, ಮಕ್ಕಳಿಗೆ ವಿದ್ಯಾರ್ಥಿವೇತನ, ಆರೋಗ್ಯ ಕಿಟ್ ಹಾಗೂ ವಿವಿಧ ದಾಖಲಾತಿಗಳನ್ನು ಸುಲಭಗೊಳಿಸಲಾಗಿದೆ. ಕುಟುಂಬದ ಸಮಗ್ರ ಪುನರ್ವಸತಿಗೆ ವಿಶೇಷ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇವುಗಳ ಸೌಲಭ್ಯ ಪಡೆದು ಉತ್ತಮ ಜೀವನ ನಡೆಸಿ ಮುಖ್ಯವಾಹಿನಿಗೆ ಬರಬೇಕು. ದೇವದಾಸಿ ಪದ್ಧತಿಯನ್ನು ಶ್ಯೂನಕ್ಕೆ ತರಲು ನಾವೆಲ್ಲರೂ ಪಣತೋಡಬೇಕು ಎಂದರು.

ವಿಕಲಚೇತನರು ವಿಶೇಷ ಶಕ್ತಿ ಉಳ್ಳವರು, ಇವರು ಸಮಾಜದ ಒಂದು ಭಾಗವಾಗಿದ್ದು, ಅವರಿಗೆ ಪೋತ್ಸಾಹ ನೀಡಿ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ನೀಡಬೇಕು. ಸರ್ಕಾರಿ ಕಚೇರಿಗಳಲ್ಲಿ ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಅವರಿಗಾಗಿ ವಿಶೇಷ ಕೂರುವ ವ್ಯವಸ್ಥೆ ಮತ್ತ ಉತ್ತಮ ಸೌಲಭ್ಯ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

2011ರ ಜನಗಣತಿಯ ಪ್ರಕಾರ ದೇಶದಲ್ಲಿ ಶೇ.2.91ರಷ್ಟು ಹಾಗೂ ರಾಜ್ಯದಲ್ಲಿ ಶೇ.1.8ರಷ್ಟು ಅಂಗವಿಕಲರಿದ್ದಾರೆ. ವಿಕಲಚೇತನರಿಗೆ ಸರ್ಕಾರದಿಂದ ಹಲವು ಮೂಲಭೂತ ಸೌಲಭ್ಯಗಳಿವೆ. ಉದ್ಯೋಗದಲ್ಲಿ ಶೇ.4 ರಷ್ಟು ಮೀಸಲಾತಿ, ಉಚಿತ ಶಿಕ್ಷಣ, ಸ್ವ-ಉದ್ಯೋಗ ಇನ್ನು ಮುಂತಾದ ಸೌಲಭ್ಯಗಳನ್ನು ಪಡೆದು ಸಲಬರಾಗಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್ ಮಾತನಾಡಿದರು. ಜಿಲ್ಲೆಯಲ್ಲಿ ದೇವದಾಸಿ ಮಹಿಳೆಯರ ಸಮೀಕ್ಷೆಗೆ 4000 ಗುರಿಯನ್ನು ಹೊಂದಿದ್ದು, ಅದರಲ್ಲಿ ಇನ್ನೂ 600ಕ್ಕಿಂತ ಹೆಚ್ಚು ಮಾಜಿ ದೇವದಾಸಿ ಮಹಿಳೆಯರು ಸಮೀಕ್ಷೆಯಲ್ಲಿ ಭಾಗವಹಿಸಿಲ್ಲ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಮೀಕ್ಷೆಯಲ್ಲಿ ಭಾಗವಹಿಸಿ ಎಂದು ಸಿಇಒ ಸುಮೈರ್ ಮನವಿ ಮಾಡಿದರು.

ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ಅಭಿವೃದ್ಧಿ ನಿರೀಕ್ಷಕರು ಹಾಗೂ ಯೋಜನಾಧಿಕಾರಿ ಸುಧಾ ಎಂ.ಚಿದ್ರಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ದೇವದಾಸಿ ಮಹಿಳೆಯರಿಗೆ ಹಾಗೂ ವಿಕಲಚೇತನರಿಗೆ ಸರ್ಕಾರದಿಂದ ಇರುವ ಸೌಲಭ್ಯಗಳು ಮತ್ತು ವಿವಿಧ ಯೋಜನೆಗಳ ಬಗ್ಗೆ ಸಮಗ್ರವಾಗಿ ವಿವರಿಸಿದರು.

ಕಾರ್ಯಾಗಾರದಲ್ಲಿ ಮಾಜಿ ದೇವದಾಸಿ ಮಹಿಳಾ ಫಲಾನುಭಾವಿಗಳಿಗೆ ವಿವಿಧ ಯೋಜನೆಯಡಿ ಚೆಕ್ ಹಾಗೂ ವಿಕಲಚೇತನರಿಗೆ ಹೊಲಿಗೆ ಯಂತ್ರ ಮತ್ತು ಕಿಟ್‌ಗಳನ್ನು ವಿತರಿಸಲಾಯಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ, ಎಸ್ಪಿ ಡಾ.ಶೋಭಾರಾಣಿ ವಿ.ಜೆ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯಕ ಎಂ., ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣಾಧಿಕಾರಿ ಗೋವಿಂದಪ್ಪ ಎಚ್.ಎಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಸವಿತಾ ಸಿ. ಸೇರಿದಂತೆ ಜಿಲ್ಲಾ ನ್ಯಾಯಾಲಯದ ವಿವಿಧ ನ್ಯಾಯಾಧೀಶರು, ವಿವಿಧ ಇಲಾಖೆಯ ಅಧಿಕಾರಿ-ಸಿಬ್ಬಂದಿ ವರ್ಗ, ವಿಕಲಚೇತನರು, ದೇವದಾಸಿ ಮಹಿಳೆಯರು ಇದ್ದರು.